ರಾಚೋಟೇಶ್ವರ ಸ್ವಾಮೀಜಿಯವರ 33 ದಿನದ ಗಾಳಿ-ನೀರಿಲ್ಲದೆ ನಡೆದ ಯೋಗ ಸಮಾಧಿ ಧ್ಯಾನ ಅಂತ್ಯ

KannadaprabhaNewsNetwork |  
Published : Jul 06, 2026, 02:30 AM IST
Swamiji

ಸಾರಾಂಶ

ಜೂ. 3ರಂದು ಶ್ರೀಮಠದಲ್ಲಿ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳ ಶಿವಯೋಗ ಸಮಾಧಿ ಪ್ರಕ್ರಿಯೆ ಆರಂಭವಾಗಿತ್ತು. ಗಾಳಿ-ಬೆಳಕು ಕಿಂಚಿತ್ತೂ ಆಡದಂತೆ ಮಂಟಪದ ಮುಖ್ಯದ್ವಾರಕ್ಕೆ ಕಲ್ಲುಗಳನ್ನಿಟ್ಟು ಸಿಮೆಂಟ್ ಹಾಕಿ ಸಂಪೂರ್ಣವಾಗಿ ಮುಚ್ಚಲಾಗಿತ್ತು.

ಮುಳಗುಂದ: ಅನ್ನ, ನೀರು, ಗಾಳಿ ಸೇವಿಸದೆ 33 ದಿನಗಳ ಕಾಲ (775 ಗಂಟೆ) ಲೋಕ ಕಲ್ಯಾಣಕ್ಕಾಗಿ ಅಂತೂರ- ಬೆಂತೂರ ಗ್ರಾಮದ ಬೂದೀಶ್ವರ ಸಂಸ್ಥಾನ ಮಠದಲ್ಲಿ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಕೈಗೊಂಡಿದ್ದ ಶಿವಯೋಗ ಸಮಾಧಿ ಅನುಷ್ಠಾನ ಭಾನುವಾರ ಅಂತ್ಯಗೊಂಡಿತು.

33ನೇ ದಿನ ಭಾನುವಾರ ಶ್ರೀಮಠದ ಕಲ್ಲಿನ ಮಂಟಪದಲ್ಲಿ ಶಿವಯೋಗ ಸಮಾಧಿಯಲ್ಲಿದ್ದ ಶ್ರೀಗಳನ್ನು ನಾಡಿನ ವಿವಿಧ ಮಠಾಧೀಶರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ದ್ವಾರ ಒಡೆದರು. ಆನಂತರ ಶಿವಯೋಗ ಸಮಾಧಿದಲ್ಲಿದ್ದ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಗರ್ಭಗುಡಿಯಯಿಂದ ಹೊರಬಂದು ಸೇರಿದ್ದ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದರು.

ಮಹದಾಯಿ ಯೋಜನೆ ಶೀಘ್ರವಾಗಿ ಜಾರಿಯಾಗಲಿ, ದೇಶ ಕಾಯುವ ಯೋಧರು ಹಾಗೂ ದೇಶಕ್ಕೆ ಅನ್ನ ನೀಡುವ ರೈತರಿಗೆ ಒಳಿತಾಗಲಿ ಎಂಬ ಉದಾತ್ತ ಲೋಕ ಕಲ್ಯಾಣ ಸಂಕಲ್ಪದೊಂದಿಗೆ ಶ್ರೀಗಳು ಶಿವಯೋಗ ಸಮಾಧಿ ಅನುಷ್ಠಾನ ಕೈಗೊಂಡಿದ್ದರು. ಅನ್ನ, ನೀರು ಸೇವಿಸದೆ, ಗಾಳಿ, ಬೆಳಕು ಇಲ್ಲದ ಕಲ್ಲಿನ ಮಂಟಪದೊಳಗೆ ಶಿವಧ್ಯಾನ, ಯೋಗಸಾಧನೆಯಲ್ಲಿ ನಿರತರಾಗಿದ್ದರು.

ಜೂ. 3ರಂದು ಆರಂಭ:  

ಜೂ. 3ರಂದು ಶ್ರೀಮಠದಲ್ಲಿ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳ ಶಿವಯೋಗ ಸಮಾಧಿ ಪ್ರಕ್ರಿಯೆ ಆರಂಭವಾಗಿತ್ತು. ಗಾಳಿ-ಬೆಳಕು ಕಿಂಚಿತ್ತೂ ಆಡದಂತೆ ಮಂಟಪದ ಮುಖ್ಯದ್ವಾರಕ್ಕೆ ಕಲ್ಲುಗಳನ್ನಿಟ್ಟು ಸಿಮೆಂಟ್ ಹಾಕಿ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಹಠಯೋಗ ಹಾಗೂ ಕಠಿಣ ತಪಸ್ಸಿನ ಮೂಲಕ ಶ್ವಾಸ ನಿಯಂತ್ರಣ (ಪ್ರಾಣಾಯಾಮ) ಸಿದ್ಧಿಸಿಕೊಂಡಿರುವ ಶ್ರೀಗಳು, ಒಂದು ತಿಂಗಳಿಗೂ ಹೆಚ್ಚು ಕಾಲ ಆಹಾರ- ನೀರನ್ನು ಸೇವಿಸದೆ ಯೋಗ ಸಮಾಧಿಯಾಗಿ ಎದ್ದು ಬಂದರು. ಈ ಐತಿಹಾಸಿಕ ಕ್ಷಣಕ್ಕೆ ಅಂತೂರ-ಬೆಂತೂರ ಗ್ರಾಮ ಸಾಕ್ಷಿಯಾಯಿತು.

775 ಶಿವಲಿಂಗು ಪ್ರತಿಷ್ಠಾಪನೆ:  

ಲೋಕ ಕಲ್ಯಾಣಕ್ಕಾಗಿ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಶಿವಯೋಗ ಸಮಾಧಿ ಕೈಗೊಂಡ ನಂತರ ಬೂದೀಶ್ವರ ಸಂಸ್ಥಾನ ಮಠದಲ್ಲಿ ನಿತ್ಯ ಪೂಜಾ ಕಾರ್ಯಗಳು, ಪುರಾಣ- ಪ್ರವಚನ, ಅಹೋರಾತ್ರಿ ಭಜನೆ, ಯಜ್ಞ-ಯಾಗಾದಿಗಳು ನೆರವೇರಿದವು. ಅಲ್ಲದೇ ಶ್ರೀಮಠದ ಆವರಣದಲ್ಲಿ ಭಕ್ತಾದಿಗಳ ಸಹಕಾರದಲ್ಲಿ 775 ಶಿವಲಿಂಗುಗಳನ್ನು ಪ್ರತಿಷ್ಠಾಪಿಸಲಾಗಿದೆ.

ಹರಿದುಬಂದ ಭಕ್ತಸಾಗರ:  

ಶಿವಯೋಗ ಸಮಾಧಿಯಲ್ಲಿದ್ದ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳನ್ನು ಕಣ್ತುಂಬಿಕೊಳ್ಳಲು ಗದಗ ಹಾಗೂ ಹೊರಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ನಿಗದಿತ ಸಮಯದಲ್ಲಿ ಮಂಟಪದ ಬಾಗಿಲು ತೆರೆಯುತ್ತಿದ್ದಂತೆ ನೆರೆದಿದ್ದ ಭಕ್ತ ಸಾಗರ ಹರ ಹರ ಮಹಾದೇವ, ಜೈ ರಾಚೋಟೇಶ್ವರ ಸ್ವಾಮೀಜಿ ಕೀ ಜೈ ಎಂಬ ಜಯಘೋಷಗಳು ಮೊಳಗಿಸಿತು. ಶ್ರೀಗಳಿಗೆ ಅಭಿಷೇಕ ಮಾಡಿಸಲಾಯಿತು. ಆನಂತರ ಶ್ರೀಗಳು ಭಕ್ತರಿಗೆ ದರ್ಶನಾಶೀರ್ವಾದ ಕರುಣಿಸಿದರು.

ಆನಂತರ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ತುಲಾಭಾರ ಸೇವೆ ನೆರವೇರಿತು. ಬಂದ ಭಕ್ತಾದಿಗಳಿಗೆ ಅಲ್ಲಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕಾರ್ಯಕ್ರಮ ಮುಗಿದ ಬಳಿಕ ಶ್ರೀಗಳನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆ ಮಾಡಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನೈಸ್‌ ರಸ್ತೆಯಲ್ಲಿ ಟೋಲ್‌ ಕಟ್ಟಬೇಡಿ: ಕುಮಾರಸ್ವಾಮಿ
ಕೆಪಿಎಸ್ಸಿ ನೇಮಕ ಹಗರಣ : ಮತ್ತೆ ಸಾಹುಕಾರ್‌ ಸಸ್ಪೆಂಡ್‌ಗೆ ಸಚಿವ ಸಂಪುಟ ಶಿಫಾರಸು