ಜಿ ಪ್ಲಸ್‌ 1 ಮನೆ ನಿರ್ಮಾಣದಲ್ಲಿ ಕಳಪೆ ಆರೋಪ, ಲೋಕಾಯುಕ್ತ ತಂಡದಿಂದ ಪರಿಶೀಲನೆ

KannadaprabhaNewsNetwork |  
Published : Oct 29, 2025, 01:30 AM IST
28ಎಚ್‌ವಿಆರ್6- | Kannada Prabha

ಸಾರಾಂಶ

ಹಾವೇರಿ ನಗರದ ನಾಗೇಂದ್ರನಮಟ್ಟಿಯ ಶಾಂತಿ ನಗರದಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ನಿರ್ಮಾಣ ಮಾಡುತ್ತಿರುವ 1112 (ಜಿ ಪ್ಲಸ್‌ 1) ಮನೆಗಳ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂಬ ದೂರಿನ ಮೇರೆಗೆ ಲೋಕಾಯುಕ್ತದ ತಾಂತ್ರಿಕ ತಂಡ ಮಂಗಳವಾರ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಗುಣಮಟ್ಟದ ಕುರಿತು ಅಸಮಾಧಾನ ವ್ಯಕ್ತಪಡಿಸಿತು.

ಹಾವೇರಿ: ನಗರದ ನಾಗೇಂದ್ರನಮಟ್ಟಿಯ ಶಾಂತಿ ನಗರದಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ನಿರ್ಮಾಣ ಮಾಡುತ್ತಿರುವ 1112 (ಜಿ ಪ್ಲಸ್‌ 1) ಮನೆಗಳ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂಬ ದೂರಿನ ಮೇರೆಗೆ ಲೋಕಾಯುಕ್ತದ ತಾಂತ್ರಿಕ ತಂಡ ಮಂಗಳವಾರ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಗುಣಮಟ್ಟದ ಕುರಿತು ಅಸಮಾಧಾನ ವ್ಯಕ್ತಪಡಿಸಿತು.

ಶಾಂತಿ ನಗರದಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ನಿರ್ಮಾಣ ಮಾಡುತ್ತಿರುವ 1112 ಮನೆಗಳ ಸಮುಚ್ಛಯದಲ್ಲಿ ಒಟ್ಟು ಏಳು ಕಟ್ಟಡಗಳಿದ್ದು, ಅವುಗಳಲ್ಲಿ ಬಹುತೇಕ ಎಲ್ಲಾ ಹಂತಗಳಲ್ಲಿ ಕಾಮಗಾರಿ ಕಳಪೆ ಆಗಿದೆ ಎಂದು ಶಕ್ತಿ ಕ್ಯಾತಣ್ಣನವರ ಲೋಕಾಯುಕ್ತರಿಗೆ ದೂರು ಸಲ್ಲಿಸಿ ಅದಕ್ಕೆ ಸಂಬಂಧಿಸಿದ ಕೆಲ ದಾಖಲೆ ಹಾಗೂ ವಿಡಿಯೋಗಳನ್ನು ಲೋಕಾಯುಕ್ತರಿಗೆ ಸಲ್ಲಿಸಿದ್ದರು. ಇದರಲ್ಲಿ ರಾಜೀವ್‌ಗಾಂಧಿ ಹೌಸಿಂಗ್ ಕಾರ್ಪೋರೇಷನ್‌ನ ಎಂ.ಡಿ., ಸಹಾಯಕ ಜನರಲ್ ಮ್ಯಾನೇಜರ್, ಹಾವೇರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಗುತ್ತಿಗೆ ಪಡೆದ ಎರಡು ಸಂಸ್ಥೆಗಳ ವಿರುದ್ಧ ದೂರು ಸಲ್ಲಿಸಿದ್ದರು.ಈ ಕುರಿತು ಪ್ರಥಮ ಹಂತದ ತನಿಖೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಮಂಗಳವಾರ ಲೋಕಾಯುಕ್ತದ ಮುಖ್ಯ ಅಭಿಯಂತರ ಕಚೇರಿಯ ತನಿಖಾ ವಿಭಾಗದಿಂದ ಜೈಬೋರೆಗೌಡ ಎಚ್.ಎಸ್. ಅವರ ನೇತೃತ್ವದ ತಾಂತ್ರಿಕ ತಂಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅದರ ಗುಣಮಟ್ಟ ಪರೀಶೀಲನೆ ನಡೆಸಿತು. ಈ ವೇಳೆ ಕಿಟಕಿಗೆ ಅಳವಡಿಸಿದ್ದ ಕಬ್ಬಿಣದ ಕಟಾಂಜನ ತಲಾ 30 ಕೆಜಿ ಇರುವುದಾಗಿ ಟೆಂಡರ್‌ನಲ್ಲಿ ತಿಳಿಸಿದ್ದು, ಪ್ರಸ್ತುತ ಅದರ ತೂಕ 21.5 ಕೆಜಿ ಇರುವುದನ್ನು ಪತ್ತೆ ಮಾಡಿದ್ದಾರೆ. ಇಂಥ ನೂರಾರು ಕಿಟಕಿಗಳ ಅಳವಡಿಕೆಗೆ ಇಲ್ಲಿ ಆದೇಶ ಪಡೆದಿದ್ದರು ಎಂಬುದನ್ನು ಗಮನಿಸಿದ್ದಾರೆ.

ಇಲ್ಲಿ ಕಟ್ಟಡದ ನಿರ್ಮಾಣದ ಭೀಮ್ ಅಳವಡಿಕೆ, ಪರಸ್ಪರ ಹೊಂದಾಣಿಕೆಯಲ್ಲಿ ವ್ಯತ್ಯಾಸ, ಕಳಪೆ ಚಾವಣಿ ಕಾಮಗಾರಿಯಿಂದ ಸೋರಿಕೆ ಉಂಟಾಗುತ್ತಿದೆ. ಅದೇ ರೀತಿ ಎಲೆಕ್ಟ್ರಿಕಲ್ ಕೆಲಸ ಹಾಗೂ ಪ್ರತಿ ಮನೆಗೆ ನಿರ್ಮಾಣವಾದ ನೀರು ಸಂಗ್ರಹಣಾ ತೊಟ್ಟಿಯ ಅಳತೆಯಲ್ಲಿ ವ್ಯತ್ಯಾಸ ಮತ್ತು ಕಳಪೆ ಕಾಮಗಾರಿ, ಕಟ್ಟಡದ ಒಳ ಮತ್ತು ಹೊರಾಂಗಣ ಫಿನಿಷಿಂಗ್ ಕೆಲಸವನ್ನೂ ಸಹ ಕಳಪೆಯಾಗಿ ನಿರ್ವಹಿಸಿರುವುದು ಕಂಡು ಬಂದಿದೆ ಎನ್ನಲಾಗಿದೆ.

ಲೋಕಾಯುಕ್ತದ ಮುಖ್ಯ ಅಭಿಯಂತರ ಕಚೇರಿಯ ತನಿಖಾ ವಿಭಾಗದ ಜೈಬೋರೆಗೌಡ ಎಚ್.ಎಸ್. ಅವರ ಜತೆಗೆ ರಾಜೀವ್‌ಗಾಂಧಿ ವಸತಿ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರಕಾಶ ಇ.ಪಿ. ಸೇರಿದಂತೆ ಹಲವು ತಾಂತ್ರಿಕ ಮತ್ತು ತನಿಖಾ ಸಿಬ್ಬಂದಿಗಳು ಪರಿಶೀಲನೆಯಲ್ಲಿ ಪಾಲ್ಗೊಂಡಿದ್ದು ಇದು ಬುಧವಾರವೂ ಮುಂದುವರೆಯುವ ನಿರೀಕ್ಷೆ ಇದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ