ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನ ರಸ್ತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆಗೆ ಜಟಾಪಟಿಗಿಳಿದಿದ್ದ ಸಂಸದ ತೇಜಸ್ವಿ ಸೂರ್ಯ ಅವರು ಶಿವಕುಮಾರ್ ಅವರನ್ನು ಭೇಟಿಯಾಗಿ ಸುರಂಗ ಮಾರ್ಗಕ್ಕೆ ಪರ್ಯಾಯ ಯೋಜನೆ ಕುರಿತಂತೆ ಮಾಹಿತಿ ನೀಡಿದರು.ಮಂಗಳವಾರ ಸದಾಶಿವನಗರದ ಶಿವಕುಮಾರ್ ನಿವಾಸದಲ್ಲಿ ಭೇಟಿಯಾದ ತೇಜಸ್ವಿ ಸೂರ್ಯ, ಸುರಂಗ ಮಾರ್ಗದಿಂದ ಎದುರಾಗುವ ಸಮಸ್ಯೆಗಳು ಮತ್ತು ಅದಕ್ಕೆ ಯಾವೆಲ್ಲ ಯೋಜನೆಗಳನ್ನು ಪರ್ಯಾಯವಾಗಿ ಅನುಷ್ಠಾನಗೊಳಿಸಬಹುದು ಎಂಬುದರ ಬಗ್ಗೆ ತಿಳಿಸಿದರು. ಅದಕ್ಕೆ, ತೇಜಸ್ವಿ ಸೂರ್ಯ ನೀಡಿರುವ ಸಲಹೆಗಳ ಪರಿಶೀಲನೆಗೆ ಅಧಿಕಾರಿಗಳಿಗೆ ಶಿವಕುಮಾರ್ ಸೂಚಿಸಿದರು.
ತೇಜಸ್ವಿ ಸೂರ್ಯ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ಅವರು, ಸುರಂಗ ಮಾರ್ಗಕ್ಕೆ ಪರ್ಯಾಯವಾಗಿ ನೀಡಿರುವ ಸಲಹೆಗಳು ನಗರದ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರವಾಗಿ ಕಾಣಲಿಲ್ಲ. ಆದರೂ, ಅವರ ಸಲಹೆಗಳನ್ನು ಗೌರವಿಸುತ್ತೇನೆ ಮತ್ತು ಅವುಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.ಟನಲ್ ರಸ್ತೆ ಕೇವಲ ಕಾರುಗಳಿಗೆ ಅನುಕೂಲವಾಗುತ್ತದೆ. ಮೆಟ್ರೋ ಮಾರ್ಗ ವಿಸ್ತರಿಸಿದರೆ ಪರಿಹಾರ ಸಿಗಲಿದೆ ಎಂದು ತಿಳಿಸಿದ್ದಾರೆ. ಮೆಟ್ರೋ ಮಾರ್ಗ ವಿಸ್ತರಿಸಲು ನಮ್ಮ ತಕರಾರಿಲ್ಲ. ಹಾಗೆಯೇ, ಖಾಸಗಿ ಬಸ್ ಮತ್ತು ಸಣ್ಣ ಬಸ್‌ಗಳ ಸೇವೆಗೆ ಅವಕಾಶ ನೀಡುವಂತೆ ಹೇಳಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದ್ದು, ಖಾಸಗಿ ಬಸ್‌ಗಳಿಗೆ ಅವಕಾಶ ನೀಡಿದರೆ ಏನು ಉಪಯೋಗ ಎಂದು ಚರ್ಚಿಸಬೇಕು ಎಂದು ತಿಳಿಸಿದರು.
ಪ್ರಧಾನಿ ಭೇಟಿಯಾಗಿ ಅನುದಾನ ಕೇಳೋಣ:ತೇಜಸ್ವಿ ಸೂರ್ಯ ಬೆಂಗಳೂರು ಮೆಟ್ರೋ ಲ್ಯಾಂಡ್ ಟ್ರಾನ್ಸ್‌ಪೋರ್ಟ್ (ಬಿಎಂಎಲ್‌ಟಿ) ಮಾಡಬೇಕು ಎಂದಿದ್ದಾರೆ. ಅದಕ್ಕೆ ನಿಮ್ಮ ಕಾಲದಲ್ಲಿ ಅದನ್ನು ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದೆ. ಅದಕ್ಕೆ ಆಗ ಆಗಲಿಲ್ಲ ಎಂದರು. ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಎಷ್ಟು ಅನುದಾನ ಕೊಡಿಸುತ್ತೀರಿ ಎಂದು ಕೇಳಿದೆ. ಜತೆಗೆ ನಿಮ್ಮ ಸಂಸದರೆಲ್ಲ ಬನ್ನಿ. ನಾನೂ ಬರುತ್ತೇನೆ. ಪ್ರಧಾನಿಗಳನ್ನು ಭೇಟಿಯಾಗಿ ಅನುದಾನಕ್ಕಾಗಿ ಒತ್ತಾಯಿಸೋಣ ಎಂದು ಹೇಳಿದ್ದೇನೆ ಎಂದು ಶಿವಕುಮಾರ್ ಹೇಳಿದರು.ಟನಲ್‌ಗೆ ಲಾಲ್‌ಬಾಗ್ ಭೂಮಿ ಸ್ವಾಧೀನವಿಲ್ಲ:ಟನಲ್ ರಸ್ತೆಗೆ ಲಾಲ್‌ಬಾಗ್ ಭೂಮಿ ಬಳಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ. ಆದರೆ, ನಾವು ಲಾಲ್‌ಬಾಗ್‌ನಲ್ಲಿ ಆರು ಎಕರೆ ಭೂಮಿ ಬಳಸಿಕೊಳ್ಳುತ್ತಿಲ್ಲ. ಲಾಲ್‌ಬಾಗ್ ಮೂಲೆಯಲ್ಲಿ ಟನಲ್ ರಸ್ತೆ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದೆ. ಆದರೆ, ಅಲ್ಲಿ ಬೇಡ ಎಂದು ಹೇಳಿದರೆ, ಬೇರೆ ಎಲ್ಲಿ ಅದಕ್ಕೆ ಅವಕಾಶ ಕಲ್ಪಿಸಬಹುದು ಎಂಬ ಸಲಹೆ ನೀಡಿ ಎಂದು ತಿಳಿಸಿದ್ದೇನೆ ಎಂದರು.ನೀವು ಒಬ್ಬರು ಹೇಳಿದಂತೆ ಕೇಳಲಾಗದು:
ವಿದೇಶಗಳಲ್ಲೂ ಟನಲ್ ರಸ್ತೆ ಬೇಡ ಎನ್ನುತ್ತಿದ್ದಾರೆ ಹಾಗೂ ಹೊರ ವರ್ತುಲ ರಸ್ತೆ ಅಭಿವೃದ್ಧಿ, ಉಪನಗರ ರೈಲು ಹೆಚ್ಚಳ ಬಗ್ಗೆಯೂ ತೇಜಸ್ವಿ ಸೂರ್ಯ ಹೇಳಿದ್ದಾರೆ. ಆದರೆ, ನೀವು ಒಬ್ಬರು ಹೇಳಿದಂತೆ ಕೇಳಲು ಆಗುವುದಿಲ್ಲ ಎಂದು ಹೇಳಿದ್ದೇನೆ. ಉಪನಗರ ರೈಲುಗಳ ಸಂಖ್ಯೆ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರದ ಬಳಿ ಅನುದಾನ ಕೇಳೋಣ, ರಾಜ್ಯದವರೇ ಆದ ಸಚಿವ ಸೋಮಣ್ಣ ಅವರ ಜತೆ ಚರ್ಚಿಸಿ, ಹಣ ಕೊಟ್ಟರೆ ಮಾಡೋಣ. ಈವರೆಗೆ ಕೇಂದ್ರ ಸರ್ಕಾರ ಹಣ ನೀಡದ ಕಾರಣ, ಒಂದು ರೈಲೂ ಸೇರಿಲ್ಲ. ಕೇವಲ ಸಲಹೆ ಮಾತ್ರವಲ್ಲ, ಅದಕ್ಕೆ ಪೂರಕವಾಗಿ ಹಣ ತನ್ನಿ ಎಂದು ಹೇಳಿದ್ದೇನೆ ಎಂದರು.ಭೇಟಿಗೆ ಕಾರಲ್ಲಿ ಬಂದಿದ್ರು!:
ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿಸುವಂತೆ ತೇಜಸ್ವಿ ಹೇಳುತ್ತಿದ್ದಾರೆ. ಆದರೆ, ಅವರು ನನ್ನ ಭೇಟಿಗೆ ಬರುವಾಗ ಕಾರಲ್ಲಿ ಬಂದಿದ್ದರು. ಅದನ್ನು ನಾನು ತಡೆಯಲು ಆಗುವುದಿಲ್ಲ. ಬೇಕಿದ್ದರೆ ಸಂಸದರು ತಮ್ಮ ಕ್ಷೇತ್ರದ ಜನರಿಗೆ ಕಾರುಗಳನ್ನು ಬಿಟ್ಟು ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವಂತೆ ಕರೆ ನೀಡಲಿ. ಅದನ್ನು ಯಾರು ಪಾಲಿಸುತ್ತಾರೆ ನೋಡೋಣ. ಸಾಮಾಜಿಕ ಬಾಧ್ಯತೆಗಳ ಬಗ್ಗೆ ಸಂಸದರಿಗೆ ಅರಿವಿಲ್ಲ ಎಂದು ಅಭಿಪ್ರಾಯಪಟ್ಟರು.ಟನಲ್ ರಸ್ತೆ ವಿರುದ್ಧವಾಗಿ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಿಸಿದ್ದಾರೆ. ಟನಲ್ ರಸ್ತೆ ಬಗ್ಗೆ ನ್ಯಾಯಾಲಯವೇ ಸಮಿತಿ ರಚಿಸಿ ಸ್ಥಳಗಳನ್ನು ಪರಿಶೀಲಿಸಲಿ. ನಾನು ಅಥವಾ ನಮ್ಮ ಅಧಿಕಾರಿಗಳು ತಪ್ಪು ಮಾಡಿದ್ದರೆ ತಿಳಿಸಲಿ. ಅದನ್ನು ಸರಿಪಡಿಸಿಕೊಳ್ಳಲು ಸಿದ್ಧರಿದ್ದೇವೆ
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ