ನಾಪೋಕ್ಲು: ಇಲ್ಲಿಗೆ ಸಮೀಪದ ನರಿಯಂದಡ ಗ್ರಾಪಂನ ಚೇಲಾವರ ಗ್ರಾಮದ ಚೇಲಾವರ ಜಲಪಾತ ಹಾಗೂ ಕಬ್ಬೆಬೆಟ್ಟಕ್ಕೆ ಬರುವ ಪ್ರವಾಸಿಗರಿಂದ ಗ್ರಾಮಸ್ಥರಿಗೆ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಚೇಲಾವರದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಚೇಲಾವರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನರಿಯಂದಡ ಗ್ರಾಪಂ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಅಧ್ಯಕ್ಷತೆಯಲ್ಲಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯಿತು.ವಿರಾಜಪೇಟೆ ವಲಯದ ಅರಣ್ಯಧಿಕಾರಿ ಶಿವರಾಮ್ ಮಾತನಾಡಿ, ಕಳೆದ ಐದಾರು ವರ್ಷಗಳ ಹಿಂದೆ ಪ್ರವಾಸಿಗರಿಗೆ ಎಪಿಸಿ ಕ್ಯಾಂಪ್ ಮೂಲಕ ಟಿಕೆಟ್ ವಿತರಿಸಿ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಅದರ ಬಳಿಕ ಕಂದಾಯ ಇಲಾಖೆ ಹಾಗೂ ಗ್ರಾಮಸ್ಥರ ವಿರೋಧದ ನಡುವೆ ಎಪಿಸಿ ಕ್ಯಾಂಪ್ ರದ್ದುಪಡಿಸಲಾಗಿದ್ದು, ಇಲ್ಲಿನ ಗ್ರಾಮಸ್ಥರ ಸಮಸ್ಯೆಗಳ ಬಗ್ಗೆ ಕಂದಾಯ ಇಲಾಖೆ ಹಾಗೂ ತಹಸೀಲ್ದಾರ್ ಗಮನಕ್ಕೆ ತರಲಾಗುವುದು ಎಂದರು.
ನರಿಯಂದಡ ಗ್ರಾಪಂ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಮಾತನಾಡಿ, ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿ ಮುಂದಿನ ದಿನಗಳಲ್ಲಿ ಬೇಕಾದ ಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾಮಸ್ಥರಾದ ನಡಿಕೇರಿಯಂಡ ದೀಲಿಪ್ ಮಾತನಾಡಿ, ಕಬ್ಬೆಬೆಟ್ಟ ಹಾಗೂ ಚೇಲಾವರ ಜಲಪಾತ ಪ್ರವಾಸೋದ್ಯಮಕ್ಕೆ ಒಳಪಟ್ಟಿದೆ. ಇಲ್ಲಿ ಊರಿನವರಿಗೆ ನೆಮ್ಮದಿ ಬೇಕು. ಕಾನೂನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಗ್ರಾಪಂ ಮಾಜಿ ಸದಸ್ಯ ಪ್ರವೀಣ್ ಈರಪ್ಪ, ಪವನ್ (ಮಂಜು), ಪಟ್ಟಚೆರುವಂಡ ಪ್ರತಾಪ್, ವಿಶು, ಸುರೇಶ್ ಕೆ.ಆರ್., ಪ್ರಗತಿಪರ ಕೃಷಿಕ ನಂದ ಕುಮಾರ್, ಲೋಕೇಶ್, ದೇವಿ ಪ್ರಸಾದ್, ಮತ್ತಿತರರು ಗ್ರಾಮಸ್ಥರ ಪರವಾಗಿ ಮಾತನಾಡಿದರು.ನರಿಯಂದಡ ಗ್ರಾಪಂ ಮಾಜಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ವಿರಾಜಪೇಟೆ ಅರಣ್ಯ ಇಲಾಖೆ ಡಿಆರ್ ಎಫ್ಒ ಶ್ರೀನಿವಾಸ್, ನಾಪೋಕ್ಲು ಪೊಲೀಸ್ ಠಾಣೆ ಸಿಬ್ಬಂದಿ, ಮಾಜಿ ಸದಸ್ಯರು, ಗ್ರಾಮಸ್ಥರು, ಸಂಘ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.