ಉಡುಪಿ: ಕಾನೂನು ಉಲ್ಲಂಘಿಸಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ 203 ವಾಹನಗಳನ್ನು ಮಂಗಳವಾರ ಒಂದೇ ದಿನದಲ್ಲಿ ಪತ್ತೆ ಹಚ್ಚಿರುವ ಪೊಲೀಸರು, ಅವುಗಳ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಲಾ ಮಕ್ಕಳನ್ನು ಸಾಗಿಸುವ ಬಸ್, ವ್ಯಾನ್‌ಗಳು, ಆಟೋ ರಿಕ್ಷಾಗಳು ಹಾಗೂ ಇತರೆ ವಾಹನಗಳ ದಾಖಲೆಗಳು, ಫಿಟ್ನೆಸ್ ಪ್ರಮಾಣಪತ್ರ, ವಿಮೆ, ಪರವಾನಗಿ, ಅಗ್ನಿಶಾಮಕ ಉಪಕರಣ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ತುರ್ತು ನಿರ್ಗಮನ ವ್ಯವಸ್ಥೆ ಹಾಗೂ ಮಕ್ಕಳ ಸಂಖ್ಯೆಗಳನ್ನು ತಪಾಸಣೆ ನಡೆಸಲಾಯಿತು.
ಅಲ್ಲದೆ ಸಂಬಂಧಿತ ವಾಹನ ಚಾಲಕರು, ನಿರ್ವಾಹಕರು ಹಾಗೂ ಶಾಲಾ ಆಡಳಿತ ಮಂಡಳಿಯವರಿಗೆ ಶಾಲಾ ಮಕ್ಕಳ ಸುರಕ್ಷತೆಯನ್ನು ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಿ, ಎಲ್ಲ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಯಿತು.71,000 ರು. ದಂಡ: ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 483 ಶಾಲಾ ವಾಹನಗಳನ್ನು ಪರಿಶೀಲಿಸಿ, ನಿಯಮಕ್ಕಿಂತ ಹೆಚ್ಚು ಮಕ್ಕಳನ್ನು ಸಾಗಿಸುತ್ತಿದ್ದ 112 ವಾಹನಗಳನ್ನು, ಸಮವಸ್ತ್ರ ಇಲ್ಲದೆ ವಾಹನ ಚಲಾಯಿಸುತ್ತಿದ್ದ 58 ಚಾಲಕರ ಮತ್ತು ಇತರ ನಿಯಮಗಳನ್ನು ಉಲ್ಲಂಘಿಸಿದ 33 ವಾಹನಗಳು ಸೇರಿ 203 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 71,000 ರು. ದಂಡ ಸಂಗ್ರಹಿಸಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.