ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ವಿಭಾಗದ ಅಲ್ಲಲ್ಲಿ ಲಘು ಪ್ರಮಾಣದ ಗುಡ್ಡ ಕುಸಿತ ಉಂಟಾಗುತ್ತಿದೆ. ಆದರೆ ಇದುವರೆಗೆ ವಾಹನ ಸಂಚಾರಕ್ಕೆ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ .
ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಚಿಕ್ಕಮಗಳೂರು ವಿಭಾಗದ ಅಲ್ಲಲ್ಲಿ ಲಘು ಪ್ರಮಾಣದ ಗುಡ್ಡ ಕುಸಿತ ಉಂಟಾಗುತ್ತಿದೆ. ಆದರೆ ಇದುವರೆಗೆ ವಾಹನ ಸಂಚಾರಕ್ಕೆ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ .
ಕಳೆದ ನಾಲ್ಕಾರು ದಿನಗಳಿಂದ ಘಾಟಿ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಘಾಟಿಯ ಮೇಲ್ಭಾಗದ ನೀರು ಗುಡ್ಡಗಳ ಮೂಲಕ ರಭಸವಾಗಿ ಹರಿದು ಬರುತ್ತಿದೆ. ಇದರಿಂದ ಗುಡ್ಡದ ಮಣ್ಣು ಸಡಿಲಗೊಂಡು ಲಘು ಪ್ರಮಾಣದಲ್ಲಿ ಕುಸಿಯುತ್ತಿದೆ. ಮಣ್ಣು ರಸ್ತೆ ವ್ಯಾಪ್ತಿವರೆಗೆ ಕುಸಿದಿಲ್ಲ. ಘಾಟಿ ರಸ್ತೆಯ ಚರಂಡಿಗಳಲ್ಲಿ ಮಣ್ಣು ತುಂಬುತ್ತಿದೆ. ಬಿದಿರುತಳ ಹಾಗೂ ಅಲ್ಲಲ್ಲಿ ಲಘು ಪ್ರಮಾಣದ ಕುಸಿತ ಉಂಟಾಗಿದ್ದು ಕೆಲವು ಸ್ಥಳಗಳಲ್ಲಿ ಮಣ್ಣಿನೊಂದಿಗೆ ಗುಡ್ಡದಿಂದ ಮರ-ಗಿಡಗಳು ಕುಸಿದು ರಸ್ತೆಗೆ ಅಡ್ಡ ಬಿದ್ದ ಘಟನೆಗಳು ನಡೆದಿವೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಸಮಾಜಸೇವಕರು ಘಾಟಿ ಭಾಗದಲ್ಲಿ ಸಂಚಾರ ವ್ಯತ್ಯಯ ಉಂಟಾಗದಂತೆ ಸಹಕರಿಸುತ್ತಿದ್ದಾರೆ. ಮಳೆ ಹೀಗೆ ಮುಂದುವರೆದರೆ ಘಾಟಿ ಪ್ರದೇಶದ ಅಲ್ಲಲ್ಲಿ ಗುಡ್ಡ ಕುಸಿತ, ಮರಗಳು ರಸ್ತೆಗೆ ಉರುಳುವ ಸಾಧ್ಯತೆ ಹೆಚ್ಚಿದೆ. ಘಾಟಿ ಪ್ರದೇಶದಲ್ಲಿ ದ.ಕ. ಮತ್ತು ಚಿಕ್ಕಮಗಳೂರು ವಿಭಾಗದಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಜೆಸಿಬಿ ಹಾಗೂ ಅಗತ್ಯ ಕಾರ್ಮಿಕರನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.ತುಂಬಿ ಹರಿಯುತ್ತಿರುವ ಹಳ್ಳಗಳು: ಚಾರ್ಮಾಡಿ ಘಾಟಿಯಲ್ಲಿ ಜಲಪಾತ ಹಾಗೂ ಹಳ್ಳಗಳು ತುಂಬಿ ಹರಿಯುತ್ತಿವೆ. ಇವುಗಳನ್ನು ವೀಕ್ಷಿಸಲು ಹಲವಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರವಾಸಿಗರು ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸಿ ನೃತ್ಯ ಮಾಡುವುದು, ಧೂಮಪಾನ, ಮದ್ಯಪಾನದಂತಹ ಅನಗತ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಇತರ ವಾಹನ ಸಂಚಾರರಿಗೆ ತೊಂದರೆ ಉಂಟಾಗುತ್ತಿದೆ. ಅಪಾಯಕಾರಿ ಸ್ಥಳಗಳನ್ನು ಕಲ್ಲು ಬಂಡೆಗಳನ್ನು, ತಡೆಗೋಡೆ ಏರುವ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ.ಘಾಟಿ ಪ್ರದೇಶದಲ್ಲಿ ಪೊಲೀಸರ ಗಸ್ತು ಇದ್ದರೂ ಪ್ರವಾಸಿಗರಿಗೆ ಸಂಪೂರ್ಣ ಕಡಿವಾಣ ಹಾಕಲು ವಿಫಲರಾಗಿದ್ದಾರೆ.
ಘಾಟಿಯಲ್ಲಿ ಸದಾ ಮಂಜು ಕವಿದ ವಾತಾವರಣ ಇರುವುದರಿಂದ ರಸ್ತೆ ಬದಿ, ರಸ್ತೆ ಮಧ್ಯೆ ವಾಹನ ನಿಲ್ಲಿಸುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.