ಸುಳ್ಯ: ಆಯುಷ್ಮಾನ್ ಸೌಲಭ್ಯಗಳನ್ನು ಬಿ.ಪಿ.ಎಲ್.‌ ಕಾರ್ಡ್‌ ಜತೆಗೆ ಎಪಿಎಲ್ ಕಾರ್ಡ್‌ ದಾರರಿಗೂ ಶೀಘ್ರವೇ ವಿಸ್ತರಿಸಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ. ಸುಳ್ಯದ ಕುರುಂಜಿ ಜಾನಕಿ ವೆಂಕಟರಮಣ ಸಭಾಭವನದಲ್ಲಿ ಸೋಮವಾರ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪರಸ್ಪರ ಸಾಮರಸ್ಯದಿಂದ ಬದುಕುವುದು ಕೂಡ ಒಂದು ಪ್ಯಾಕೇಜ್.‌ ಆ ಮೂಲಕ ಅಭಿವೃದ್ಧಿ ಸಾಧಿಸಬೇಕು. ರಾಜಕೀಯ ಎಂಬುದು ಚುನಾವಣೆ ಸಂದರ್ಭದಲ್ಲಿ ಮಾತ್ರ ಓಪನ್‌ ಆಗುವ ಚಾನೆಲ್‌ ನಂತೆ. ಚುನಾವಣೆಯ ಬಳಿಕ ಅದು ಅಭಿವೃದ್ಧಿ ಚಾನೆಲ್‌ ಆಗಿ ಬದಲಾಗಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಸಚಿವರು ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್‌ ದೊರಕಿಸಿಕೊಡಬೇಕು ಎಂದು ಬೇಡಿಕೆ ಮುಂದಿಟ್ಟರು.

ಅಭಿನಂದನಾ ಭಾಷಣ ಮಾಡಿದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್‌ ಮುಂಡೋಡಿ, ಖಾದರ್‌ ಅವರು ತನ್ನ ಜನಪರ ಸೇವೆ ಮತ್ತು ಹೃದಯ ವೈಶಾಲ್ಯತೆಯಿಂದ ಎಲ್ಲರ ಮನ ಗೆದ್ದಿದ್ದಾರೆ ಎಂದರು.

ಕುಕ್ಕೆ ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದ ಮಠಾಧೀಶ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ, ಯು.ಟಿ.ಖಾದರ್‌ ಅವರದು ಜಾತಿ, ಮತ, ಪಕ್ಷ ಮೀರಿದ ವ್ಯಕ್ತಿತ್ವ. ಅವರು ಸಚಿವರಾಗಿ ದಕ್ಷತೆಯಿಂದ ಕಾರ‍್ಯ ನಿರ್ವಹಿಸಿದ್ದಾರೆ ಎಂದರು.


ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಉದ್ಘಾಟನೆ ನೆರವೇರಿಸಿದರು. ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ ಕಮಿಟಿ ಅಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ. ಭಾಗವಹಿಸಿದ್ದರು.

ಪೇರಡ್ಕ ಗೂನಡ್ಕ ಜುಮಾ ಮಸ್ಜಿದ್ ಖತೀಬರಾದ ಅಹಮ್ಮದ್‌ ನಈಮ್ ಮುಅಬರಿ ಫೈಝಿ ಹಾಗೂ ರೆ. ಫಾ. ಆರ‍್ಶ ಡಿಸೋಜ ಆಶೀರ್ವಚನ ನೀಡಿದರು.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ, ತಾಲೂಕು ಪಂಚಾಯಿತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಉದ್ಯಮಿ ಜಿ.ಕೃಷ್ಣಪ್ಪ, ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಎಂ.ಬಿ.ಸದಾಶಿವ, ಉದ್ಯಮಿ ಕೆ. ಕೃಷ್ಣ ಕಾಮತ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ, ಸುದ್ದಿ ಸಮೂಹ ಸಂಸ್ಥೆಗಳ ಮಾಲಕ ಡಾ.ಯು.ಪಿ. ಶಿವಾನಂದ ಅತಿಥಿಗಳಾದ್ದರು.

ಅಭಿನಂದನಾ ಸಮಿತಿ ಸಂಚಾಲಕ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಸ್ವಾಗತಿಸಿದರು. ಶಶಿಧರ ಎಂ.ಜೆ. ಸನ್ಮಾನಪತ್ರ ವಾಚಿಸಿದರು. ದಿನೇಶ್ ಮಡಪ್ಪಾಡಿ ನಿರೂಪಿಸಿದರು. ರಾಧಾಕೃಷ್ಣ ಬೊಳ್ಳೂರು ವಂದಿಸಿದರು.ಅಭಿನಂದನಾ ಸಮಿತಿಯ ಪರವಾಗಿ ಎನ್.ಎ.ರಾಮಚಂದ್ರ, ಡಾ. ಡಿ.ವಿ.ಲೀಲಾಧರ್, ಕೆ.ಎಂ.ಮುಸ್ತಾಫ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಜಾಕೆ ಮಾಧವ ಗೌಡ, ನಿತ್ಯಾನಂದ ಮುಂಡೋಡಿ, ಎ.ವಿ.ತೀರ್ಥರಾಮ, ಎಂ.ವೆಂಕಪ್ಪ ಗೌಡ, ಪಿ.ಸಿ.ಜಯರಾಂ, ಎಸ್. ಸಂಶುದ್ದೀನ್, ಚಂದ್ರಾ ಕೋಲ್ಚಾರ್, ಪಿ.ಎಸ್.ಗಂಗಾಧರ್, ತಹಸೀಲ್ದಾರ್ ಮಂಜುಳಾ, ಇ.ಒ. ರಾಜಣ್ಣ, ಕಿರಣ್ ಬುಡ್ಲೆಗುತ್ತು, ಡಾ. ನಿತಿನ್ ಪ್ರಭು, ಲತಾಶ್ರೀ ಸುಪ್ರೀತ್ ಮೋಂಟಡ್ಕ ವೇದಿಕೆಯಲ್ಲಿದ್ದರು.ಪಕ್ಷ ಬೇಧ ಮರೆತು ಒಂದಾದ ನಾಯಕರು: ಸಾರ್ವಜನಿಕ ಅಭಿನಂದನಾ ಸಮಾರಂಭ ಕಿಕ್ಕಿರಿದ ಜನಸ್ತೋಮದ ನಡುವೆ ಪಕ್ಷ, ಸಂಘಟನೆಗಳ ನಾಯಕರ ಉಪಸ್ಥಿತಿಯಲ್ಲಿ ನಡೆದದ್ದು ವಿಶೇಷವಾಗಿತ್ತು.