ಮಂಗಳೂರು: ಮಹಾತ್ಮಗಾಂಧಿ ಕಂಡ ಕನಸಾದ ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಸ್ವಚ್ಛ ಭಾರತ ಮಿಷನ್‌ ಮೂಲಕ ಜನಾಂದೋಲನವಾಗಿ ರೂಪಿಸಿದರು. ಆರಂಭದಲ್ಲಿ ದೇಶವನ್ನು ಸ್ವಚ್ಛ ಭಾರತದತ್ತ ಕೊಂಡೊಯ್ಯುವುದು ಗುರಿಯಾಗಿದ್ದರೂ, ಅಂತಿಮವಾಗಿ ಭಾರತವನ್ನು ವಿಶ್ವದ ಅತ್ಯಂತ ಸ್ವಚ್ಛ ರಾಷ್ಟ್ರವನ್ನಾಗಿ ರೂಪಿಸುವುದೇ ಗುರಿಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಸುರೇಶ್‌ ಗೋಪಿ ಹೇಳಿದ್ದಾರೆ.

ಸೋಮವಾರ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ವತಿಯಿಂದ ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ಮತ್ತು ರಾಮಕೃಷ್ಣ ಮಠದ ಆಶ್ರಯದಲ್ಲಿ ಕದ್ರಿ ಪಾರ್ಕ್‌ನಲ್ಲಿ ನಡೆದ ಸ್ವಚ್ಛತಾ ಪಖ್ವಾಡ 2026 (ಸ್ವಚ್ಛತಾ ಪಾಕ್ಷಿಕ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸ್ವಚ್ಛತೆ ಎಂಬುದು ಕೇವಲ ಒಂದು ಅಭಿಯಾನವಲ್ಲ, ಅದು ಸಾರ್ವಜನಿಕ ಕರ್ತವ್ಯ. ನಾಗರಿಕ ಮೌಲ್ಯ ಮತ್ತು ಎಲ್ಲರ ಜವಬ್ದಾರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯ ಪರಿಣಾಮ ವಿಶ್ವದ ಅನೇಕ ರಾಷ್ಟ್ರಗಳು ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯತ್ತ ಗಮನಹರಿಸುತ್ತಿದೆ. ಪ್ರಸ್ತುತ ನಡೆಸುತ್ತಿರುವ ಸ್ವಚ್ಛತಾ ಪಖ್ವಾಡಾ ಕಾರ್ಯಕ್ರಮದ ಅಂಗವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಸ್ವತಃ ಭಾಗವಹಿಸುತ್ತೇನೆ ಎಂದರು.

15 ದಿನಗಳ ಅಭಿಯಾನದ ಅವಧಿಯಲ್ಲಿ ಕನಿಷ್ಠ 10 ರಾಜ್ಯಗಳಿಗೆ ಭೇಟಿ ನೀಡಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಉದ್ದೇಶ ಹೊಂದಿದ್ದೇನೆ. ಇತರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಚಿವಾಲಯದ ಇತರೆ ಪ್ರತಿನಿಧಿಗಳು ಈ ಅಭಿಯಾನವನ್ನು ಮುನ್ನಡೆಸಲಿದ್ದಾರೆ. ಸ್ವಚ್ಛತೆ, ಆರೋಗ್ಯ, ಘಟನೆ, ಪ್ರವಾಸೋದ್ಯಮ, ಪರಿಸರ ಮತ್ತು ರಾಷ್ಟ್ರದ ಗೌರವದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವುದು ನಮ್ಮ ಜವಬ್ದಾರಿಯಾಗಿದೆ. ಅಭಿವೃದ್ಧಿ ಜೊತೆಗೆ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಬೇಕಾಗಿದೆ ಎಂದರು.ಮಂಗಳೂರು ದೇಶದ ಅತ್ಯಂತ ಸ್ವಚ್ಛ ನಗರಗಳಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ. ಇದರ ಹಿಂದೆ ಸ್ಥಳೀಯ ಆಡಳಿತ, ಎಂಆರ್‌ಪಿಎಲ್‌, ರಾಕೃಷ್ಣ ಮಠ, ಸಂಘ-ಸಂಸ್ಥೆ, ಸಾರ್ವಜನಿಕರ ನಿರಂತರ ಪರಿಶ್ರಮ ಇದೆ. ಸ್ವಚ್ಛತಾ ಕೆಲಸ ಮಾಡುತ್ತಿರುವವರನ್ನು ಸಮಾಜ ಸದಾ ಗೌರವಿಸಬೇಕಿದೆ ಎಂದರು.

ರಾಮಕೃಷ್ಣ ಮಠದ ಸ್ವಾಮಿ ಜಿತಕಾಮನಂದಜಿ ಮಾತನಾಡಿ, ರಾಮಕೃಷ್ಣ ಮಠ 2015ರಿಂದ ಸ್ವಚ್ಛ ಮಂಗಳೂರು ಅಭಿಯಾನ ಆರಂಭಿಸಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲೂ ಸ್ವಚ್ಛತಾ ಅಭಿಯಾನ ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮಾತನಾಡಿ, ದೇಶದ ಸ್ವಚ್ಛತಾ ನಗರಗಳಲ್ಲಿ ಮಂಗಳೂರು ಸ್ಥಾನ ಪಡೆದಿದೆ. ರಾಮಕೃಷ್ಣ ಮಠ, ಸಂಗ-ಸಂಸ್ಥೆಗಳ ಸ್ವಚ್ಛತಾ ಅಭಿಯಾನದಿಂದ ಇಲ್ಲಿ ಸ್ವಚ್ಛತೆ ಭಾಗವಾಗಿ ಉಳಿದಿದೆ ಎಂದರು.ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಸ್ವಚ್ಛತೆಗೆ ರಾಮಕೃಷ್ಣ ಮಠ ತನ್ನದೇ ಆದ ಕೊಡುಗೆ ನೀಡಿದೆ. ಎಂಆರ್‌ಪಿಎಲ್‌ ಅವರಿಗೆ ಬೆಂಬಲ ನೀಡುತ್ತಿದೆ ಎಂದರು.ಎಂಆರ್‌ಪಿಎಲ್‌ ಎಂಡಿ ಶ್ಯಾಮ್‌ಪ್ರಸಾದ್‌, ಸಂಸ್ಥೆಯ ನಂದಕುಮಾರ್‌ ಪಿಲೈ ಮತ್ತಿತರರು ಇದ್ದರು.ತಾಯಿ ಹೆಸರಲ್ಲಿ ಗಿಡ ನೆಟ್ಟ ಸಚಿವ: ಸಚಿವ ಸುರೇಶ್‌ ಗೋಪಿ ಅವರು ತಮ್ಮ ತಾಯಿ ಜ್ಞಾನಲಕ್ಷ್ಮೀ ಹೆಸರಿನಲ್ಲಿ ಕದ್ರಿ ಪಾರ್ಕ್‌ ಪರಿಸರದಲ್ಲಿ ಮಾವಿನ ಗಿಡ ನಾಟಿ ಮಾಡಿದರು. ಉಪಸ್ಥಿತರಿದ್ದ ಸ್ವಾಮೀಜಿ ಹಾಗೂ ಅತಿಥಿಗಳು ತಮ್ಮ ತಾಯಿಯ ಹೆಸರಿನಲ್ಲಿ ಗಿಡ ನಾಟಿ ಮಾಡಿದರು. ಬಳಿಕ ಸಚಿವರು ಹಾಗೂ ಗಣ್ಯರು ಪೊರಕೆ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸಿದರು.