ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಶನಿವಾರ ತಡರಾತ್ರಿವರೆಗೂ ನಡೆದ ಅಂಚೆ ಮತಗಳ ಎಣಿಕೆ ಬಳಿಕ ನೇರವಾಗಿ ನಗರ ಪೊಲೀಸ್ ಠಾಣೆಗೆ ಆಗಮಿಸಿದ ಸುಧೀರ್ ಅಂಚೆ ಮತಗಳಲ್ಲಿ ಟ್ಯಾಂಪರಿಂಗ್ ನಡೆದಿದೆ ಎಂದು ದೂರು ನೀಡಿದ್ದು, ಪೊಲೀಸರು ದೂರು ದಾಖಲಿಸಿದ್ದಾರೆ. ಈ ವೇಳೆ ಮಾಜಿ ಎಂಎಲ್ ಸಿ ಗಾಯತ್ರಿ ಶಾಂತೇಗೌಡ ಸುಧೀರ್ ಅವರಿಗೆ ಸಾಥ್ ನೀಡಿದರು. ಬಳಿಕ ಟಿ.ಡಿ.ರಾಜೇಗೌಡ ಮತ ಎಣಿಕೆ ಕೇಂದ್ರದಿಂದ ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿದ್ದು ವಿಶೇಷವಾಗಿತ್ತು.
2023ರ ಮತ ಎಣಿಕೆಯಲ್ಲಿ ಟಿ.ಡಿ .ರಾಜೇಗೌಡ ಅವರಿಗೆ ಸಂದಾಯವಾಗಿದೆ 257 ಮಾನ್ಯ ಅಂಚೆ ಮತ ಪತ್ರಗಳಲ್ಲಿ ಈ ಬಾರಿ ಮಲ್ಟಿಪಲ್ ಎಂಟ್ರಿ ಗೋಚರಿಸಿದೆ. ಇದರಿಂದ ಚುನಾವಣಾ ಅಧಿಕಾರಿ ಗೌರವ ಕುಮಾರ್ ಶೆಟ್ಟಿ ಆ ಮತಗಳನ್ನು ಅಸಿಂಧು ಗೊಳಿಸಿದ್ದಾರೆ. ಟಿ,ಡಿ. ರಾಜೇಗೌಡ ಅವರಿಗೆ ಸಂದಾಯವಾಗಿದ್ದ ಈ ಮತಗಳನ್ನು ಅಮಾನ್ಯಗೊಳಿಸಿದ್ದಾರೆ. ರಾಜೇಗೌಡ ಅವರಿಗೆ ಸಂದಾಯವಾಗಿದ್ದ ಒಂದು ಕಟ್ಟಿನ 170 ಮತಗಳನ್ನು ತಿದ್ದುಪಡಿ ಮಾಡಿರುವ ಅನುಮಾನವಿದೆ. 2023ರ ಮತ ಎಣಿಕೆ ಬಳಿಕ ಅಂದಿನ ಚುನಾವಣಾ ಅಧಿಕಾರಿ ವೇದಮೂರ್ತಿ, ಬಿಜೆಪಿ ಅಭ್ಯರ್ಥಿ ಜೀವರಾಜ್ ಹಾಗೂ ಅಂದಿನ ಜಿಲ್ಲಾಧಿಕಾರಿ ರಮೇಶ್ ಹಾಗೂ ಇತರರು ಸೇರಿ ಮತಪೆಟ್ಟಿಗೆ ಸೀಲುಗಳನ್ನು ತೆರೆದು ಅಕ್ರಮ ಎಸೆಗಿರುವ ಅನುಮಾನವಿದೆ. ಹೀಗಾಗಿ ಮರುಮತ ಎಣಿಕೆ ದಿನ ಬೆಳಗ್ಗೆ ಏಳು ಗಂಟೆಗೆ ಆಕ್ಷೇಪಣೆ ಸಲ್ಲಿಸಿದ್ದೇವೆ. ಈ ಹಿನ್ನೆಲೆಯಲ್ಲಿ ವೇದಮೂರ್ತಿ, ಜೀವರಾಜ್ ಹಾಗೂ ರಮೇಶ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಬೇಕು ಎಂದು ದೂರಿನಲ್ಲಿ ಸುಧೀರ್ ಕುಮಾರ್ ಮುರೊಳ್ಳಿ ಒತ್ತಾಯಿಸಿದ್ದಾರೆ.ಫೋಟೋ