ಭದ್ರಾ ಮೇಲ್ದಂಡೆ ಅನುದಾನ ಬಿಡುಗಡೆ ವಿಳಂಬ ಆರೋಪ

KannadaprabhaNewsNetwork |  
Published : Sep 17, 2024, 12:56 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಭದ್ರಾ ಮೇಲ್ದಂಡೆಗೆ ಅನುದಾನ ಬಿಡುಗಡೆ ಮಾಡುವಲ್ಲಿ ಉದಾಸೀನ ತೋರುತ್ತಿರುವ ಕೇಂದ್ರ ಸಚಿವ ವಿ. ಸೋಮಣ್ಣ ಅವರ ತುಮಕೂರು ಕಚೇರಿ ಮುಂಭಾಗ ಅಕ್ಟೋಬರ್ ತಿಂಗಳ ಮೊದಲ ವಾರ ತಮಟೆ ಚಳವಳಿ ನಡೆಸಲಾಗುವುದೆಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಭದ್ರಾ ಮೇಲ್ದಂಡೆಗೆ ಅನುದಾನ ಬಿಡುಗಡೆ ಮಾಡುವಲ್ಲಿ ಉದಾಸೀನ ತೋರುತ್ತಿರುವ ಕೇಂದ್ರ ಸಚಿವ ವಿ. ಸೋಮಣ್ಣ ಅವರ ತುಮಕೂರು ಕಚೇರಿ ಮುಂಭಾಗ ಅಕ್ಟೋಬರ್ ತಿಂಗಳ ಮೊದಲ ವಾರ ತಮಟೆ ಚಳವಳಿ ನಡೆಸಲಾಗುವುದೆಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಹೇಳಿದರು.

ಭದ್ರಾ ಮೇಲ್ದಂಡೆಗೆ ಅನುದಾನ ತರದೆ ನಿದ್ರಾವಸ್ಥೆಗೆ ಜಾರಿರುವ ಜನಪ್ರತಿನಿಧಿಗಳನ್ನು ಎಚ್ಚರಿಸುವ ಸಂಬಂಧ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯಿಂದ ಸೋಮವಾರ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಅವರ ನಿವಾಸದ ಮುಂಭಾಗ ಹಮ್ಮಿಕೊಳ್ಳಲಾದ ತಮಟೆ ಚಳವಳಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆಯಡಿ ತುಮಕೂರು ಶಾಖಾ ಕಾಲುವೆ ಮೂಲಕ 85 ಸಾವಿರ ಹೆಕ್ಟೇರು ಪ್ರದೇಶಕ್ಕೆ ನೀರುಣಿಸಲಾಗುತ್ತಿದೆ. ಸುಮಾರು 131 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಯೋಜನಾ ವ್ಯಾಪ್ತಿಗೆ ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ, ಪಾವಗಡ ತಾಲೂಕು ಸೇರಿದೆ. ತುಮಕೂರು ಜಿಲ್ಲೆ ಪ್ರತಿನಿಧಿಸುತ್ತಿರುವ ಸಂಸದ ವಿ. ಸೋಮಣ್ಣ ಕೇಂದ್ರ ಸರ್ಕಾರದಲ್ಲಿ ಜಲಶಕ್ತಿ ಇಲಾಖೆಯ ಸಹಾಯಕ ಸಚಿವರಾಗಿದ್ದಾರೆ. ಭದ್ರಾ ಮೇಲ್ದಂಡೆ ಜಲಶಕ್ತಿ ವ್ಯಾಪ್ತಿಗೆ ಬರಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಕರ್ನಾಟಕ ಪ್ರತಿನಿಧಿಸುತ್ತಿದ್ದಾರೆ. ಆದರೂ ನಮಗೆ ಮೋಸ ಆಗುತ್ತಿದೆ ಎಂದು ದೂರಿದರು.

ಕೇಂದ್ರ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ಕರ್ನಾಟಕದವರು ನಿರ್ವಹಿಸಿದರೂ ಭದ್ರಾ ಮೇಲ್ದಂಡೆಗೆ ಅನುದಾನ ಬಿಡುಗಡೆಗೆ ಖ್ಯಾತೆ ತೆಗೆಯಲಾಗುತ್ತಿದೆ. ನಮ್ಮವರಿಂದಲೇ ನಮಗೆ ದ್ರೋಹವಾದರೆ, ಯಜಮಾನರುಗಳೇ ಮಕ್ಕಳಿಗೆ ವಿಷ ಉಣಿಸಲು ಮುಂದಾದರೆ ಯಾರ ಬಳಿ ನೋವುಗಳ ತೋಡಿಕೊಳ್ಳಲಿ ಎಂದರು.

ಭದ್ರಾ ಮೇಲ್ದಂಡೆ ಕುಂಠಿತವಾಗಲು ಕಾರಣವಾಗುತ್ತಿರುವವರ ಮನೆ ಮುಂಭಾಗ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ತಮಟೆ ಚಳವಳಿ ಹಮ್ಮಿಕೊಂಡಿದೆ. ಕೇಂದ್ರ ಸಚಿವ ವಿ. ಸೋಮಣ್ಣ ಅವರ ಕಚೇರಿ ಮುಂಭಾಗ ಚಳವಳಿ ನಡೆಸಿ ಈ ದ್ರೋಹ ನ್ಯಾಯವಾ ಎಂದು ಪ್ರಶ್ನಿಸಲಾಗುವುದು. ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ ಹಾಗೂ ಪಾವಗಡ ಭಾಗದ ಜನರು ಹೋರಾಟಕ್ಕೆ ಬೆಂಬಲಿಸುವಂತೆ ಲಿಂಗಾರೆಡ್ಡಿ ಮನವಿ ಮಾಡಿದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿಯು ಪಕ್ಷಾತೀತ ಸಂಘಟನೆಯಾಗಿದ್ದು ಮಧ್ಯಕರ್ನಾಟಕದ ನೀರಾವರಿ ಬೇಡಿಕೆಯನ್ನಷ್ಟೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಂದೆ ಮಂಡಿಸುತ್ತಿದೆ. ಈಗಾಗಲೇ ಸಂಸದ ಗೋವಿಂದ ಕಾರಜೋಳ ಅವರ ನಿವಾಸದ ಮುಂಭಾಗ ಪ್ರತಿಭಟನೆ ನಡೆದಿದೆ. ಸೆಪ್ಟಂಬರ್ 24 ರಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಅವರ ನಿವಾಸದ ಮುಂಭಾಗ ತಮಟೆ ಚಳವಳಿ ನಡೆಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯ ಜವಾಬ್ದಾರಿ ಅರಿತು ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಲಿ ಎಂದು ಬಿ.ಎ. ಲಿಂಗಾರೆಡ್ಡಿ ಒತ್ತಾಯಿಸಿದರು.

ಭದ್ರಾ ಮೇಲ್ದಂಡೆಗೆ 5300 ಕೋಟಿ ಅನುದಾನದ ನೆರವು ಘೋಷಿಸಿರುವ ಕೇಂದ್ರ, ಈ ತಿಂಗಳ ಮೊದಲ ವಾರ ರಾಜ್ಯಕ್ಕೆ ಪತ್ರ ಬರೆದು ಖ್ಯಾತೆ ತೆಗೆದಿದೆ. ಇಲ್ಲಿವರೆಗಿನ ಲೆಕ್ಕ ಕೊಡುವಂತೆ ಸೂಚಿಸಿದೆ. ಮೊದಲು ಘೋಷಿತ ₹5300 ಕೋಟಿ ಅನುದಾನ ನೀಡಿ ಲೆಕ್ಕ ಪಡೆದುಕೊಳ್ಳಲಿ. ರಾಜ್ಯ ಸರ್ಕಾರ ಕೂಡ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸದೆ ತಮ್ಮ ಪಾಲಿನ ಜವಾಬ್ದಾರಿ ಮೆರೆಯಲಿ. ಕುಂಠಿತವಾದ ಕಾಮಗಾರಿಗೆ ವೇಗ ನೀಡಲಿ ಎಂದು ಲಿಂಗಾರೆಡ್ಡಿ ಒತ್ತಾಯಿಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ ಮಾತನಾಡಿ, ರೈತರು ನೀರಾವರಿಗಾಗಿ ಹೊಲ ಮನೆ ಕೆಲಸ ಬಿಟ್ಟು ಬಂದು ಬೀದಿಗಿಳಿಯುತ್ತಿದ್ದಾರೆ. ಬರೀ ಹಗರಣಗಳ ಬಗ್ಗೆ ಆರೋಪ ಮತ್ತು ಪ್ರತ್ಯಾರೋಪ ಮಾಡಿಕೊಂಡು ಸರ್ಕಾರಗಳು ಕಾಲ ಕಳೆಯುತ್ತಿವೆ. ಜನರು ತಮ್ಮನ್ನು ಏಕೆ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಪ್ರಜ್ಞೆ ಜನ ಪ್ರತಿನಿಧಿಗಳಿಗೆ ಇರಬೇಕು ಎಂದರು.ರೈತ ಸಂಘದ ರಾಜ್ಯ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್. ದಯಾನಂದ್, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಗೌರಣ್ಣನವರ, ರೈತ ಸಂಘದ ಉಪಾಧ್ಯಕ್ಷರಾದ ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮುದ್ದಾಪುರ ನಾಗಣ್ಣ, ರೈತ ಸಂಘದ ತಾಲೂಕು ಅಧ್ಯಕ್ಷ ಇಸಾಮುದ್ರ ಪ್ರಭು, ತಾಲೂಕು ಕಾರ್ಯದರ್ಶಿ ಸಿದ್ದೇಶ್ ಜಾನುಕೊಂಡ, ಕಾಂತರಾಜ್ ಹುಣಿಸೆಕಟ್ಟೆ, ಜೆ.ಎನ್. ಕೋಟೆ ಓಂಕಾರಪ್ಪ, ಮೊಳಕಾಲ್ಮೂರು ಮಂಜುನಾಥ್, ಚಳ್ಳಕೆರೆ ಹಂಪಣ್ಣ, ತಮಟಕಲ್ಲು ಸಿದ್ದಪ್ಪ, ಕಲ್ಲೇನಹಳ್ಳಿ ಕುಮಾರ್, ಹಿರಿಯೂರು ಅಧ್ಯಕ್ಷ ಬ್ಯಾಡರಹಳ್ಳಿ ಶಿವಕುಮಾರ್, ಮಹಿಳಾ ಘಟಕದ ನಿತ್ಯಶ್ರೀ, ಲಕ್ಷ್ಮಕ್ಕ, ನಗರಸಭೆ ಮಾಜಿ ಸದಸ್ಯ ಜಿ.ಎನ್. ಲಿಂಗರಾಜ್, ಮುಖಂಡರಾದ ಗೋಪಾಲರೆಡ್ಡಿ, ಲಕ್ಷ್ಮಣರೆಡ್ಡಿ,ಕುಬೇರರೆಡ್ಡಿ, ಡಿ.ಎಸ್. ಹಳ್ಳಿ ತಿಪ್ಪೇಸ್ವಾಮಿ, ನಿವೃತ್ತ ಪ್ರಾಚಾರ್ಯ ಸಂಗೇನಹಳ್ಳಿ ಅಶೋಕ್ ಕುಮಾರ್, ನಿವೃತ್ತ ಡಿವೈಎಸ್ಪಿಗಳಾದ ಎನ್.ಆರ್. ಮಹಾಂತರೆಡ್ಡಿ, ಸೈಯದ್ ಇಸಾಕ್, ಪರಿಸರ ಮತ್ತು ವನ್ಯಜೀವ ಸಂರಕ್ಷಣಾ ವೇದಿಕೆಯ ಮಾಲತೇಶ ಅರಸ್ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ