ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಜ್ಯೋತಿಗೌಡನಪುರ ಗ್ರಾಪಂಯಲ್ಲಿ ಸದಸ್ಯರ ಗಮನಕ್ಕೆ ತರದೇ ಪಿಡಿಒ ₹5 ಲಕ್ಷಕ್ಕೂ ಹೆಚ್ಚು ಹಣ ದುರ್ಬಳಕೆ ಮಾಡಿಕೊಂಡಿರುವುದನ್ನು ವಿರೋಧಿಸಿ 10 ಮಂದಿ ಗ್ರಾಪಂ ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕಾರ ಮಾಡಿ, ಪ್ರತಿಭಟನೆ ನಡೆಸಿ, ಜಿಪಂ ಸಿಇಒಗೆ ಮನವಿ ಸಲ್ಲಿಸಿರುವ ಘಟನೆ ಗುರುವಾರ ನಡೆದಿದೆ.ಜ್ಯೋತಿಗೌಡನಪುರ ಗ್ರಾಪಂ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಪಿಡಿಒ ಚಂದ್ರು 15ನೇ ಹಣಕಾಸು ಯೋಜನೆಯಡಿಯಲ್ಲಿ ಸುಮಾರು 5 ಲಕ್ಷ ರು.ಗಳ ಬಿಲ್ ಅನ್ನು ಕಾಮಗಾರಿ ಮಾಡದೇ ಬಿಲ್ ಪಾವತಿಗಾಗಿ ಸಭೆಗೆ ತಂದಿದ್ದಾರೆ ಎಂದು ಸದಸ್ಯರು ಆರೋಪಿಸಿ, ಪಿಡಿಒ ಹಾಗೂ ಅಧ್ಯಕ್ಷರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಗ್ರಾಪಂ ಉಪಾಧ್ಯಕ್ಷ ಶ್ರೀನಾಥ್ ಮಾತನಾಡಿ, ಯಾವುದೇ ಕಾಮಗಾರಿ ನಿರ್ವಹಣೆ ಮಾಡಬೇಕಾದರೂ ಮೊದಲು ಸಾಮಾನ್ಯ ಸಭೆಯಲ್ಲಿಟ್ಟು ಅನುಮೋದನೆ ಪಡೆದುಕೊಂಡು ಆ ಹಣವನ್ನು ಖರ್ಚು ಮಾಡಬೇಕೆಂಬ ನಿಯಮವಿದೆ. ಆದರೆ, ಪಿಡಿಒ ಚಂದ್ರ ನಿಯಮ ಉಲ್ಲಂಘನೆ ಮಾಡಿ, ಸದಸ್ಯರ ಗಮನಕ್ಕೆ ತರದೇ ಬಿಲ್ ತಯಾರು ಮಾಡಿಕೊಂಡು ಬಂದು ಸಭೆಯ ಮುಂದೆ ಇಟ್ಟಿದ್ದಾರೆ. ಹೀಗಾಗಿ ಇದಕ್ಕೆ ಅನುಮೋದನೆ ನೀಡುವ ಅಗತ್ಯವಿಲ್ಲ ಎಂದು 10 ಮಂದಿ ಸದಸ್ಯರು ಪಿಡಿಒ ವಿರುದ್ದ ತಿರುಗಿಬಿದ್ದರು. ಈ ಕಾಮಗಾರಿಗಳ ನಡೆದಿರುವ ಬಗ್ಗೆ ಉನ್ನತ ಮಟ್ಟದ ತನಿಖೆಯ ನಂತರ ಬಿಲ್ ಪಾವತಿ ಮಾಡಿ ಪಟ್ಟು ಹಿಡಿದರು.ಪಿಡಿಒ ಚಂದ್ರು ಗ್ರಾ.ಪಂ.ಸದಸ್ಯರ ಗಮನಕ್ಕೆ ತರದೇ ಹಾಗೂ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳದೇ ಸುಮಾರು ₹5 ಲಕ್ಷ ಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದೇನೆ ಎಂದು ಇಂದಿನ ಸಭೆಯಲ್ಲಿ ಅನುಮೋದನೆಗೆ ಇಟ್ಟಿದ್ದಾರೆ. ಆದರೆ, ನಮಗೆ ತಿಳಿದಂತೆ ನಮ್ಮ ಸದಸ್ಯರ ಯಾವುದೇ ವಾರ್ಡುಗಳಲ್ಲಿ ಕೆಲಸ ಆಗಿಲ್ಲ. ಜೊತೆಗೆ ಅವರು ಖರೀದಿ ಮಾಡಿರುವ ಬಿಲ್‌ಗಳು ಸಹ ಅನುಮಾನವನ್ನು ಮೂಡಿಸುತ್ತಿವೆ. ಹೀಗಾಗಿ ನಾವೆಲ್ಲರು ಸಭೆಯನ್ನು ಬಹಿಷ್ಕಾರ ಮಾಡಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತಿವೆ ಎಂದರು.
ಸಭೆ ಬಹಿಷ್ಕರಿಸಿ ಪ್ರತಿಭಟನೆ: ಸಭೆಯಲ್ಲಿ ಒಪ್ಪದ ಕಾರಣ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಾಥ್ ಸೇರಿದಂತೆ 10 ಮಂದಿ ಗ್ರಾ.ಪಂ. ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕಾರ ಮಾಡಿ, ಕಚೇರಿ ಮುಂದೆ ಧರಣಿ ಕುಳಿತರು. ಪಿಡಿಒ ವಿರುದ್ದ ಘೋಷಣೆ ಕೂಗಿದರು.ವರ್ಗಾವಣೆಗೆ ಆಗ್ರಹ: ಪಿಡಿಒ ಚಂದ್ರು ಅವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು. 15ನೇ ಹಣಕಾಸು ಯೋಜನೆಯಲ್ಲಿ ಖರ್ಚು ಮಾಡಿರುವ ಲೆಕ್ಕಪತ್ರಗಳ ತಪಾಸಣೆ ಹಾಗೂ ಕಾಮಗಾರಿಗಳ ನಿರ್ವಹಣೆಯಾಗಿರುವ ಬಗ್ಗೆ ಖಾತ್ರಿ ಪಡಿಸಬೇಕು ಎಂಬುವುದು ನಮ್ಮ ಒತ್ತಾಯವಾಗಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಪಿಡಿಓ ವರ್ಗಾಣೆ ಮಾಡಬೇಕು. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯಿತಿ ಅಭಿವೃದ್ದಿ ಮಾಡುವಂತಹ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶ್ರೀನಾಥ, ಮಾಜಿ ಅಧ್ಯಕ್ಷೆ ರಾಜಮ್ಮ, ಸದಸ್ಯರಾದ ನಿಂಗನಾಯಕ, ಮಂಜುನಾಥ್, ಮೀನಾ ವೆಂಕಟೇಶ್, ಚಿಕ್ಕಣ್ಣ, ಮಹದೇವನಾಯಕ, ರಾಜೇಶ, ಚಿಕ್ಕತಾಯಮ್ಮ, ಲೋಕೇಶ, ಎಚ್.ಪಿ.ಲೋಕೇಶ, ಮುಖಂಡರಾದ ಆಟೋ ನಾಗರಾಜು, ಅಟೋ ಮಾದೇಶ, ಗೀರೀಶ್, ವೆಂಕಟೇಶನಾಯಕ, ರಂಗಸ್ವಾಮಿನಾಯಕ, ರಾಜು ಇದ್ದರು.