ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಿಸಿಯೂಟದ ಹುಳ ಬಿದ್ದ ಬೇಳೆ, ಅಕ್ಕಿ ಕಾಳುಗಳಿಂದಲೇ ಸಾಂಬರ್ ಮಾಡಿಸಿ ಮಕ್ಕಳಿಗೆ ಬಡಿಸಿರುವ ಘಟನೆ ಪಟ್ಟಣದ ಮಡಹಳ್ಳಿ ರಸ್ತೆಯ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಬೆಳಕಿಗೆ ಬಂದಿದೆ.ಈ ಸರ್ಕಾರಿ ಶಾಲೆಯ ಮಕ್ಕಳಿಬ್ಬರ ದೂರಿನ ಆಧಾರದ ಮೇಲೆ ಕರವೇ ಕಾರ್ಯಕರ್ತರು ಶಾಲೆಗೆ ಭೇಟಿ ನೀಡಿ ಅಕ್ಕಿ ಹಾಗೂ ಬೇಳೆ ಕಾಳಿದ್ದ ಚೀಲದಲ್ಲಿ ಹುಳಗಳು ಹರಿದಾಡುವ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರು ಕಳೆದ 20 ದಿನಗಳಿಂದ ರಜೆ ಮೇಲೆ ಇದ್ದರು. ಈ ಸಮಯದಲ್ಲಿ ಶಿಕ್ಷಕರ ನಿರ್ಲಕ್ಷ್ಯದ ಹಿನ್ನಲೆ ಮಕ್ಕಳಿಗೆ ಹುಳ ಮಿಶ್ರಿತ ಸಾಂಬಾರು ಬಡಿಸಿದ್ದಾರೆ ಎಂದು ಕರವೇ ಅಧ್ಯಕ್ಷ ಸುರೇಶ್ ನಾಯಕ ಆರೋಪಿಸಿದ್ದಾರೆ. ಹುಳ ಬಿದ್ದ ಸಾಂಬಾರು ತಿಂದು ಶಾಲೆಯ ಮಕ್ಕಳಿಗೇನಾದರೂ ಹೆಚ್ಚುಕಮ್ಮಿ ಆಗಿದ್ದರೇ ಯಾರು ಹೊಣೆ ಹೊರುತ್ತಿದ್ದರು ಎಂದು ಬಿಸಿಯೂಟ ಸಹಾಯಕ ನಿರ್ದೇಶಕರನ್ನು ಪ್ರಶ್ನಿಸಿದ್ದಾರೆ. ಬಿಸಿಯೂಟ ತಯಾರಿಸಲು ಬಳಸುತ್ತಿರುವ ಬೇಳೆ ಕಾಳುಗಳಲ್ಲಿ ಹುಳುಗಳು ಇರುವುದು ಕಂಡು ಬಂತು. ಸಾಂಬಾರಿನಲ್ಲಿ ಹುಳ ಕಂಡ ಮಕ್ಕಳು, ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾರೆ ಎಂದರು.ಅಕ್ಕಿ ಹಾಗೂ ಬೇಳೆ ಚೀಲಗಳಲ್ಲಿ ಹುಳಗಳು ಕಂಡುಬಂದ ಹಿನ್ನೆಲೆ ಮುಖ್ಯ ಶಿಕ್ಷಕರನ್ನು ಕರವೇ ಸದಸ್ಯರು ಪ್ರಶ್ನಿಸಿದಾಗ ಕಳಪೆ ಪದಾರ್ಥದಲ್ಲಿ ಮಕ್ಕಳಿಗೆ ಆಹಾರ ಪದಾರ್ಥ ನೀಡುತ್ತಿರುವುದು ಸರೀನಾ ಎಂದು ಕೇಳಿದರೆ ಶಿಕ್ಷಕರಲ್ಲಿ ಮೌನವೇ ಉತ್ತರವಾಗಿತ್ತು ಎಂದಿದ್ದಾರೆ. ಈ ಕೂಡಲೇ ಈ ಸಂಬಂಧ ಕೂಡಲೇ ಸಂಬಂಧಪಟ್ಟ ಇಲಾಖೆ ಪರಿಶೀಲನೆ ನಡೆಸಿ ಗುಣ ಮಟ್ಟದ ಪದಾರ್ಥ ನೀಡುವುದು ಹಾಗು ಹುಳ ಬಿದ್ದ ಆಹಾರ ಪದಾರ್ಥಗಳನ್ನು ಸ್ಥಳಾಂತರಿಸಬೇಕು ಎಂದಿದ್ದಾರೆ.ಸರ್ಕಾರಿ ಶಾಲೆಯಲ್ಲಿ ಹುಳು ಬಿದ್ದ ಬೇಳೆ, ಅಕ್ಕಿ ಇದೆ. ಹುಳು ಬಿದ್ದ ಬೇಳೆಯಲ್ಲಿ ಸಾಂಬಾರು ಮಾಡಿಲ್ಲ. ಶಾಲೆಯ ಮುಖ್ಯ ಶಿಕ್ಷಕರು ರಜೆಯಲ್ಲಿದ್ದರು. ನಿರ್ವಹಣೆ ಸರಿಯಿಲ್ಲ. ಸಂಬಂಧ ನಾಳೆ ಪರಿಶೀಲನೆ ನಡೆಸಿ, ಹುಳು ಬಿದ್ದ ಅಕ್ಕಿ, ಬೇಳೆ ಇದ್ದರೆ ಬದಲಾಯಿಸಲಾಗುವುದು.ಮಂಜಣ್ಣ, ಬಿಸಿಯೂಟ ಸಹಾಯಕ ನಿರ್ದೇಶಕ