ಕನ್ನಡಪ್ರಭ ವಾರ್ತೆ ಪಾವಗಡ
ಚಿತ್ರದುರ್ಗ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ತಾಲೂಕಿನಿಂದ 75,792 ಮತಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ 61,119 ಮತಗಳಿಸಿ ಪರಾಜಿತರಾಗಿದ್ದಾರೆ.ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಈ ಭಾಗದ ಜೆಡಿಎಸ್ ಬಿಜೆಪಿಯ ಚುನಾವಣೆ ಉಸ್ತುವಾರಿವಹಿಸಿದ್ದರು. ಜೆಡಿಎಸ್, ಬಿಜೆಪಿ ಹಿರಿಯ ಮುಖಂಡರು ಸಂಘಟಿತರಾಗಿ ಪ್ರಚಾರ ನಡೆಸಿದ್ದ ಪರಿಣಾಮ ಹಾಗೂ ಪ್ರಧಾನಿ ನರೇಂದ್ರ ಮೋದಿ ಅಲೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಅಭಿವೃದ್ಧಿಯ ಕಾಳಜಿ ಹಿನ್ನೆಲೆಯಲ್ಲಿ ಬಿಜೆಪಿ ಪರ ಹೆಚ್ಚಿನ ಮತ ಲಭಿಸಿವೆ. ಈ ಚುನಾವಣೆಯ ಫಲಿತಾಂಶ ಮುಂಬರುವ ಜಿಪಂ, ತಾಪಂ ಚುನಾವಣೆಯ ಜೆಡಿಎಸ್, ಬಿಜೆಪಿ ಗೆಲುವಿಗೆ ದಿಕ್ಸೂಚಿಯಾಗಲಿದೆ.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಜನಪರ ಕಾಳಜಿ, ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸಾಮಾಜಿಕ ನ್ಯಾಯ ತತ್ವದ ಹಿನ್ನೆಲೆ ಚುನಾವಣೆಯಲ್ಲಿ ಮತದಾರರು ಗೋವಿಂದ ಕಾರಜೋಳರನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್‌ನಿಂದ ಆಡಳಿತ ವಿರುದ್ಧ ಆಕ್ರೋಶಗೊಂಡ ರಾಜ್ಯದ ಜನತೆ ಬದಲಾವಣೆ ಬಯಸಿರುವುದಕ್ಕೆ ಈ ಚುನಾವಣೆಯ ಗೆಲುವು ಸಾಕ್ಷಿಯಾಗಿದೆ ಎಂದರು.ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ಎ.ಈರಣ್ಣ ಮಾತನಾಡಿ, ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಮತದಾರರ ಮೇಲೆ ಪ್ರಭಾವ ಬೀರಿಲ್ಲ. ಪ್ರಧಾನಿ ಮೋದಿ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಾಯಕತ್ವ ಹಿನ್ನಲೆಯಲ್ಲಿ ಅತ್ಯಧಿಕ ಮತಗಳಿಂದ ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳರ ಗೆಲುವು ಸಾಧ್ಯವಾಗಿದೆ. ಈ ಚುನಾವಣೆಯ ಫಲಿತಾಂಶ ಮುಖಂಡ ಹಾಗೂ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ ಎಂದು ಹೇಳಿದರು.
ರಾಜ್ಯ ಜೆಡಿಎಸ್ ಘಟಕದ ಉಪಾಧ್ಯಕ್ಷ ಎನ್.ತಿಮ್ಮಾರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಮಂಗಳವಾಡ ರಂಗಣ್ಣ, ರವಿಶಂಕರ ನಾಯ್ಕ್ ಮತದಾರರಿಗೆ ಅಭಿನಂದನೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.