ಕನ್ನಡಪ್ರಭ ವಾರ್ತೆ ಗುಬ್ಬಿ
ಪಟ್ಟಣದ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಲ್ ಫೈಟ್ ಎನ್ನಿಸಿದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಮೀಸಲಾತಿ ಈಗಾಗಲೇ ನಿಗದಿಯಾಗಿದೆ. ತಾಲೂಕಿನ ಚೇಳೂರು ಜಿಪಂ ಕ್ಷೇತ್ರ ಓಬಿಸಿ(ಎ) ಮೀಸಲು ನಿಗದಿಯಾಗಿದ್ದು, ಎನ್ ಡಿಎ ಮೈತ್ರಿ ಪಕ್ಷದ ಪ್ರಬಲ ಅಭ್ಯರ್ಥಿಯಾಗಿ ನಾನು ಆಕಾಂಕ್ಷಿಯಾಗಿದ್ದೇನೆ ಎಂದು ಗುಡ್ಡದಹಳ್ಳಿ ಬಸವರಾಜು ತಮ್ಮ ಅಭಿಲಾಷೆ ವ್ಯಕ್ತಪಡಿಸಿದರು.
ಮೂಕ ಪ್ರೇಕ್ಷಕನಾಗಿ ಮತ ಹಾಕುತ್ತಾ ಬಂದಿರುವ ಕಾಡು ಗೊಲ್ಲ ಸಮುದಾಯಕ್ಕೆ ಚೇಳೂರು ಕ್ಷೇತ್ರ ಮಾತ್ರ ಅವಕಾಶ ಒದಗಿಸಿದೆ. ಸಿಕ್ಕಿದ ಈ ಸ್ಥಾನಕ್ಕೆ ಕಳೆದ 32 ವರ್ಷದಿಂದ ಬಿಜೆಪಿ ಸಂಘಟನೆ ಮಾಡಿರುವ ನನಗೆ ಪಕ್ಷ ಟಿಕೆಟ್ ನೀಡಿ ಗೆಲುವಿಗೆ ಅವಕಾಶ ಮಾಡಿಕೊಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮೈತ್ರಿ ಪಕ್ಷದಲ್ಲಿ ಬಿಜೆಪಿ- ಜೆಡಿಎಸ್ ಪಕ್ಷಗಳ ಸ್ಥಳೀಯ ಅಭ್ಯರ್ಥಿಗಳಿಗೆ ಮಾನ್ಯತೆ ನೀಡಿ. ಹೊರಗಿನಿಂದ ಬರುವ ಅಭ್ಯರ್ಥಿಗಳು ನಂತರದಲ್ಲಿ ಮಾಯವಾಗುತ್ತಾರೆ. ನಾನು ಕೂಡ ಜಿ.ಎಸ್.ಬಸವರಾಜು ಅವರ ಹಿಂಬಾಲಕರಿಗೆ ಬಿಜೆಪಿ ಸಂಘಟನೆಗೆ ದುಡಿದಿದ್ದೇನೆ. ಹಿಂದುಳಿದ ವರ್ಗ ಮೀಸಲಾತಿ ಪೈಕಿ ಕಾಡು ಗೊಲ್ಲ ಸಮುದಾಯಕ್ಕೆ ಅವಕಾಶ ಸಿಕ್ಕಿರುವುದು ಈ ಚೇಳೂರು ಕ್ಷೇತ್ರದಲ್ಲಿ ಮಾತ್ರ. ಈ ನಿಟ್ಟಿನಲ್ಲಿ ಈ ಹಿಂದೆ ಕೂಡ ಟಿಕೆಟ್ ಆಕಾಂಕ್ಷಿಯಾಗಿ ಪ್ರಯತ್ನ ಮಾಡಿದ್ದೆ. ಈ ಬಾರಿ ನನ್ನ ಮೇಲೆ ಪಕ್ಷ ವಿಶ್ವಾಸ ಇಟ್ಟು ಟಿಕೆಟ್ ನೀಡುವ ಭರವಸೆ ಇದೆ ಎಂದರು.
ಮೂರು ದಶಕದ ಪಕ್ಷ ಸಂಘಟನೆ, ಎಲ್ಲಾ ಚುನಾವಣೆಯಲ್ಲಿ ಪ್ರಾಮಾಣಿಕ ಪರಿಶ್ರಮ, ಎಲ್ಲಾ ವರ್ಗದ ಸಮುದಾಯದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ ಹಾಗೂ ಸ್ಥಳೀಯ ಎಂಬ ಮಾನದಂಡ ಎಲ್ಲದಕ್ಕೂ ಅರ್ಹತೆ ಇರುವ ಕಾರಣ ನನಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿದ ಅವರು, ಬಡ ಸಮುದಾಯ ಕಾಡುಗೊಲ್ಲರು ಈಗಾಗಲೇ ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದ ವರ್ಗವಾಗಿದೆ. ರಾಜಕೀಯ ಪ್ರಾತಿನಿಧ್ಯ ಮೈತ್ರಿ ಪಕ್ಷದಿಂದ ದೊರೆಯಲಿ ಎಂದು ಆಶಿಸಿದರು.