ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಡೀಸಿ ಕಚೇರಿ ಎದುರು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರು, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ್ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಅಧಿಕಾರಿಗಳ ಮೂಲಕ ವಿರೋಧ ಪಕ್ಷಗಳವರನ್ನು ಮಟ್ಟ ಹಾಕಲು ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಿದ್ದಾರೆ. ಜಿಲ್ಲಾ ಸಹಕಾರ ಸಂಘದ ಸದಸ್ಯರನ್ನು ಸಂಘದ ಮೇಲಾಧಿಕಾರಿಗಳನ್ನು ಬಳಸಿಕೊಂಡು ಅನರ್ಹತೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಿಡಿಪಿಒ ಆಗಲೂ ಲಾಯಕ್ಕಿಲ್ಲದ ನಾಗಭೂಷಣ್ ಎಂಬ ಅಧಿಕಾರಿಯನ್ನು ಜಿಲ್ಲಾ ಉಸ್ತುವಾರಿ ಚಲುವರಾಯಸ್ವಾಮಿ ಅವರಿಗೆ ಬಕೆಟ್ ಹಿಡಿಯುತ್ತಾನೆ ಎಂಬ ಕಾರಣಕ್ಕೆ ಸರ್ಕಾರ ಆತನಿಗೆ ಪಾಂಡವಪುರ ತಾಲೂಕು ಸಹಕಾರ ಸಂಘಗಳ ಸಹಾಯಕ ನಿಬಂಧಕನನ್ನಾಗಿ ನೇಮಕ ಮಾಡಿದೆ. ಅಲ್ಲದೇ, ಮದ್ದೂರು ತಾಲೂಕು ಹಾಗೂ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರ ಅಧಿಕಾರ ನೀಡಲಾಗಿದೆ ಎಂದು ಛೇಡಿಸಿದರು.
ನಿಮ್ಮಂತಹ ಅಧಿಕಾರಿಗಳನ್ನು ಬಹಳ ಜನ ನೋಡಿದ್ದೀನಿ. ಐಎಎಸ್, ಐಪಿಎಸ್ ಅಧಿಕಾರಿಗಳ ಜೊತೆ ನಾನೂ ಕೆಲಸ ಮಾಡಿದ್ದೇನೆ. ವಿರೋಧಿಗಳಿಗೂ ನೋವು ಆಗದ ಹಾಗೆ ಕೆಲಸ ಮಾಡಿದ್ದೀವಿ. ತಾಲೂಕಿನ ಹುಲ್ಕೆರೆಕೊಪ್ಪಲು ಗ್ರಾಮದ ಡೈರಿ ಸಭೆ ನಡೆಸಲು ಕೋರಂ ಅಭಾವವಿದ್ದರೂ ಸಭೆ ನಡೆಸಲು ಹೋಗಿ ಒಬ್ಬ ಅಮಾಯಕ ಮಹಿಳೆ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾಳೆ, ನಿಮಗೆ ನಾಚಿಕೆ ಆಗಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ:
ಜಿಲ್ಲಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡದೇ ಇದ್ದರೆ ನಾಳೆಯಿಂದ ಜಿಲ್ಲೆಯಲ್ಲಿ ಆಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ ಆಗಬೇಕಾಗುತ್ತದೆ. ಸರ್ಕಾರ ಬರುತ್ತವೆ, ಹೋಗುತ್ತವೆ. ಆದರೆ, ಜಿಲ್ಲಾಧಿಕಾರಿಗಳು ನ್ಯಾಯಯುತ ಹಾಗೂ ಕಾನೂನುಬದ್ಧವಾಗಿ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಆಗ್ರಹಿಸಿದರು.
ಕೆ.ಆರ್. ಪೇಟೆ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಮಾತನಾಡಿ, ಸಹಕಾರಿ ವ್ಯವಸ್ಥೆಯಲ್ಲಿ ಸಣ್ಣಪುಟ್ಣ ನ್ಯೂನತೆಗಳನ್ನು ಸರ್ಕಾರ ಅಧಿಕಾರಿಗಳನ್ನು ಬಳಸಿಕೊಂಡು ದೊಡ್ಡದು ಮಾಡಿ ಸದಸ್ಯತ್ವವನ್ನು ರದ್ದುಪಡಿಸುತ್ತಿದೆ. ಎಆರ್ ಹಾಗೂ ಡಿಆರ್ ಎರಡೂ ಅಧಿಕಾರವನ್ನು ನಾಗಭೂಷಣ್ ಅವರೇ ನಿರ್ವಹಿಸುತ್ತಿದ್ದಾರೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್, ಮಾಜಿ ಶಾಸಕರಾದ ಡಾ.. ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಹಾಲಿ ಉಪಾಧ್ಯಕ್ಷ ಎಂ.ಎಸ್.ರಘುನಂದನ್, ನಿರ್ದೇಶಕಿ ರೂಪಾ, ಚಿಕ್ಕತಿಮ್ಮೇಗೌಡ, ಸಿ.ಟಿ.ಮಂಜುನಾಥ್, ಅರವಿಂದ್ , ಶ್ರೀಧರ್ ಸೇರಿದಂತೆ ಜಾ.ದಳ ಹಾಗೂ ಬಿಜೆಪಿಯ ನೂರಾರು ಮಂದಿ ಭಾಗವಹಿಸಿದ್ದರು.
ಮಂಡ್ಯ:
ಅಧಿಕಾರಿಗಳ ಮೂಲಕ ವಿರೋಧಿಗಳನ್ನು ದಮನ ಮಾಡಲು ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರ, ಮಂತ್ರಿಗಳು ಬೆಳಗಾವಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಪೂಜಿಸಿ ಆರಾಧಿಸುತ್ತಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಿಡಿಕಾರಿದರು.ಸಹಕಾರ ಸಂಘಗಳ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ-ನಿಮ್ಮ ನಡುವೆ ಒಂದು ರೀತಿ ಯುದ್ಧ ಪ್ರಾರಂಭವಾಗಿದೆ. ಈ ಯುದ್ಧದಲ್ಲಿ ಯಾವ ರೀತಿ ವಿರೋಧಿಗಳ ಕಾಲನ್ನು ಎಳೆಯಲು, ಮಣಿಸಲು ಒಳಗೊಳಗೆ ಕುತಂತ್ರ ನಡೆಸುತ್ತಿದ್ದಾರೆ. ಇದು ಸರಿಯಲ್ಲ ಎಂದರು.
ಯಾವುದೇ ಸವಾಲನ್ನು ತಾಕತ್ತಿದ್ದರೆ ನೇರವಾಗಿ ಎದುರಿಸಬೇಕು. ಸೋಲುವ ಭಯದಲ್ಲಿ ಅಧಿಕಾರಿಗಳನ್ನು ಏಕೆ ಬಲಿಪಶು ಮಾಡುತ್ತೀರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಹರಿಹಾಯ್ದರು.ಸಹಕಾರ ಸಂಘದ ಚುನಾವಣೆಯಲ್ಲಿ ಮೇಲುಗೈ ಸಾಧಿಸಲಾಗದ ಭಯದಿಂದ ಕಾಂಗ್ರೆಸ್ ವಿಪಕ್ಷಗಳ ಬೆಂಬಲಿಗರನ್ನು ಹಣಿಯುವ ಪ್ರಯತ್ನ ಮಾಡುತ್ತಿದೆ. ಯುದ್ಧಕ್ಕೆ ಬಂದ ಮೇಲೆ ಯುದ್ಧ ಮಾಡಬೇಕೇ ಹೊರತು ವಿರೋಧಿಗಳನ್ನು ದಮನ ಮಾಡುವುದಲ್ಲ ಎಂದರು.