ಕನ್ನಡಪ್ರಭ ವಾರ್ತೆ, ತುಮಕೂರುಅಲೈಡ್ ಹೆಲ್ತ್ ಸೈನ್ಸ್ ವೈದ್ಯಕೀಯ ಕ್ಷೇತ್ರದ ಬೆನ್ನಲುಬು ಎಂದು ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪಠ್ಯಕೋಶ ನಿರ್ದೇಶಕ ಡಾ.ಷಣ್ಮುಖಪ್ಪ ಅಭಿಪ್ರಾಯಪಟ್ಟಿದ್ದಾರೆ. ನಗರದ ಶಿರಾರಸ್ತೆಯ ಶ್ರೀದೇವಿ ಇನ್‌ಸ್ಟಿಟ್ಯೂಟ್ ಅಫ್ ಪ್ಯಾರಾಮೆಡಿಕಲ್ ಸೈನ್ಸ್ ಮತ್ತು ಶ್ರೀದೇವಿ ಇನ್‌ಸ್ಟಿಟ್ಯೂಟ್ ಅಫ್ ಅಲೈಡ್ ಹೆಲ್ತ್ ಸೈನ್ಸ್‌ಗಳ ವತಿಯಿಂದ 5ನೇ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.ಭಾರತದಲ್ಲಿ 60 ಲಕ್ಷ ಉದ್ಯೋಗದ ಬೇಡಿಕೆ ಇದೆ. ಇನ್ನೂ ಜಗತ್ತಿನಲ್ಲಿ ಈ ವಲಯದ ತಜ್ಞರಿಗೆ, ಪದವೀಧರರಿಗೆ, ಎಷ್ಟು ಬೇಡಿಕೆ ಇರಬಹುದು ಎಂಬದನ್ನು ಯಾರು ಬೇಕಾದರೂ ಉಹಿಸಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮಾನವೀಯ ಸ್ಪರ್ಶ ಕರುಣೆ, ಅನುಕಂಪದ ನಡೆ ಮುಖ್ಯ ಇದನ್ನು ತಂತ್ರಜ್ಞರಿಂದ, ವೈದ್ಯಕೀಯ ಉಪಕರಣಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಮಲೇಷ್ಯಾದ ಮಾಸಾ ವಿಶ್ವವಿದ್ಯಾಲಯದ ಎಲಿವೇಟ್‌ನ ಪ್ರೀ-ಯೂನಿವರ್ಸಿಟಿ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ನಾಗರಾಜ ಸೂರ್ಯದೇವರ ಮಾತನಾಡಿ, ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯಂತೆ ಮಾಸ ವಿಶ್ವವಿದ್ಯಾಲಯ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಸಮಾನ ಉದ್ದೇಶ, ಗುರಿಯಿದೆ. ಮಲೇಷ್ಯಾದಲ್ಲಿ ಮೊಟ್ಟಮೊದಲ ಅಂತರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸಿದ ಗೌರವಕ್ಕೆ ಶ್ರೀದೇವಿ ಸಂಸ್ಥೆ ಭಾಜನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಸುರೇಶ್‌ಗೌಡ ಮಾತನಾಡಿ, ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟಿದೆ. ಯುವಕರ ಬದುಕು ಹಸನಾಗಬೇಕು ಎಂಬ ಕಾರಣದಿಂದ ಈ ವಲಯದಲ್ಲಿ ಅಗಾಧ ಹೂಡಿಕೆ ಮಾಡಿ. ದೇಶಾದ್ಯಂತ ನೂತನ ಶಿಕ್ಷಣ ನೀತಿ ಜಾರಿಗೊಳಿಸಿದೆ. ವಿಕಸಿತ ಭಾರತದ ಕನಸು ನನಸು ಮಾಡುವ ಗುರುತರ ಜವಾಬ್ದಾರಿ ಯುವಕರ ಮೇಲಿದೆ. ಶಿಕ್ಷಣ ಎಂದರೆ ಕೇವಲ ಪುಸ್ತಕ, ಅಂಕ, ಸಂಬಳ, ಅಷ್ಟೇ ಅಲ್ಲ. ಶಿಕ್ಷಣ ಎಂದರೆ ವ್ಯಕ್ತಿತ್ವ ಸೃಜನಶೀಲತೆ ಚಿಂತನೆ, ಜ್ಞಾನ ಎಂದು ದಿವಂಗತ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಮಾತನ್ನು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್‌ರವರು ಮಾತನಾಡುತ್ತಾ ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದ ಕ್ರಾಂತಿಕಾರಿ ಬದಲಾವಣೆಯಾಗಿದೆ ಎಂದರು.ಡಾ.ರಮಣ್ ಎಂ ಹುಲಿನಾಯ್ಕರ್ ರವರು ಸಂಸ್ಥೆ ಬೆಳೆದು ಬಂದ ದಾರಿಯ ಚಿತ್ರಣ ನೀಡಿದರು.