ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರತಿಭೆಯನ್ನು ಹಣ ಸಂಪಾದನೆಯ ಸಾಮರ್ಥ್ಯದಲ್ಲಿ ಅಳೆಯಲಾಗುತ್ತಿದೆ. ಹೀಗಾಗಿ ಇಂದು ಬ್ರಾಹ್ಮಣ ಸಮಾಜ ಇಂದು ಗಂಭೀರವಾದ ಕಾಲಘಟ್ಟದಲ್ಲಿದೆ. ಜೀವನಶೈಲಿ ಬದಲಾದ ಪರಿಣಾಮ ನಿಜವಾದ ಬ್ರಾಹ್ಮಣ್ಯವನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್ ಕಳವಳ ವ್ಯಕ್ತಪಡಿಸಿದರು.ನಗರದ ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಬಬ್ಬೂರುಕಮ್ಮೆ ಸೇವಾ ಸಮಿತಿಯಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬ್ರಾಹ್ಮಣ್ಯದ ಮೂಲಸೆಲೆಯಾದ ಧ್ಯಾನ, ತಪ, ಯಜ್ಞಗಳಿಂದ ಹಿರಿಯರೇ ವಿಮುಖರಾಗುತ್ತಿದ್ದಾರೆ. ಹೀಗಿರುವಾಗ ಇಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡುವವರು ಯಾರು? ಎಂದು ಪ್ರಶ್ನಿಸಿದರು.
ಇಂದು ಬ್ರಾಹ್ಮಣ ಸಮಾಜದಲ್ಲಿ ಬಹಳಷ್ಟು ಪ್ರತಿಭಾವಂತರಿದ್ದಾರೆ. ಅದು ಹಿಂದಿನವರ ತಪೋಶಕ್ತಿ, ಅನುಷ್ಠಾನದಿಂದ ಸಿಕ್ಕಿರುವಂತಾದ್ದು. ಆದರೆ ಬ್ರಾಹ್ಮಣ್ಯದ ಮೂಲ ಚಿಂತನೆಯನ್ನು ಮುಂದುವರಿಸಿಕೊಂಡು ಹೋಗದೇ ಇದ್ದರೆ ಕ್ರಮೇಣ ಮುಂದಿನ ಪೀಳಿಗೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.ಡಾ.ಎಂ.ಎಚ್.ವಿದ್ಯಾಶಂಕರ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ನೀಡದ ತಂದೆ ತನ್ನ ಮಕ್ಕಳ ಪಾಲಿಗೆ ವೈರಿಯಾದರೆ, ತಾಯಿ ಶತ್ರುವಂತಾಗುತ್ತಾಳೆ. ಹೀಗಾಗಿ ಮಕ್ಕಳಿಗೆ ಮೂಲದಲ್ಲೇ ಸಂಸ್ಕಾರ ನೀಡಬೇಕು. ಮಕ್ಕಳನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಸಮಾಜದ ಹೊಣೆಗಾರಿಕೆಯೂ ಇದೆ ಎಂದರು.
ವೇ.ಬ್ರ.ಶ್ರೀ ಕಾರಕೋಡ್ಲು ಗುರುಮೂರ್ತಿ ಮಾತನಾಡಿ, ಮನೆಗಳಲ್ಲಿ ನಿತ್ಯಾನುಷ್ಠಾನ ಹಿರಿಯರಿಂದಲೇ ಪಾಲನೆಯಾಗಲಿ. ಅದು ಕಿರಿಯರಿಗೆ ಅನುಕರಣೀಯವಾಗಿರಲಿ. ಮಕ್ಕಳಲ್ಲಿ ಸಂಸ್ಕಾರ ಉಳಿಸಿ, ಬೆಳೆಸಬೇಕಾದ ಕಾರ್ಯ ಇಂದಿನ ತುರ್ತು ಅನಿವಾರ್ಯವಾಗಿದೆ ಎಂದು ಹೇಳಿದರು.
ವಿವಿಧ ಕಾರ್ಯಕ್ರಮಗಳು:
ಬಬ್ಬೂರುಕಮ್ಮೆ ಸೇವಾ ಸಮಿತಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಂಗವಾಗಿ ಬೆಳಗ್ಗೆ ಸತ್ಯನಾರಾಯಣ ಪೂಜೆ ಹಾಗೂ ರುದ್ರಾಭಿಷೇಕ ಏರ್ಪಡಿಸಲಾಗಿತ್ತು. ಮಹಾಸಭೆಯ ಬಳಿಕ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಸಂಸ್ಕೃತದಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಸುಮಿತ್ರಮ್ಮ ಹಾಗೂ ಪದ್ಮಾ ಕೇಶವಮೂರ್ತಿ ಬಬ್ಬೂರು ಕಮ್ಮೆ ಮಹಿಳಾ ಘಟಕವನ್ನು ಉದ್ಘಾಟಿಸಿದರು. ವೇದ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಾವೀಣ್ಯತೆ ಪಡೆದ ವೇ.ಬ್ರ.ಶ್ರೀ ಪಲ್ಗುಣ ಶರ್ಮ ಅವರಿಗೆ ಗೌರವ ಸಮಿರ್ಪಿಸಲಾಯಿತು.ಸುಮಿತ್ರಮ್ಮ, ನಾಗೇಶ್, ಬಿ.ಎಸ್.ಶಂಕರಮೂರ್ತಿ, ಲಕ್ಷ್ಮೀ ಶ್ರೀಧರ್, ಎನ್.ಸತ್ಯನ್ ಮುಂತಾದವರು ಹಾಜರಿದ್ದರು.