ಕನ್ನಡಪ್ರಭ ವಾರ್ತೆ ಹೊನ್ನಾಳಿ
2024- 2025ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಸಾಕಷ್ಟು ಹಣಕಾಸು ಮೀಸಲಿಡಬೇಕು ಎಂದು ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಡಿ.ಲತಾಬಾಯಿ ಆಗ್ರಹಿಸಿದರು.ತಾಲೂಕು ಅಂಗನವಾಡಿ ನೌಕರರ ಸಂಘದ ನೂರಾರು ಪದಾಧಿಕಾರಿಗಳ ಪ್ರತಿಭಟನೆಯಲ್ಲಿ ತಹಸೀಲ್ದಾರ್ ಹಾಗೂ ಬಿಇಒಗೆ ಮನವಿ ಸಲ್ಲಿಸಿ ಮಾತನಾಡಿ, ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಹಸೀಲ್ದಾರ್ ಸಂಘಟನೆಯಿಂದ ನೀಡಿರುವ ಮನವಿ ರವಾನಿಸುವಂತೆ ಮನವಿ ಮಾಡಿದರು.
ರಾಜ್ಯದಲ್ಲಿನ ಅಂಗನವಾಡಿ ಬಲಪಡಿಸಲು ಮತ್ತು ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಶಾಸನಬದ್ಧ ಸೌಲಭ್ಯ ಒದಗಿಸಿಕೊಡಬೇಕು. ಶೀಘ್ರದಲ್ಲಿಯೇ ನಿರ್ಮಲಾ ಸೀತರಾಮನ್ 2024- 2025ರ ಮುಂಗಡ ಪತ್ರ ಮಂಡಿಸುವವರಿದ್ದಾರೆ. ಶಿಶು ಅಭಿವೃದ್ಧಿ ಯೋಜನೆ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ತುರ್ತು ಅವಶ್ಯಕತೆ ಇದೆ ಎಂದು ಹೇಳಿದರು.ಪ್ರಸ್ತುತ ಮಹಿಳೆಯರು ಮತ್ತು ಮಕ್ಕಳಲ್ಲಿ ಅತಿ ಹೆಚ್ಚು ಅಪೌಷ್ಠಿಕತೆ ಸವಾಲುಗಳನ್ನು ದೇಶ ಗಂಭಿರವಾಗಿ ಎದುರಿಸುತ್ತಿದೆ. ದೇಶದಲ್ಲಿ ಪ್ರತಿವರ್ಷ ಸರಾಸರಿ ಆರು ವರ್ಷದೊಳಗಿನ ಸುಮರು 9 ಲಕ್ಷ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಕಳೆದ 5 ದಶಕಗಳಿಂದ ದುಡಿಯುತ್ತಿರುವ 26 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಇನ್ನೂ ಕಾರ್ಮಿಕರನ್ನಾಗಿ ಗುರುತಿಸಲು ಕೇಂದ್ರ ಸರ್ಕಾರ ಸಿದ್ಧವಿಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಆದ್ದರಿಂದ ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಪಿಂಚಣಿ ನೀಡುವುದು ಸೇರಿದಂತೆ ಅನೇಕ ಶಿಫಾರಸುಗಳನ್ನು ಜಾರಿ ಮಾಡಲು ಇದು ಸೂಕ್ತಕಾಲ. ಅಂಗನವಾಡಿಗಳಲ್ಲಿಯೇ ಆರಂಭಿಕ ಬಾಲ್ಯದ ಆರೈಕೆ, ಶಾಲಾಪೂರ್ವ ಶಿಕ್ಷಣ ಘಟಕಾಂಶಗಳನ್ನು ಬಲಪಡಿಸುವುದು ಸೇರಿ ಅನೇಕ ವಿಚಾರಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಮನಹರಿಸಬೇಕಿದೆ ಎಂದು ಹೇಳಿದರು.ಈ ವೇಳೆ ಸಂಘದ ಕಾರ್ಯದರ್ಶಿ ಎಸ್.ಎಚ್.ಗೀತಾ, ನಾಗರತ್ನಮ್ಮ, ಪದಾಧಿಕಾರಿಗಳಾದ ಕವಿತಾ, ಅನ್ನಪೂರ್ಣ, ಗಂಗಮ್ಮ, ಸುವರ್ಣ, ದಾಕ್ಷಾಯಣಿ, ಪೂವಮ್ಮ, ಶೃತಿ, ರೂಪಾ, ಶಶಿಕಲಾ, ನೂರಾರು ಸದಸ್ಯೆಯರು ಭಾಗವಹಿಸಿದ್ದರು.