ಮುಂಡರಗಿ: ಪಟ್ಟಣದ ಗದಗ ರಸ್ತೆಯಲ್ಲಿರುವ ಅನ್ನದಾನೀಶ್ವರ ರುದ್ರಭೂಮಿಯಲ್ಲಿ ನಿತ್ಯ ಶೌಚಾಲಯಕ್ಕೆ ಹೋಗುತ್ತಿದ್ದು, ಅದನ್ನು ಅಭಿವೃದ್ಧಿಪಡಿಸಿ ಸುಂದರ ಉದ್ಯಾನವನ ನಿರ್ಮಾಣ ಹಾಗೂ ನೀರು ಮತ್ತು ಬೆಳಕಿನ ವ್ಯವಸ್ಥೆಗಾಗಿ ಬಜೆಟ್ ನಲ್ಲಿ ಹಣ ಮೀಸಲಿಡಬೇಕು ಎಂದು ವಿಶ್ರಾಂತ ಪ್ರಾ. ಎಸ್.ಬಿ.ಕರಿಭರಮಗೌಡ್ರ ಹೇಳಿದರು.
ಪಟ್ಟಣದಲ್ಲಿರುವ ಅನೇಕ ಪುರಸಭೆ ಉದ್ಯಾನವನಗಳಿಗೆ ಗೇಟುಗಳಿಲ್ಲ, ಅನೇಕ ಉದ್ಯಾನವನಗಳಲ್ಲಿ ಜಾಲಿಕಂಟಿ ಬೆಳೆದು ನಿಂತಿವೆ. ಇನ್ನು ಕೆಲವು ಉದ್ಯಾನವನಗಳಲ್ಲಿ ನೀರಿನ ವ್ಯವಸ್ಥೆ ಇಲ್ಲ, ಆದ್ದರಿಂದ ಎಲ್ಲ ಉದ್ಯಾನವನಗಳ ಅಭಿವೃದ್ದಿಗಾಗಿ ಬಜೆಟ್ ನಲ್ಲಿ ಹಣ ಕಾಯ್ದಿರಿಸಬೇಕು ಎಂದು ಸಲಹೆ ನೀಡಿದರು.
ಅಂಬೇಡ್ಕರ್ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಅಡಿವೆಪ್ಪ ಛಲವಾದಿ ಮಾತನಾಡಿ, ಪುರಸಭೆ ಆವರಣದಲ್ಲಿರುವ ಗಾಂಧಿ ಭವನ ಅಭಿವೃದ್ಧಿಪಡಿಸಿ ಹೈಟೆಕ್ ಮಾಡಿದರೆ ಅದರಿಂದ ಪುರಸಭೆಗೆ ಆದಾಯ ಬರುತ್ತದೆ. ಅಲ್ಲದೇ ಬಸ್ ನಿಲ್ದಾಣವೂ ಸೇರಿದಂತೆ ಪಟ್ಟಣದ ವಿವಿಧೆಡೆಗಳಲ್ಲಿರುವ ವಿವಿಧ ಇಲಾಖೆಗಳ ಸರ್ಕಾರಿ ಮಳಿಗೆಗಳ ಕರವಸೂಲಾತಿ ಬಾಕಿ ಉಳಿದಿದ್ದು, ಕಡ್ಡಾಯವಾಗಿ ಎಲ್ಲವನ್ನೂ ವಸೂಲಿ ಮಾಡಿದರೆ ಪುರಸಭೆಗೆ ಹೆಚ್ಚಿನ ಆದಾಯ ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ರೈತ ಹೋರಾಟಗಾರ ವಿಠಲ್ ಗಣಾಚಾರಿ ಮಾತನಾಡಿ, ಪಟ್ಟಣದಲ್ಲಿರುವ ಗಾಯತ್ರಿ ಸಮುದಾಯದ ಸ್ಮಶಾನಕ್ಕೆ ನೀರು, ಬೆಳಕು, ಗಿಡ ನೆಡುವುದು ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯ ಕಲ್ಪಿಸುವುದಕ್ಕಾಗಿ ಹಣ ಕಾಯ್ದಿರಿಸಬೇಕು. ಶಿರಹಟ್ಟಿ-ಮುಂಡರಗಿ ರಸ್ತೆಯಲ್ಲಿರುವ ಹಿರೇಹಳ್ಳದ ಸೇತುವ ಹತ್ತಿರ ಸಂಪೂರ್ಣವಾಗಿ ಸ್ವಚ್ಛತೆ ಮಾಡುವುದಕ್ಕಾಗಿ ಯೋಜನೆ ಹಣ ಮೀಸಲಿಡಬೇಕು ಎಂದರು.
ಪಟ್ಟಣದ ಜನನಿಬಿಡ ಪ್ರದೇಶದಲ್ಲಿ ಸಿಸಿ ಕ್ಯಾಮೇರಾ ಅಳವಡಿಸುವುದಕ್ಕಾಗಿ ಹಣ ಮೀಸಲಿಡುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ನಿರ್ಮಲಾ ನಾಗರಾಜ ಕೊರ್ಲಹಳ್ಳಿ, ಸದಸ್ಯ ನಾಗರಾಜ ಹೊಂಬಳಗಟ್ಟಿ, ಪುರಸಭೆ ಸಿಬ್ಬಂದಿ ಸೇರಿದಂತೆ ಅನೇಕ ಸಂಘ-ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.