ಕುಡಿಯುವ ನೀರು ನಿರ್ವಹಣೆಗೆ ತಾಲೂಕಿಗೆ ಅನುದಾನ ಹಂಚಿ: ರಿತೇಶಕುಮಾರ್ ಸಿಂಗ್

KannadaprabhaNewsNetwork |  
Published : Jan 31, 2024, 02:18 AM IST
ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶಕುಮಾರ್ ಸಿಂಗ್ ಜಿಪಂ ಸಾಮಾನ್ಯ ಸಭೆ ನಡೆಸಿದರು. | Kannada Prabha

ಸಾರಾಂಶ

ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಕಂಡು ಬರುವ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸುವ ಕುರಿತಂತೆ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಅಧಿಕಾರ ಮತ್ತು ಅನುದಾನವನ್ನು ಎಲ್ಲ ತಾಲೂಕುಗಳಿಗೆ ಬಿಡುಗಡೆ ಮಾಡಬೇಕು.

ಕಾರವಾರ:

ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಕಂಡು ಬರುವ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸುವ ಕುರಿತಂತೆ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಅಧಿಕಾರ ಮತ್ತು ಅನುದಾನವನ್ನು ಎಲ್ಲ ತಾಲೂಕುಗಳಿಗೆ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶಕುಮಾರ್ ಸಿಂಗ್ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುವ ಗ್ರಾಮಗಳನ್ನು ಈಗಲೇ ಗುರುತಿಸಿಕೊಳ್ಳಬೇಕು. ಆ ಭಾಗದ ಜನರಿಗೆ ಯಾವುದೇ ಸಮಸ್ಯೆ ಉಂಟಾಗದ೦ತೆ ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ಕರೆಯುವ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ಉಪ ವಿಭಾಗಾಧಿಕಾರಿಗಳಿಗೆ ನೀಡಿ, ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಇದರಿಂದ ಸ್ಥಳೀಯ ನೀರಿನ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಸಾಧ್ಯವಾಗಲಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ ಬಿ.ವಿ. ಮಾತನಾಡಿ, ಮಂಗನ ಕಾಯಿಲೆ ಸೋಂಕು ಹರಡುವುದು ಹಾಗೂ ತಡೆಯಲು ಹೆಚ್ಚಿನ ಪ್ರಮಾಣದಲ್ಲಿ ಔಷಧಿ ಅಗತ್ಯವಿದೆ. ಇಲಾಖೆಯ ಬಳಿ ೧೧ ಸಾವಿರ ಬಾಟಲಿ ಇದ್ದು ೩೫ರಿಂದ ೪೫ ಸಾವಿರ ಬಾಟಲಿ ಬೇಕಿದೆ ಎಂದು ಪ್ರಧಾನ ಕಾರ್ಯದರ್ಶಿಯವರ ಗಮನಕ್ಕೆ ತಂದರು. ರಿತೇಶಕುಮಾರ ಪ್ರತಿಕ್ರಿಯಿಸಿ, ಔಷಧ ಪೂರೈಕೆ ಬಗ್ಗೆ ಪ್ರಯತ್ನಿಸುವುದಾಗಿ ಹೇಳಿ ಈ ರೋಗದ ಬಗ್ಗೆ ಸಾರ್ವಜನಿಕರಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಜಾಗೃತಿ ಮೂಡಿಸುವಂತೆ ತಿಳಿಸಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವತಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕು. ಜಲ ಜೀವನ್ ಮಿಷನ್ ಕಾಮಗಾರಿಗಳಿಗೆ ಅರಣ್ಯ ಇಲಾಖೆಯಿದ ನಿರಾಪೇಕ್ಷಣ ಪತ್ರ ಬಾಕಿ ಇರುವ ಕುರಿತು ಪ್ರಕರಣಗಳ ವಿವರ ಸಲ್ಲಿಸಬೇಕು. ಜಿಲ್ಲೆಯಲ್ಲಿ ಸರ್ಕಾರದ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಶೇ. ೧೦೦ರಷ್ಟು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇಲಾಖೆಗಳು ಕಾರ್ಯನಿರ್ವಹಿಸಬೇಕು. ಯುವನಿಧಿ ಯೋಜನೆಗೆ ಅರ್ಹರಿರುವ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸಬೇಕು ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕ್ನೂರ ಮಾತನಾಡಿ, ೪೩ ಅಂಗನವಾಡಿ ಕಟ್ಟಡಕ್ಕೆ ಅನುಮತಿ ಸಿಕ್ಕಿದೆ. ಟೆಂಡರ್‌ ಪ್ರಕ್ರಿಯೆ ಆಗಬೇಕು. ಬಾಕಿಯಿರುವ ಅಂಗವಾಡಿ ಬಾಡಿಗೆ ಬಂದಿದೆ. ಅಂಗನವಾಡಿ ಕಾರ್ಯಕರ್ತೆ ಹುದ್ದೆ ಆಯ್ಕೆಗೆ ನಮ್ಮ ಜಿಲ್ಲೆಗೆ ಅವಕಾಶ ನೀಡಿಲ್ಲ ಎಂದು ಮಾಹಿತಿ ನೀಡಿದರು.

ರಿತೇಶಕುಮಾರ ಮಾತನಾಡಿ, ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ, ಶಾಲಾ ಕಟ್ಟಡ, ಶಾಲಾ ಶೌಚಾಲಯ ಕಾಮಗಾರಿ ಒಳಗೊಂಡು ಎಲ್ಲ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕು. ಲೋಕಸಭಾ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಮೊದಲೇ ಎಲ್ಲ ಕಾಮಗಾರಿಗಳಿಗೆ ಟೆಂಡರ್ ಮತ್ತಿತರ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿ ಆರಂಭಿಸಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಾಜಪೂತ ಹಾಗೂ ಅಧಿಕಾರಿಗಳು ಇದ್ದರು.ಮಾರ್ಚ್‌ನಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದ್ದು, ನೀತಿ ಸಂಹಿತೆ ಜಾರಿಗೆ ಬಂದರೆ ಟೆಂಡರ್ ಕರೆಯಲು, ಹೊಸ ಕಾಮಗಾರಿ ಆರಂಭಿಸಲು ಸಾಧ್ಯವಾಗುವುದಿಲ್ಲ. ೩೦-೩೫ ದಿನ ಕಾಲಾವಕಾಶವಿದೆ. ಅಷ್ಟರೊಳಗೆ ಇಲಾಖೆಗಳ ಅಧಿಕಾರಿಗಳು ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ರಾಜ್ಯಮಟ್ಟದಲ್ಲಿ ಬಗೆಹರಿಯಬೇಕಾದ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿನ ಸಮಸ್ಯೆಗಳ ಕುರಿತು ಸಂಪೂರ್ಣ ವಿವರಗಳನ್ನು ತಮಗೆ ಸಲ್ಲಿಸಬೇಕು ಎಂದು ರಿತೇಶಕುಮಾರ ಸಿಂಗ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ
ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ