ಹೋಮಿಯೋಪಥಿಗೆ ಅಲೋಪಥಿ ಬ್ರಿಜ್‌ ಕೋರ್ಸ್‌ ಪರಿಶೀಲನೆ: ದಿನೇಶ್‌

KannadaprabhaNewsNetwork | Updated : Jun 13 2024, 08:18 AM IST

ಸಾರಾಂಶ

ಹೋಮಿಯೋಪಥಿಗೆ ಅಲೋಪಥಿಯನ್ನು ಸಂಯೋಜಿಸುವ ಬೇಡಿಕೆಯನ್ನು ಪರಿಶೀಲಿಸುತ್ತೇವೆ ಎಂದು ಸಚಿವ ದಿನೇಶ್‌ ಗುಂಡೂರಾವ್ ಹೇಳಿದ್ದಾರೆ.

 ಬೆಂಗಳೂರು :  ಹೋಮಿಯೋಪಥಿ ವಿದ್ಯಾರ್ಥಿಗಳಿಗೆ ಬ್ರಿಜ್‌ ಕೋರ್ಸ್‌ ಆಗಿ ಅಲೋಪಥಿಯನ್ನು ಒಂದು ವರ್ಷ ಬೋಧನೆ ಮಾಡುವ ಬೇಡಿಕೆಯನ್ನು ಸರ್ಕಾರ ಸಕಾರಾತ್ಮಕವಾಗಿ ನೋಡಲಿದ್ದು, ಕಾನೂನು, ವೈಜ್ಞಾನಿಕ ಅವಕಾಶ, ಸಾಧಕ ಬಾಧಕದ ಕುರಿತು ಪರಿಶೀಲಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಭರವಸೆ ನೀಡಿದರು.

ಕರ್ನಾಟಕ ಖಾಸಗಿ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯಗಳ ಆಡಳಿತ ಸಂಘ ಬುಧವಾರ ಆಯೋಜಿಸಿದ್ದ ‘ವಿಶ್ವ ಹೋಮಿಯೋಪಥಿಕ್ ದಿನಾಚರಣೆ ಮತ್ತು ವಿಚಾರ ಸಂಕಿರಣ’ದಲ್ಲಿ ಅವರು ಮಾತನಾಡಿದರು.

ಹೋಮಿಯೋಪಥಿ ಪದ್ಧತಿಯನ್ನು ಬಲಪಡಿಸುವ ಕೆಲಸ ಆಗಬೇಕು. ರಾಜ್ಯದಲ್ಲಿನ 17 ಹೋಮಿಯೋಪಥಿ ಕಾಲೇಜುಗಳಿಗೆ ಅಕಾಡೆಮಿಕ್ ದೃಷ್ಟಿಯಿಂದ ಆಗಬೇಕಾದ ಎಲ್ಲಾ ಅಗತ್ಯ ಕೆಲಸವನ್ನು ಮಾಡಲಾಗುವುದು. ಬ್ರಿಜ್‌ ಕೋರ್ಸ್‌ ಆಗಿ ಅಲೋಪಥಿ ಪದ್ಧತಿಯನ್ನು ಸಂಯೋಜಿಸುವ ಬೇಡಿಕೆ ಗಮನದಲ್ಲಿದೆ. ಆದರೆ, ಇದು ಕೇಂದ್ರ ಸರ್ಕಾರದ ಮಟ್ಟದಲ್ಲಿ ಆಗಬೇಕಾಗುತ್ತದೆ. ಇದಕ್ಕೆ ಆಕ್ಷೇಪವೂ ಇದೆ. ಆದರೆ, ವೈಜ್ಞಾನಿಕ ಹಾಗೂ ಕಾನೂನಿನ ಪ್ರಕಾರ ಇದು ಸಾಧ್ಯವೇ ಎಂದು ಪರಿಶೀಲಿಸಲಾಗುವುದು ಎಂದರು.

ಹೋಮಿಯೋಪಥಿಕ್‌ ವಿದ್ಯಾರ್ಥಿಗಳು ಈ ಪದ್ಧತಿಯನ್ನು ಅಭಿವೃದ್ಧಿ ಪಡಿಸಲು ವೈಜ್ಞಾನಿಕ ಅಧ್ಯಯನ ಕೈಗೊಳ್ಳಬೇಕು. ಈ ಸಂಬಂಧ ಅಗತ್ಯ ಪೂರಕ ವಾತಾವರಣ ರೂಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ನೆರವು ನೀಡಲಿದೆ. ಸಂಘಟನೆ ಪ್ರಮುಖರ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.

ಸಭಾಪತಿ ಯು.ಟಿ.ಖಾದರ್ ಮಾತನಾಡಿ, ಹೋಮಿಯೋಪಥಿ ವೈದ್ಯರಾಗಿ ಇಂಗ್ಲಿಷ್ ಅಲೋಪಥಿ ಮೆಡಿಸಿನ್ ಕೊಡುವಂತ ಕೆಲಸ ಆಗಬಾರದು. ಟೆಲಿ ಮೆಡಿಸಿನ್ ರೀತಿಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನಿರಂತರವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಅಂದಾಗ ಮಾತ್ರ ಹೋಮಿಯೋಪಥಿ ಕ್ಷೇತ್ರ ಹೆಚ್ಚಿನ ವಿಸ್ತಾರವಾಗಲು ಸಾಧ್ಯ ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ। ಶರಣ ಪ್ರಕಾಶ್ ಪಾಟೀಲ್, ನೀಟ್‌ ಕಡ್ಡಾಯ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಹೋಮಿಯೋಪಥಿ ಕೋರ್ಸ್‌ಗೆ ದಾಖಲಾಗಲು ಉಂಟಾಗುತ್ತಿರುವ ಸಮಸ್ಯೆ ಪರಿಹರಿಸಲು ಕ್ರಮ ವಹಿಸಲಾಗುವುದು. ಬ್ರಿಜ್‌ ಕೋರ್ಸ್‌ ಕುರಿತು ಕೇಂದ್ರ ಮಟ್ಟದಲ್ಲಿ ನಿರ್ಧಾರ ಆಗಬೇಕಿದೆ. ವಿದ್ಯಾರ್ಥಿಗಳು ಹೋಮಿಯೋಪಥಿ ಶೈಕ್ಷಣಿಕ ಜ್ಞಾನದ ಜತೆಗೆ ಇತರೆ ವೈದ್ಯಕೀಯ ವಿಚಾರಗಳನ್ನು, ಉತ್ತಮ ಸಂವಹನ ಕೌಶಲ್ಯವನ್ನು ಅರಿಯಬೇಕು ಎಂದರು.

ಈ ವೇಳೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಹೋಮಿಯೋಪಥಿಕ್ ಒಕ್ಕೂಟದ ಅಧ್ಯಕ್ಷ ಡಾ. ಆನಂದ್ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ಹೋಮಿಯೋಪಥಿಕ್ ಒಕ್ಕೂಟದ ಅಧ್ಯಕ್ಷ ವಿನೋದ್ ದೊಡ್ಡಣ್ಣವರ್, ಕೆ. ಚಂದ್ರಶೇಖರ್, ಡಾ.ಡಿ.ಟಿ.ಬಾಮನೆ ಇದ್ದರು.

Share this article