ಕನ್ನಡಪ್ರಭ ವಾರ್ತೆ ಶಿರಾ ಶಿರಾ ನಗರಸಭಾ ವ್ಯಾಪ್ತಿಯ ವಸತಿ ರಹಿತರಿಗೆ ಎರಡು ತಿಂಗಳಲ್ಲಿ ಕೇವಲ 1 ಲಕ್ಷ ರು.ಗಳಲ್ಲಿ ಮನೆಗಳನ್ನು ನೀಡಲಾಗುವುದು ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.
ಅವರು ಗುರುವಾರ ನಗರದ ಮಿನಿವಿಧಾನಸೌಧದಲ್ಲಿ ಆಶ್ರಮ ಸಮಿತಿ ಸಭೆ ನಡೆಸಿ ಮಾತನಾಡಿದರು. ಶಿರಾ ನಗರದಲ್ಲಿ ಸುಮಾರು 500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 1008 ಮನೆಗಳ ಕಾಮಗಾರಿ ಡಿಸೆಂಬರ್ ವೇಳೆಗೆ ಮುಗಿಯಲಿದ್ದು ಮನೆಗಳು ಅತ್ಯಂತ ಗುಣಮಟ್ಟದಲ್ಲಿ ನಿರ್ಮಾಣವಾಗಿದ್ದು, ನಗರಸಭಾ ವ್ಯಾಪ್ತಿಯ ವಸತಿ ರಹಿತರು ಕೇವಲ 1 ಲಕ್ಷ ರು.. ಪಾವತಿಸಿ ಮನೆಯನ್ನು ಪಡೆಯಬಹುದು. 1008 ಮನೆಗಳ ನಿರ್ಮಾಣ ಕಾರ್ಯವೂ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಭೂಮಿ ಪೂಜೆ ಮಾಡಲಾಗಿತ್ತು. ಈಗ ಸುಮಾರು 700 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ ಉಳಿದ ಮನೆಗಳೂ ಸಹ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿವೆ. ಇಲ್ಲಿ ನಿರ್ಮಾಣವಾಗುತ್ತಿರುವ ಒಂದು ಮನೆಗೆ 5.16 ಲಕ್ಷ ರು.. ವೆಚ್ಚವಾಗಲಿದೆ. ಸರ್ಕಾರದ ಆದೇಶದಂತೆ ಒಂದು ಮನೆಗೆ ಕೇವಲ 1 ಲಕ್ಷ ರು.. ಪಾವತಿಸಿದರೆ 4.16 ಲಕ್ಷ ರು. ಉಳಿತಾಯವಾಗಲಿದೆ. 1008 ಮನೆಗಳಲ್ಲಿ ಪ.ಜಾತಿಗೆ 302, ಪ.ಪಂಗಡ 101, ಹಿಂದುಳಿ ದವರ್ಗದವರಿಗೆ 152, ಅಲ್ಪಸಂಖ್ಯಾತರಿಗೆ 353, ಇತರೆಯವರಿಗೆ 100 ಮನೆಗಳನ್ನು ಮೀಸಲಿಡಲಾಗಿದೆ. ಈ ಹಿಂದೆ ಮನೆಗಳ ಮಂಜೂರಾತಿಗಾಗಿ ರು. 10 ಸಾವಿರಗಳನ್ನು ಕೆಲವರು ಪಾವತಿಸಿದ್ದು ಅವರು ಉಳಿದ 90 ಸಾವಿರ ಹಣವನ್ನು ಮಾತ್ರ ಪಾವತಿಸಬೇಕಾಗಿದೆ. ಆಸಕ್ತರು ಮನೆಗಳಿಗೆ ಶೀಘ್ರವಾಗಿ ಅರ್ಜಿ ಸಲ್ಲಿಸಿ ಮನೆಯನ್ನು ಕಾಯ್ದಿರಿಸಿಕೊಳ್ಳಬಹುದು ಎಂದ ಅವರು ಒಂದು ಮನೆಗೆ 4.16 ಲಕ್ಷ ರು.. ಹಣ ಉಳಿತಾಯವಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಸತಿ ಸಚಿವ ಜಮೀರ್ ಅಹಮದ್ ಅವರ ಕಾರಣವಾಗಿದ್ದು, ಶಿರಾ ಜನತೆ ಮೂಲಕ ಧನ್ಯವಾದ ತಿಳಿಸುತ್ತೇನೆ ಎಂದರು.ಬೀಡಿ ಕಾರ್ಮಿಕರಿಗೆ 279 ಮನೆ
ಶಿರಾ ನಗರದಲ್ಲಿ ಬೀಡಿ ಕಾರ್ಮಿಕರ ಬಡಾವಣೆ ನಿರ್ಮಾಣ ಮಾಡಲು ಸುಮಾರು 279 ಮನೆಗಳನ್ನು ಮಂಜೂರು ಮಾಡಿಸಲಾಗಿತ್ತು. ಇದರಲ್ಲಿ 211 ಮನೆಗಳು ಪೂರ್ಣಗೊಂಡಿವೆ., ಉಳಿಕೆ 50 ಮನೆಗಳು ಪೂರ್ಣಗೊಳ್ಳಬೇಕಿದೆ. ಬೀಡಿ ಕಾರ್ಮಿಕರ ಮನೆ ಮಂಜೂರಾದವರು ರು. 50 ಸಾವಿರ ಪಾವತಿಸಿದರೆ ಅವರ ಹೆಸರಿಗೆ ಹಕ್ಕು ಪತ್ರ ಹಾಗೂ ಇ-ಖಾತೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.ಶಿರಾ ನಗರದ 17 ಸ್ಲಂ ಬೋರ್ಡ್ ಮೂಲಕ 450 ಮನೆಗಳನ್ನು ನಿರ್ಮಿಸಲಾಗಿದೆ. ಪೌರಕಾರ್ಮಿಕರಾಗಿ 142 ಕಲ್ಲುಕೋಟೆ ಸರ್ವೇ ನಂ. 100ರಲ್ಲಿ ನಿವೇಶನ ನೀಡಬೇಕೆಂದು ಉದ್ದೇಶಿಸಿದ್ದು, ನಿವೇಶನ ನೀಡಲು ಇದ್ದ ತಾಂತ್ರಿಕ ಸಮಸ್ಯೆ ಬಗೆ ಹರಿದಿದ್ದು, ಶೀಘ್ರದಲ್ಲಿಯೇ ಪೌರಕಾರ್ಮಿಕರಿಗೆ ನಿವೇಶನ ನೀಡಲಾಗುವುದು ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಸಚ್ಚಿದಾನಂದ ಕುಚನೂರು, ನಗರಸಭಾ ಅಧ್ಯಕ್ಷ ಜೀಷಾನ್ ಮೊಹಮದ್, ಪೌರಾಯುಕ್ತ ರುದ್ರೇಶ್, ನಗರಸಭೆ ಆಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ನೂರುದ್ದೀನ್, ಜಯಲಕ್ಷ್ಮೀ, ಮಂಜುನಾಥ್ ಸೇರಿದಂತೆ ಸ್ಲಂಬೋರ್ಡ್ ಅಧಿಕಾರಿಗಳು ಹಾಜರಿದ್ದರು.