ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಿಗೆ ಅನುದಾನ ಹಂಚಿಕೆ

KannadaprabhaNewsNetwork |  
Published : Jun 13, 2024, 12:55 AM ISTUpdated : Jun 13, 2024, 12:33 PM IST
ಪೋಟೋ 10ಮಾಗಡಿ1: ಮಾಗಡಿ ಪಟ್ಟಣದ ಪುರಸಭೆಯಲ್ಲಿ ಜೆಡಿಎಸ್ ಪುರಸಭಾ ಸದಸ್ಯರಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು. | Kannada Prabha

ಸಾರಾಂಶ

 ಶಾಸಕ ಬಾಲಕೃಷ್ಣ ಅವರು ವಿಶೇಷ ಅನುದಾನ ತಂದು ಮಾಗಡಿ ಪಟ್ಟಣ ಅಭಿವೃದ್ಧಿಗೊಳಿಸಲಿ, ಅದನ್ನು ಬಿಟ್ಟು ನಮಗೆ ಬರಬೇಕಾದ ಅನುದಾನವನ್ನು ಕಾಂಗ್ರೆಸ್ ಸದಸ್ಯರ ವಾರ್ಡ್‌ಗೆ ಹಂಚಿಕೆ ಮಾಡಿರುವುದು ಸರಿಯಲ್ಲ ಎಂದು ಪುರಸಭಾ ಸದಸ್ಯ ಎಂ.ಎನ್.ಮಂಜುನಾಥ್ ಕಿಡಿ ಕಾರಿದರು.

ಮಾಗಡಿ: ಶಾಸಕ ಬಾಲಕೃಷ್ಣ ಅವರು ವಿಶೇಷ ಅನುದಾನ ತಂದು ಮಾಗಡಿ ಪಟ್ಟಣ ಅಭಿವೃದ್ಧಿಗೊಳಿಸಲಿ, ಅದನ್ನು ಬಿಟ್ಟು ನಮಗೆ ಬರಬೇಕಾದ ಅನುದಾನವನ್ನು ಕಾಂಗ್ರೆಸ್ ಸದಸ್ಯರ ವಾರ್ಡ್‌ಗೆ ಹಂಚಿಕೆ ಮಾಡಿರುವುದು ಸರಿಯಲ್ಲ ಎಂದು ಪುರಸಭಾ ಸದಸ್ಯ ಎಂ.ಎನ್.ಮಂಜುನಾಥ್ ಕಿಡಿ ಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷವೂ 15ನೇ ಹಣಕಾಸು ಯೋಜನೆಯಡಿ ಪುರಸಭಾ ವ್ಯಾಪ್ತಿಯ 23 ವಾರ್ಡ್‌ಗಳಿಗೂ ಸಮನಾಗಿ ಹಣ ಬಿಡುಗಡೆಗೊಳಿಸಲಾಗಿತ್ತು. ಆದರೆ ಶಾಸಕ ಬಾಲಕೃಷ್ಣ ಅವರು 15ನೇ ಹಣಕಾಸಿನ ಯೋಜನೆಯಡಿ ಅನುಮೋದನೆ ಪಡೆದಿರುವ ಕಾಮಗಾರಿಗಳನ್ನು ರದ್ದುಪಡಿಸಿ ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಿಗೆ ಅನುದಾನ ಹಾಕಿಸಿಕೊಂಡಿರುವುದರಿಂದ ನಮ್ಮ ವಾರ್ಡ್ ಜನರಿಗೆ ಅನ್ಯಾಯವಾಗಿದೆ. ಈ ಅನುದಾನಕ್ಕೆ ನೀವು ಕನ್ನ ಹಾಕಿದರೆ ನಮ್ಮ ವಾರ್ಡ್ ಸಮಸ್ಯೆಗಳನ್ನು ಯಾರು ಬಗೆಹರಿಸುತ್ತಾರೆ? 

ನಿಮಗೆ ನಿಮ್ಮ ಪಕ್ಷದ ಸದಸ್ಯರ ಮೇಲೆ ಪ್ರೀತಿ ಇದ್ದರೆ ವಿಶೇಷ ಅನುದಾನ ತಂದು ಮಾಗಡಿ ಪಟ್ಟಣ ಅಭಿವೃದ್ಧಿಗೊಳಿಸಿ, ಶೀಘ್ರದಲ್ಲಿ ಹಿಂದೆ ಅನುಮೋದನೆಯಾಗಿದ್ದ ಕಾಮಗಾರಿಗಳನ್ನು ಜಾರಿ ಮಾಡಬೇಕು, ಇಲ್ಲವಾದರೆ ನಿಮ್ಮ ನಡೆ ವಿರುದ್ಧ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಎಂ.ಎನ್.ಮಂಜುನಾಥ್ ಶಾಸಕರ ನಡೆ ವಿರುದ್ಧ ವಾಗ್ದಾಳಿ ನಡೆಸಿದರು.

ಪುರಸಭೆ ಸದಸ್ಯ ಕೆ.ವಿ.ಬಾಲು ಮಾತನಾಡಿ, ಜನಪ್ರತಿನಿಧಿಗಳ ಆಡಳಿತ ಪುರಸಭೆಯಲ್ಲಿ ಇಲ್ಲದ ಕಾರಣ ಅಧಿಕಾರಿಗಳು ಇದ್ದರೂ ಇಲ್ಲದಂತೆ ವರ್ತಿಸುತ್ತಿದ್ದಾರೆ. ಹತ್ತು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಯುಜಿಡಿ ಒಳಚರಂಡಿ ಎಲ್ಲೆಂದರಲ್ಲಿ ಉಕ್ಕಿ ಹರಿಯುತ್ತಿದ್ದರೂ ಗಮನಿಸುತ್ತಿಲ್ಲ. ಶಾಸಕ ಬಾಲಕೃಷ್ಣ ಪುರಸಭೆ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪುರಸಭೆ ಸದಸ್ಯೆ ವಿಜಯಾ ರೂಪೇಶ್ ಮಾತನಾಡಿ, 15ನೇ ಹಣಕಾಸು ಯೋಜನೆಯಡಿ 23 ವಾರ್ಡ್ ಗಳಿಗೆ ಸೇರಿ 1.24 ಕೋಟಿ ಅನುದಾನವಿದ್ದು, ಇದರಲ್ಲಿ ನಿರ್ಬಂಧಿತ ಅನುದಾನ 74.40 ಲಕ್ಷ ರು., ಮುಕ್ತ ಅನುದಾನ 49.60 ಲಕ್ಷ ರು. ಹಾಗೂ ಪುರಸಭಾ ನಿಧಿ 25.46 ಲಕ್ಷ ರು. ಅನುದಾನವಿದ್ದು, ಪ್ರತಿ ವಾರ್ಡ್‌ಗೂ 3-4 ಲಕ್ಷ ರು. ಅಭಿವೃದ್ಧಿ ಕೆಲಸ ಮಾಡುತ್ತಿದ್ದೆವು. ಆದರೆ ಶಾಸಕ ಬಾಲಕೃಷ್ಣ ಕೇವಲ 4, 6, 8, 14, 16 ವಾರ್ಡ್‌ಗಳಿಗೆ ಮಾತ್ರ ಅನುದಾನ ಹಂಚುತ್ತಿದ್ದು, ಅನುದಾನವನ್ನು ಸಮನಾಗಿ ಹಂಚಬೇಕು ಎಂದು ಒತ್ತಾಯಿಸಿದರು.

ಪುರಸಭಾ ಸದಸ್ಯರಾದ ಅಶ್ವತ್ಥ, ಅನಿಲ್ ಕುಮಾರ್, ಜಯರಾಂ, ರಾಮು, ರೇಖಾ, ನವೀನ್‌, ನಾಗರತ್ನ ಭಾಗವಹಿಸಿದ್ದರು.ಪೋಟೋ 10ಮಾಗಡಿ1:

ಮಾಗಡಿಯಲ್ಲಿ ಪುರಸಭಾ ಜೆಡಿಎಸ್‌ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''