ಶಾಸಕರ ಹಿಂಬಾಲಕರಿಗೆ ಆಶ್ರಯ ಮನೆ ನಿರ್ಮಾಣ ಜಾಗ ಹಂಚಿಕೆ ಆರೋಪ

KannadaprabhaNewsNetwork |  
Published : Jun 11, 2024, 01:33 AM IST
4546 | Kannada Prabha

ಸಾರಾಂಶ

ಆಶ್ರಯ ಯೋಜನೆಯ ನಿವೇಶನಗಳು ಬಡವರಿಗೆ ಸಿಗಬೇಕು. ಆದರೆ, ಅವರು ರಾಜಕೀಯ ಪ್ರಭಾವಿಗಳ ಪಾಲಾಗುತ್ತಿವೆ. ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಬೆದರಿಕೆ ಹಾಕಲಾಗಿದೆ ಎಂದು ಪರಶುರಾಮ ದಾವಣಗೆರೆ ಆರೋಪಿಸಿದ್ದಾರೆ.

ಹುಬ್ಬಳ್ಳಿ:

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಆಶ್ರಯ ಯೋಜನೆ ಮನೆಗಳನ್ನು ನಿರ್ಮಿಸಲು ಮೀಸಲಿಟ್ಟ ಜಾಗವನ್ನು ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಉಪ ಮೇಯರ್ ಸತೀಶ ಹಾನಗಲ್‌ ಅವರು ತಮ್ಮ ಹಿಂಬಾಲಕರಿಗೆ ಕಾನೂನು ಬಾಹಿರವಾಗಿ ಹಂಚಿಕೆ ಮಾಡಿರುವುದಾಗಿ ಜೈಭೀಮ್ ಯುವ ಸಂಘದ ಅಧ್ಯಕ್ಷ ಪರಶುರಾಮ ದಾವಣಗೆರೆ ಆರೋಪಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಆನಂದ ನಗರದ ಕೃಷ್ಣಾ ಕಾಲನಿಯ ಸರ್ವೇ ಸಂಖ್ಯೆ 93/ಎ ರಲ್ಲಿ 2 ಎಕರೆ 20 ಗುಂಟೆ ಜಾಗವನ್ನು ಆಶ್ರಯ ಯೋಜನೆ ಫಲಾನುಭವಿಗಳಿಗಾಗಿ ಮೀಸಲಿಡಲಾಗಿದೆ. 111 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದ್ದು, ಅದರಲ್ಲಿ ಶಾಸಕ, ಉಪಮೇಯರ್ ಅವರ 15ಕ್ಕೂ ಹೆಚ್ಚು ಜನ ಬೆಂಬಲಿಗರಿಗೆ ಹಕ್ಕುಪತ್ರ ನೀಡಲಾಗಿದೆ. ಈ ಅವ್ಯವಹಾರದ ಕುರಿತು ಮಾಹಿತಿ ಹಕ್ಕು ಕಾಯ್ದೆಯ ಅಡಿ ಪಡೆದ ದಾಖಲೆಗಳ ಸಮೇತ 2023ರ ಡಿಸೆಂಬರ್ 30ರಂದು ಪೊಲೀಸ್ ಕಮಿಷನರ್‌ ಅವರು ನಡೆಸಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯಲ್ಲಿ ಧ್ವನಿ ಎತ್ತಿದ್ದೆ. ಹೀಗಾಗಿ ಶಾಸಕರು ಹಾಗೂ ಉಪಮೇಯರ್ ಅವರ ಹಿಂಬಾಲಕರು ನನಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಆಶ್ರಯ ಯೋಜನೆಯ ನಿವೇಶನಗಳು ಬಡವರಿಗೆ ಸಿಗಬೇಕು. ಆದರೆ, ಅವರು ರಾಜಕೀಯ ಪ್ರಭಾವಿಗಳ ಪಾಲಾಗುತ್ತಿವೆ. ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಬೆದರಿಕೆ ಹಾಕಲಾಗಿದೆ ಎಂದರು.

ನಿವೇಶನ ಹಂಚಿಕೆಯಲ್ಲಿ ಭಾರಿ ಪ್ರಮಾಣದ ಅವ್ಯಹಾರ ನಡೆದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಿಜವಾದ ಫಲಾನುಭವಿಗಳಿಗೆ ನಿವೇಶನ ಸಿಗುವಂತೆ ಮಾಡಬೇಕು. ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಉಪಾಧ್ಯಕ್ಷ ರಾಜು ತೇರದಾಳ, ನಾಗರಾಜ ಅಂಬಿಗೇರ, ವಿಶ್ವನಾಥ್ ಬೂದುರ, ಸಾಯಿನಾಥ ಕೊರವರ ಸೇರಿದಂತೆ ಹಲವರಿದ್ದರು.

ಮೂವರ ವಿರುದ್ಧ ಪ್ರಕರಣ ದಾಖಲು

ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಉಪಮೇಯರ್‌ ಸತೀಶ ಹಾನಗಲ್‌ ಸೇರಿದಂತೆ ಮೂವರ ಮೇಲೆ ಇಲ್ಲಿನ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಶಾಸಕರ ಕುಮ್ಮಕ್ಕಿನಿಂದ ತಮಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಪರಶುರಾಮ ದಾವಣಗೆರೆ ನೀಡಿದ ದೂರಿನನ್ವಯ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೊಳಚೆ ನಿರ್ಮೂಲನ ಮಂಡಳಿ ನೀಡಿರುವ ಹಕ್ಕುಪತ್ರ ವಿತರಣೆ ಕುರಿತು ಸಲ್ಲಿಸಿದ್ದ ಅರ್ಜಿ ಕುರಿತು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಏನಿದು ಪ್ರಕರಣ?:

2023 ಡಿ. 30ರಂದು ಪೊಲೀಸ್‌ ಕಮಿಷನ‌ರ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕುಂದು ಕೊರತೆ ಸಭೆ ನಡೆದಿತ್ತು. ಅಂದು ಪರಶುರಾಮ ದಾವಣಗೆರೆ ಅವರು, ಆನಂದನಗರದ ಕೃಷ್ಣಾ ಕಾಲನಿಗೆ ಸಂಬಂಧಪಟ್ಟ ಖಾಲಿ ಜಾಗವನ್ನು ಕೊಳಚೆ ನಿರ್ಮೂಲನ ಮಂಡಳಿ ಅಕ್ರಮವಾಗಿ ಹಕ್ಕುಪತ್ರ ವಿತರಿಸಿದೆ ಎಂದು ದೂರಿ, ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯನ್ನು ಹಿಂಪಡೆಯುವಂತೆ ಉಪ ಮೇಯರ್ ಸತೀಶ ಹಾನಗಲ್ ಹಾಗೂ ಶಾಸಕ ಅರವಿಂದ ಬೆಲ್ಲದ ಕುಮ್ಮಕ್ಕಿನಿಂದ ಲಕ್ಷ್ಮಣ ಭೋವಿ ಅವರು ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಆರೋಪಿತರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಪರಶುರಾಮ ಅವರು 4ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು. ನ್ಯಾಯಾಲಯವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!