ಹಿರೇಕೆರೂರು: ಶಿಕ್ಷಣ, ಉದ್ಯೋಗ ಸೃಷ್ಟಿ, ಕೃಷಿ ಹಾಗೂ ರೈಲು ಮಾರ್ಗ ನಿರ್ಮಾಣ ಸೇರಿದಂತೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರಕ್ಕೆ ಆಗಬೇಕಾದ ಎಲ್ಲ ಕೆಲಸ ಕಾರ್ಯಗಳನ್ನು ಮಾಡಲು, ನಿಮ್ಮೆಲ್ಲರ ಧ್ವನಿಯಾಗಿ ಪ್ರಾಮಾಣಿಕವಾಗಿ ಸಂಸದನಾಗಿ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮನವಿ ಮಾಡಿದರು.
ತಾಲೂಕಿನ ಅಬಲೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ ನುಡಿದಂತೆ ನಡೆದ ಪಕ್ಷವಾಗಿದೆ. ಈಗಾಗಲೇ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯ ಮಾಡಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್‌ಗೆ ಶಕ್ತಿ ತುಂಬುವ ಕಾರ್ಯ ಮಾಡುವ ಮೂಲಕ ಮಹಿಳೆಯರಿಗೆ ರೈತರಿಗೆ ಮತ್ತಷ್ಟು ಶಕ್ತಿ ತುಂಬಲು ನನಗೆ ಆಶೀರ್ವಾದ ಮಾಡಬೇಕು ಎಂದರು.
ಚುನಾವಣೆ ಬಂದ ಮೇಲೆ ಎಲ್ಲರೂ ಬರುತ್ತೇವೆ, ಮತದಾರ ಪ್ರಭುಗಳಿಗೆ ಶಕ್ತಿ ನೀಡಿದ್ದು ಕಾಂಗ್ರೆಸ್ ಪಕ್ಷ. ಬಹಳಷ್ಟು ಜನ ಅಧಿಕಾರ ಅನುಭವಿಸಿದ್ದಾರೆ. ಅದರಲ್ಲಿ ನಾವು ಮಾಡಿದ ಕೆಲಸ ಅಜರಾಮವಾಗಿರಬೇಕು, ಸದಾ ನಿಮ್ಮ ಜತೆ ಇದ್ದು ನಿಮ್ಮ ನಂಬಿಕೆಗೆ ಪಾತ್ರನಾಗಿರುತ್ತೇನೆ. ಜನ ಸಂಪರ್ಕದಲ್ಲಿತ್ತೇನೆ, ಪ್ರತಿ ಎರಡು ತಿಂಗಳಿಗೊಮ್ಮೆ ಹಿರೇಕೆರೂರ ಮತ ಕ್ಷೇತ್ರಕ್ಕೆ ಬಂದು ನಿಮ್ಮೆಲ್ಲರ ಸಂಪರ್ಕದಲ್ಲಿದ್ದುಕೊಂಡು ಪ್ರಾಮಾಣಿಕವಾಗಿ ಸೇವೆ ಮಾಡಲು ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಮನವಿ ಮಾಡಿದರು.ಶಾಸಕ ಯು.ಬಿ. ಬಣಕಾರ ಮಾತನಾಡಿ, ಕ್ಷೇತ್ರದಲ್ಲಿ ಹೊಸ ಬಿರುಗಾಳಿ ಬೀಸುತ್ತದೆ. ಈ ಹಿಂದಿನ ಎಲ್ಲ ಚುನಾವಣೆಗಳ ಇತಿಹಾಸ ಅಳಿಸಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ ಮಡಿವಾಳರ, ಎಸ್.ಬಿ. ತಿಪ್ಪಣ್ಣನವರ, ಮಹೇಶ ಗುಬ್ಬಿ, ಮಹೇಂದ್ರ ಬಡಳ್ಳಿ, ಷಣ್ಮುಖಯ್ಯ ಮಳಿಮಠ, ಮಲ್ಲಿಕಾರ್ಜುನ ಬುರಡೀಕಟ್ಟಿ, ನಿಂಗಪ್ಪ ಚಳಗೇರಿ, ಮಲ್ಲನಗೌಡ ಪುಟ್ಟಪ್ಪಗೌಡ್ರ, ಉಳಿವೆಪ್ಪ ಸಾಲಿ, ವಿ.ಎಸ್..ಪುರದ ಸೇರಿದಂತೆ ನೂಲಗೇರಿ, ಕಳಗೊಂಡ ಹಾಗೂ ಅಬಲೂರು ಗ್ರಾಮಗಳ ಪಕ್ಷದ ಮುಖಂಡರು, ಕಾರ್ಯಕರ್ತರಿದ್ದರು.