ತುಳುನಾಡಿನ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗೆ ಅವಕಾಶ ನೀಡಿ: ಶಾಸಕ ಯಶ್ಪಾಲ್ ಮನವಿ

KannadaprabhaNewsNetwork |  
Published : Feb 18, 2025, 12:34 AM IST
17ಮನವಿ | Kannada Prabha

ಸಾರಾಂಶ

ಜಿಲ್ಲಾಡಳಿತ ಕಠಿಣ ನಿಯಮಾವಳಿಗಳನ್ನು ರೂಪಿಸಿರುವುದರಿಂದ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಅನಾನುಕೂಲವಾಗುತ್ತಿದೆ. ಜಿಲ್ಲಾಡಳಿತ ಈ ಬಗ್ಗೆ ನಿರ್ಧಾರ ಪುನರ್ ಪರಿಶೀಲಿಸಿ ಸಹಕರಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿಯಾಗಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲೆಯಲ್ಲಿ ತುಳುನಾಡಿನ ಧಾರ್ಮಿಕ ಆಚರಣೆ ಹಾಗೂ ಜನಜೀವನದ ಸಂಸ್ಕೃತಿಯ ಭಾಗವಾಗಿ ಗುರುತಿಸಿಕೊಂಡಿರುವ ಕಂಬಳ, ಕೋಳಿ ಪಡೆ, ಯಕ್ಷಗಾನ, ನೇಮೋತ್ಸವ, ನಾಗಮಂಡಲ ಮೊದಲಾದ ಕಾರ್ಯಕ್ರಮಗಳ ಆಯೋಜನೆ ಸಂದರ್ಭದಲ್ಲಿ ಜಿಲ್ಲಾಡಳಿತ ಕಠಿಣ ನಿಯಮಾವಳಿಗಳನ್ನು ರೂಪಿಸಿರುವುದರಿಂದ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಅನಾನುಕೂಲವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಬಗ್ಗೆ ನಿರ್ಧಾರ ಪುನರ್ ಪರಿಶೀಲಿಸಿ ಸಹಕರಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿಯಾಗಿ ಮನವಿ ಮಾಡಿದರು.

ದೈವಾರಾಧನೆಯ ಚೌಕಟ್ಟಿನಲ್ಲಿ ದೈವಗಳಿಗೆ ರಕ್ತಹಾರದ ಕಲ್ಪನೆಯಲ್ಲಿ ಹಲವು ದೈವಸ್ಥಾನ, ಮಂದಿರಗಳಲ್ಲಿ ಹಲವಾರು ದಶಕಗಳಿಂದ ಕೋಳಿಪಡೆ ಆಯೋಜಿಸುವ ಪದ್ಧತಿ ಇದೆ, ಹಾಗೂ ಜಿಲ್ಲೆಯಾದ್ಯಂತ ಯಕ್ಷಗಾನ, ನೇಮೋತ್ಸವ ಕಾರ್ಯಕ್ರಮಗಳು ಈ ಹಿಂದಿನಿಂದಲೂ ನಿರಂತರವಾಗಿ ನಡೆಯುತ್ತಿದ್ದು ಈ ಬಗ್ಗೆ ಜಿಲ್ಲಾಡಳಿತ ತುಳುನಾಡಿನ ಸಾಂಸ್ಕೃತಿಕ ಹಿನ್ನೆಲೆ, ಧಾರ್ಮಿಕ ನಂಬಿಕೆಗಳಿಗೆ ಪೂರಕವಾಗಿ ಅವಕಾಶ ನೀಡಿ ಸಹಕರಿಸಬೇಕು.

ತುಳುನಾಡಿನಲ್ಲಿ ಧಾರ್ಮಿಕ ಆಚರಣೆಗಳನ್ನು ಶ್ರದ್ದಾ ಭಕ್ತಿಯಿಂದ ನಡೆಸಿಕೊಂಡು ಬರುವ ಭಕ್ತರಿಗೆ ಭಾವನಾತ್ಮಕ ವಿಷಯವಾಗಿದ್ದು ಈ ಹಿಂದಿನಂತೆ ಆಚರಣೆಗೆ ಅವಕಾಶ ನೀಡಬೇಕು ಈ ಬಗ್ಗೆ ಸಾರ್ವಜನಿಕರ ಪರವಾಗಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೂ ಮನವಿ ಮಾಡುವುದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಧಾರ್ಮಿಕ ಆಚರಣೆಗೆ ಜಿಲ್ಲಾಡಳಿತ ಸಹಕಾರ ನೀಡದಿದ್ದಲ್ಲಿ ಜಿಲ್ಲೆಯ ಸಮಸ್ತ ಭಕ್ತರು, ದೇವಸ್ಥಾನದ ಪ್ರಮುಖರು, ಸಾರ್ವಜನಿಕರು ಪಕ್ಷಾತೀತವಾಗಿ ತುಳುನಾಡಿನ ಆಚರಣೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಟ ನಡೆಸುವ ಸನ್ನಿವೇಶ ನಿರ್ಮಾಣವಾಗಲಿದೆ ಎಂದರು.

ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ, ಹರಿಮಕ್ಕಿ ರತ್ನಾಕರ ಶೆಟ್ಟಿ, ಸುರೇಶ್ ನಾಯಕ್ ಕುಯಿಲಾಡಿ, ದಿನಕರ ಬಾಬು, ಕಿರಣ್ ಕುಮಾರ್ ಬೈಲೂರು, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ದಿನೇಶ್ ಅಮೀನ್, ರಾಜೀವ್ ಕುಲಾಲ್, ಬಾಲಕೃಷ್ಣ ಶೆಟ್ಟಿ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಪದ ಉಳಿಯಲು ಸಂಘ-ಸಂಸ್ಥೆಗಳಿಂದ ಸಾಧ್ಯ
ಪ್ರವಾಸಿಗರಿಂದ ತುಂಬಿದ ಗೋಕರ್ಣ