ಪ್ರವಾಸಿ ತಾಣಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಲಗ್ಗೆ ಇಟ್ಟಿದ್ದು, ಶನಿವಾರ ವಾಹನ ನಿಲುಗಡೆಗೂ ಜಾಗವಿಲ್ಲದಂತಾಗಿದೆ.
ಗೋಕರ್ಣ: ಪ್ರವಾಸಿ ತಾಣಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಲಗ್ಗೆ ಇಟ್ಟಿದ್ದು, ಶನಿವಾರ ವಾಹನ ನಿಲುಗಡೆಗೂ ಜಾಗವಿಲ್ಲದಂತಾಗಿದೆ.
ಮಹಾಬಲೇಶ್ವರ ಮಂದಿರದಲ್ಲಿ ದೇವರ ದರ್ಶನಕ್ಕೆ ಶಿವರಾತ್ರಿಗಿಂತ ಹೆಚ್ಚು ಜನಸಾಗರವಿದ್ದು, ಮುಖ್ಯ ಕಡಲತೀರದ ವರೆಗೆ ಒಂದು ಕಿ.ಮೀ. ದೂರದ ಸಾಲು ನೆರೆದಿದೆ. ಮಂದಿರದ ಆಡಳಿತ ಸಮಿತಿ ಹಾಗೂ ಸಿಬ್ಬಂದಿ ಭಕ್ತರ ಅನುಕೂಲ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಇನ್ನೊಂದೆಡೆ ಗೋಕರ್ಣದ ಧಾರಣಾ ಶಕ್ತಿ ಮೀರಿ ಜನರು ಬರುತ್ತಿರುವುದು ಬಹುದೊಡ್ಡ ಸವಾಲಾಗಿದೆ.ಸ್ಥಳೀಯ ಆಡಳಿತ ಅಥವಾ ಜಿಲ್ಲಾಡಳಿತ ಪೂರ್ವಭಾವಿಯಾಗಿ ಸಭೆ ನಡೆಸಿ ಜಾತ್ರೆಯ ಸಮಯದಲ್ಲಿ ಜನರಿಗೆ ವ್ಯವಸ್ಥೆಯ ಕುರಿತು ಚರ್ಚಿಸಿದಂತೆ ಸೂಕ್ತ ನಿರ್ಣಯ ಕೈಗೊಂಡು ವ್ಯವಸ್ಥೆ ಕಲ್ಪಿಸಬೇಕಿತ್ತು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಪ್ರತಿ ಬಾರಿ ವರ್ಷದ ಕೊನೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ತಿಳಿದಿದ್ದರೂ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದ ಕಾರಣ ಜನರ ಪ್ರವಾಸ ಪ್ರಯಾಸವಾಗಿ ಮಾರ್ಪಟ್ಟಿದೆ.ಏನಾಗಿದೆ, ಏನಾಗಬೇಕು?
ಪ್ರವಾಹದ ರೀತಿಯಲ್ಲಿ ಪ್ರವಾಸಿಗರು ಈ ಸಮಯದಲ್ಲಿ ಆಗಮಿಸುತ್ತಾರೆ. ಹೆಚ್ಚಾಗಿ ಉದ್ಯೋಗಸ್ಥರು ತಮಗೆ ಸಿಗುವ ವರ್ಷದ ಉಳಿಕೆ ರಜೆಯನ್ನ ಪೂರ್ತಿಗೊಳಿಸಲು, ಕ್ರಿಸ್‌ಮಸ್ ಮತ್ತಿತರ ರಜೆ ಹೊಂದಿಸಿ ಇಲ್ಲಿಗೆ ಬರುತ್ತಾರೆ. ಬಹುತೇಕ ಪ್ರವಾಸಿಗರು ಖಾಸಗಿ ವಾಹನದಲ್ಲಿ ಬರುವುದರಿಂದ ವಾಹನ ನಿಲುಗಡೆ ಸ್ಥಳವಕಾಶ ಒದಗಿಸುವುದರ ಜೊತೆ ಈ ವಾಹನ ನಿಲುಗಡೆಯ ಸ್ಥಳದಲ್ಲಿ ಕುಡಿಯುವ ನೀರು ಸ್ವಚ್ಛತೆಯ ಬಗ್ಗೆ ನಿಗಾ ಇಡಲು ಸಿಬ್ಬಂದಿ ನಿಯೋಜಿಸಬೇಕಿದೆ.
ಪ್ರಸ್ತುತ ವಾಹನಗಳನ್ನು ಭದ್ರಕಾಳಿ ಕಾಲೇಜು, ಬಂಗ್ಲೆಗುಡ್ಡದ ಪ್ರವಾಸಿ ಮಂದಿರದ ಆವಾರ, ಬಸ್ ನಿಲ್ದಾಣದಲ್ಲಿ , ಮುಖ್ಯಕಡಲತೀರದಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ. ಮುಖ್ಯಕಡಲತೀರದಲ್ಲಿ ಮೊದಲೇ ಭರ್ತಿಯಾಗುವುದರಿಂದ, ಉಳಿದ ಕಡೆ ವಾಹನ ನಿಲುಗಡೆಗೊಳಿಸಿದ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯಗಳು ಇಲ್ಲದೆ ಮಹಿಳೆಯರು, ಮಕ್ಕಳು ಪರದಾಡುತ್ತಿದ್ದಾರೆ. ಇದರ ಜೊತೆ ದೇವಾಲಯ ಮತ್ತಿತರ ಕಡೆ ತೆರಳಲು ಎರಡು ಕಿ.ಮೀಯಷ್ಟು ನಡೆದೇ ತೆರಳಬೇಕಿದೆ. ಇಲ್ಲವಾದಲ್ಲಿ ರಿಕ್ಷಾ ಅವಲಂಬಿಸಬೇಕಿದ್ದು, ಇದಕ್ಕೆ ಮತ್ತಷ್ಟು ಹಣ ನೀಡ ಬೇಕಾಗುತ್ತದೆ. ಹಣ ದುಪ್ಪಟ್ಟು ನೀಡಿದರೂ ಸಿಗದ ವಸತಿ ಗೃಹಇಲ್ಲಿನ ಎಲ್ಲ ವಸತಿ ಗೃಹಗಳು ಭರ್ತಿಯಾಗಿದೆ. ಅಳಿದುಳಿದ ವಸತಿ ಗೃಹಗಳ ದರ ಗಗನಕ್ಕೇರಿದ್ದು, ಸಾಮಾನ್ಯ ಪ್ರವಾಸಿಗ ರಸ್ತೆ ಅಂಚು, ಬಸ್ ನಿಲ್ದಾಣದಲ್ಲಿ ರಾತ್ರಿ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಎಲ್ಲ ಹೊಟೇಲ್‌ಗಳಲ್ಲಿ ಊಟ ನೀಡುತ್ತಿದ್ದರೂ ರಾತ್ರಿ ಹಾಗೂ ಮಧ್ಯಾಹ್ನದ ನಂತರ ಎಲ್ಲರಿಗೂ ಊಟ ಸಿಗುವುದು ಕಷ್ಟವಾಗಿದ್ದು, ಕುರುಕುಲು ತಿಂಡಿಯಲ್ಲೆ ಸಂತೃಪ್ತಿ ಪಟ್ಟುಕೊಳ್ಳಬೇಕಿದೆ.
ಸರ್ಕಾರ ಬಡಜನರಿಗಾಗಿಯೇ ಯಾತ್ರಿ ನಿವಾಸ ನಿರ್ಮಿಸಬೇಕು ಎಂಬ ಜನರ ಆಗ್ರಹದಂತೆ ಕಳೆದ ಐದಾರು ವರ್ಷಗಳ ಹಿಂದೆ ಕಟ್ಟಡಕ್ಕೆ ಅಡಿಗಲ್ಲು ಹಾಕಿ ಕೈತೊಳೆದುಕೊಳ್ಳಲಾಗಿದ್ದು, ಇದುವರೆಗೂ ಈ ಬಗ್ಗೆ ಕ್ರಮ ತೆಗೆದುಕೊಳ್ಳದೆ ಕೈಬಿಡಲಾಗಿದೆ.ಶಾಲಾ ಮಕ್ಕಳ ಪ್ರವಾಸದ ಗೋಳು
ಶೈಕ್ಷಣಿಕ ಪ್ರವಾಸದ ಅವಧಿ ಈ ತಿಂಗಳು ಕೊನೆಗೊಳ್ಳುವುದರಿಂದ ಈ ಜನ ಜಾತ್ರೆಯ ನಡುವೆ ಆಗಮಿಸುತ್ತಿದ್ದಾರೆ. ಕನಿಷ್ಟ ೫೦ ಮಕ್ಕಳ ತಂಡಕ್ಕೆ ವಸತಿ, ಕುಡಿಯುವ, ನೀರು, ಶೌಚಾಲಯದ ವ್ಯವಸ್ಥೆ ನೀಡುವುದು ಕಷ್ಟ ಸಾಧ್ಯವಾಗಿದ್ದು, ತೀವ್ರ ಪರದಾಟ ನಡೆಸುತ್ತಾರೆ. ಮಹಾಬಲೇಶ್ವರ ಮಂದಿರದ ಪ್ರಸಾದ ಭೋಜನ ವ್ಯವಸ್ಥೆಯಲ್ಲಿನ ಉಚಿತ ಊಟ ಮಾತ್ರ ಇವರಿಗೆ ಅನುಕೂಲವಾಗುತ್ತಿದ್ದು, ಇದರಂತೆ ಉಳಿದ ಜನರಿಗೂ ನಿಗದಿತ ಸಮಯದಲ್ಲಿ ತಲುಪಿದರೆ ಪ್ರಸಾದ ದೊರೆತು ತುಸು ನೆಮ್ಮದಿ ಕಾಣುತ್ತಾರೆ.ಕಡಲಲಲ್ಲಿ ಜೀವರಕ್ಷಕರು, ಪೇಟೆಯಲ್ಲಿ ಪೊಲೀಸರ ಶ್ರಮ
ಕಡಲತೀರದಲ್ಲಿ ನೀರಿಗಳಿಯುವವರ ಮೇಲೆ ಜೀವರಕ್ಷಕ ಸಿಬ್ಬಂದಿ, ಪ್ರವಾಸಿ ಮಿತ್ರ ಸಿಬ್ಬಂದಿ ತಿಳಿ ಹೇಳುತ್ತ ನಿಗಾ ಇಟ್ಟಿದ್ದಾರೆ. ಇತ್ತ ಎಲ್ಲ ಪ್ರಮುಖ ಮಾರ್ಗದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಶ್ರಮಿಸುತ್ತಿದ್ದು. ಪಿ.ಐ. ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ಪಿ.ಎಸ್.ಐ. ಖಾದರ ಬಾಷಾ, ಶಶಿಧರ ಹಾಗೂ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಪೊಲೀಸ್ ಮೀಸಲು ಪಡೆ ಹಾಗೂ ಇತರೆ ಠಾಣೆಯಿಂದ ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗಿದೆ.