ಪ್ರಸಕ್ತ ವರ್ಷದ ದಾಖಲೆ । ದರದಲ್ಲಿ ಸ್ಥಿರತೆ । ಮಾರುಕಟ್ಟೆ ಮತ್ತು ಪಟ್ಟಣದಲ್ಲಿ ಜನಜಂಗುಳಿ
ಕನ್ನಡಪ್ರಭ ವಾರ್ತೆ ಬ್ಯಾಡಗಿಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಪ್ರಸಕ್ತ ಸಾಲಿನಲ್ಲಿಯೇ ದಾಖಲೆ ಪ್ರಮಾಣದಲ್ಲಿ 2.43 ಲಕ್ಷ ಚೀಲ ಮೆಣಸಿನಕಾಯಿ ಆವಕವಾಗಿದ್ದು, ಇದರಿಂದ ಮಾರುಕಟ್ಟೆ ಆವರಣವು ಅಕ್ಷರಶಃ ಕೆಂಪು ಕೆಂಪಾಗಿದೆ. ಕಣ್ಣು ಹಾಯಿಸಿದಷ್ಟು ದೂರದ ವರೆಗೆ ಮೆಣಸಿನಕಾಯಿ ಚೀಲಗಳೇ ಕಾಣುತ್ತಿವೆ.
ಕಳೆದೊಂದು ತಿಂಗಳಿಂದ 1 ಲಕ್ಷ ಅಸುಪಾಸಿನಲ್ಲಿದ್ದ ಮೆಣಸಿನಕಾಯಿ ಆವಕ 2 ಲಕ್ಷದ ಗಡಿ ದಾಟಿದೆ. ಪ್ರಸಕ್ತ ವರ್ಷದ (ಸೀಸನ್) ಎಲ್ಲಾ ದಾಖಲೆ ಬದಿಗೊತ್ತಿ ಸೋಮವಾರ 2.43.483 ಲಕ್ಷ ಮೆಣಸಿನಕಾಯಿ ಚೀಲಗಳು ಆವಕವಾಗಿವೆ.ಘಾಟು ಜೋರು:
ಇಷ್ಟೊಂದು ಪ್ರಮಾಣದಲ್ಲಿ ನಿರೀಕ್ಷೆಗೂ ಮೀರಿ ಮೆಣಸಿನಕಾಯಿ ಆವಕವಾದ ಕಾರಣ ಮಾರುಕಟ್ಟೆಯಲ್ಲಿ ಮೆಣಸಿನ ಘಾಟು ಆವರಿಸಿದೆ. ಮಾರುಕಟ್ಟೆಯಲ್ಲಿ ಕಾಲಿಡಲು ಸಹ ಜಾಗವಿಲ್ಲದಂತಾಗಿದ್ದು, ರಸ್ತೆಗಳ ಮೇಲಿಟ್ಟು ಮೆಣಸಿನಕಾಯಿ ಮಾರಾಟ ಮಾಡಲು ದಲಾಲರು ಮುಂದಾದರು. ಮಾರುಕಟ್ಟೆ ಮತ್ತು ಪಟ್ಟಣದಲ್ಲಿ ಜನಜಂಗುಳಿ ಜೋರಾಗಿದ್ದು, ಹೋಟೆಲ್ ಸೇರಿದಂತೆ ವಿವಿಧ ಅಂಗಡಿಗಳು ಭರ್ಜರಿ ವ್ಯಾಪಾರ ನಡೆಸಿದವು.ಕಳೆದೆರಡು ವಾರದಿಂದ ತಡರಾತ್ರಿ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಅನ್‌ಲೋಡ್ ಆಗದೇ ಲಾರಿಯಲ್ಲೇ ಮೆಣಸಿನಕಾಯಿ ಚೀಲಗಳು ಉಳಿಯಿತು. ಹೀಗಾಗಿ ಮಾರಾಟಕ್ಕೆ ಬಂದಿದ್ದ ಮೆಣಸಿನಕಾಯಿ ಚೀಲಗಳು ಇಂದಿನ ಮಾರುಕಟ್ಟೆಗೆ ಟೆಂಡರ್‌ಗೆ ತಲುಪಿದ್ದಲ್ಲಿ 3 ಲಕ್ಷ ಸಮೀಪಿಸುತ್ತಿತ್ತು ಎಂಬುದು ವ್ಯಾಪಾರಸ್ಥರ ಅಂಬೋಣ.
ದರದಲ್ಲಿ ಮತ್ತೆ ಸ್ಥಿರತೆ:ಇಷ್ಟೊಂದು ಪ್ರಮಾಣದಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಬಂದ ಹಿನ್ನೆಲೆ ದರದಲ್ಲಿ ಅಲ್ಪಮಟ್ಟಿನ ಇಳಿಕೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಕಳೆದ ವಾರದ ದರಗಳಿಗೆ ಹೋಲಿಸಿದ್ದಲ್ಲಿ ಸೋಮವಾರವೂ ಕೂಡ ಕಡ್ಡಿ, ಡಬ್ಬಿ, ಗುಂಟೂರ ತಳಿ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.
ಮಾರುಕಟ್ಟೆ ದರ:ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿ ಮೆಣಸಿನಕಾಯಿ ತಳಿ ಕನಿಷ್ಠ ₹2899, ಗರಿಷ್ಠ ₹51091, ಸರಾಸರಿ ₹37269, ಡಬ್ಬಿ ತಳಿ ಕನಿಷ್ಠ ₹3209, ಗರಿಷ್ಠ ₹57333, ಸರಾಸರಿ ₹41059, ಗುಂಟೂರು ಕನಿಷ್ಠ ₹1629, ಗರಿಷ್ಠ ₹18269, ಸರಾಸರಿ ₹14289ಗೆ ಮಾರಾಟವಾಯಿತು.