ಶಶಿಕುಮಾರ ಪತಂಗೆ
ಬರೀ ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಬಡ್ಡಿ ದಂಧೆಯು ಇದೀಗ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದ್ದು ಅದರಲ್ಲೂ ಅಳ್ನಾವರ ಅಂತಹ ಪಟ್ಟಣದಲ್ಲಿ ಎಲ್ಲೆ ಮೀರಿದೆ. ಮೀಟರ್ ಬಡ್ಡಿ ದಂಧೆಯು ಇಲ್ಲಿಯ ಜನರನ್ನು ತೊಂದರೆಯಲ್ಲಿ ನೂಕುತ್ತಿದೆ.
ಗ್ರಾಮೀಣ ಭಾಗದ ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ಮಹಿಳಾ ಸಂಘಗಳನ್ನು ರಚಿಸಿ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಮೂಲಕ ಸಾಲವನ್ನು ನೀಡಿ ಸ್ವಉದ್ಯೋಗಕ್ಕೆ ಅವಕಾಶ ನೀಡುತ್ತಿದೆ. ಆದರೆ, ಕೆಲವು ಸಂಘಗಳು ಈ ಮೂಲ ಉದ್ದೇಶವನ್ನು ಮರೆತು ಸಾಲ ಕೊಡುವುದನ್ನು ಪಟ್ಟಣದಲ್ಲಿ ದಂಧೆಯನ್ನಾಗಿ ಪರಿವರ್ತಿಸಿಕೊಂಡಿವೆ. ನೂರಕ್ಕೆ ಶೇ. 3ರಂತೆ ಸಾಲ ನೀಡುತ್ತಿವೆ. ಸಾಲ ಪಡೆದ ವ್ಯಕ್ತಿ ಪ್ರತಿ ತಿಂಗಳು ಇಲ್ಲಿ ಬಡ್ಡಿ ಕಟ್ಟಲೇಬೇಕು. ಸಮಯ ತಪ್ಪದರೆ ಸಾಲ ಪಡೆದ ವ್ಯಕ್ತಿ ಚಕ್ರ ಬಡ್ಡಿಯನ್ನು ಬರಿಸಬೇಕಾಗುತ್ತದೆ.ಸ್ಮಾಲ್ ಫೈನಾನ್ಸ್ ಹಾವಳಿ:
ಗ್ರಾಮೀಣ ಭಾಗದಲ್ಲಿ ಪ್ರತಿ ತಿಂಗಳು ಇವರಿಗೆ ಕಂತಿನ ಹಣ ತುಂಬಲು ಎತ್ತುಗಳು, ಮೇಕೆ, ಜಾನುವಾರು, ಮನೆಯಲ್ಲಿದ್ದ ಧಾನ್ಯಗಳನ್ನು ಮಾರಾಟ ಮಾಡಿ ಸಾಲ ತುಂಬಿರುವ ಅನೇಕ ಘಟನೆಗಳು ಸಾಕ್ಷಿಯಾಗಿವೆ. ಇನ್ನೂ ಕೆಲವರು ಅಸಲಿಗಿಂತ ಹೆಚ್ಚು ಹಣ ತುಂಬಿದರೂ ಸಾಲ ತೀರದೆ ಮನೆಗಳುನ್ನು ಸೀಜ್ ಮಾಡಿರುವ ಹಲವು ಉದಾಹರಣಗಳಿವೆ. ದುರಂತದ ಸಂಗತಿ ಏನೆಂದರೆ, ಈ ಬಗ್ಗೆ ಎಲ್ಲಿಯೂ ಪ್ರಕರಣಗಳು ದಾಖಲಾಗಿಲ್ಲ.
ತಾಲೂಕಿನ ಪಟ್ಟಣ ಸೇರಿದಂತೆ ಕೆಲ ಭಾಗದಲ್ಲಿ ವಸ್ತುಗಳನ್ನು ಅಡವಿಟ್ಟುಕೊಂಡು ನೂರಕ್ಕೆ ಶೇ.5, 10ರಂತೆ ಸಾಲ ಕೊಡುವವರು ಹೆಚ್ಚಾಗಿದ್ದು, ಅನೇಕರು ಇವರ ಬಳಿ ಸಾಲ ಪಡೆದು ಬಡ್ಡಿ ತುಂಬದೆ ತಮ್ಮ ಹೆಸರಿನಲ್ಲಿರುವ ಆಸ್ತಿ, ವಸ್ತುಗಳನ್ನು ಮಾರಿಕೊಂಡಿದ್ದಾರೆ. ಹೆಚ್ಚಿನದಾಗಿ ಕಾರ್ಮಿಕರು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಜಿಲ್ಲಾ ಉಸ್ತವಾರಿ ಸಚಿವರು ಈ ಬಡ್ಡಿ ದಂಧೆಗೆ ಕಡಿವಾಣ ಹಾಕಬೇಕು ಎಂಬುದು ಜನರ ಆಶಯ.