ವಿಜಯಪುರ: ಮಕ್ಕಳು ಎಷ್ಟೇ ಬೆಳೆದು ದೊಡ್ಡವರಾದರೂ ತಾಯಿ ಮಾತ್ರ ತನ್ನ ಕರುಳ ಕುಡಿಯನ್ನು ಹಂಬಲಿಸುತ್ತಲೇ ಇರುತ್ತದೆ. ಮಕ್ಕಳ ಮೇಲಿನ ಬಾಂಧವ್ಯಕ್ಕೆ ತಾಯಿಯ ಪ್ರೀತಿ ಸಾಟಿಯೇ ಇಲ್ಲ ಎನ್ನುವಂತಹ ಅಪರೂಪದ ಘಟನೆಯೊಂದು ವಿಜಯಪುರ ತಾಲೂಕಿನ ಕನ್ನೂರ ಗ್ರಾಮದಲ್ಲಿ ಗುರುವಾರ ಜರುಗಿದೆ. ಸಾವಿನಲ್ಲೂ ತಾಯಿ-ಮಗ ಒಂದಾಗಿದ್ದಾರೆ.
ವಿಜಯಪುರ: ಮಕ್ಕಳು ಎಷ್ಟೇ ಬೆಳೆದು ದೊಡ್ಡವರಾದರೂ ತಾಯಿ ಮಾತ್ರ ತನ್ನ ಕರುಳ ಕುಡಿಯನ್ನು ಹಂಬಲಿಸುತ್ತಲೇ ಇರುತ್ತದೆ. ಮಕ್ಕಳ ಮೇಲಿನ ಬಾಂಧವ್ಯಕ್ಕೆ ತಾಯಿಯ ಪ್ರೀತಿ ಸಾಟಿಯೇ ಇಲ್ಲ ಎನ್ನುವಂತಹ ಅಪರೂಪದ ಘಟನೆಯೊಂದು ವಿಜಯಪುರ ತಾಲೂಕಿನ ಕನ್ನೂರ ಗ್ರಾಮದಲ್ಲಿ ಗುರುವಾರ ಜರುಗಿದೆ. ಸಾವಿನಲ್ಲೂ ತಾಯಿ-ಮಗ ಒಂದಾಗಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿದ ತಕ್ಷಣದಲ್ಲೇ ತಾಯಿಯು ಉಸಿರು ನಿಲ್ಲಿಸಿದ ಘಟನೆಯೊಂದು ಗುರುವಾರ ಬೆಳಗ್ಗೆ ಜರುಗಿದೆ. ತಾಲೂಕಿನ ಕನ್ನೂರ ಗ್ರಾಮದ ಸಿದರಾಯಗೌಡ ಪಾಟೀಲ (48) ಅನಾರೋಗ್ಯದಿಂದ ಬುಧವಾರ ರಾತ್ರಿ ನಗರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಮಗ ನಿಧನರಾದ ವಿಚಾರವನ್ನು ಗುರುವಾರ ಬೆಳಗ್ಗೆ ತಾಯಿಗೆ ತಿಳಿಸುತ್ತಿದ್ದಂತೆ ಮಗನ ಸಾವಿನ ಸುದ್ದಿ ಕೇಳಿದ ತಕ್ಷಣವೇ ತಾಯಿ ಚನ್ನಮ್ಮಗೌಡತಿ ಪಾಟೀಲ(72) ಸಹ ಹೃದಯಾಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತಾಯಿ ಚನ್ನಮ್ಮಗೌಡತಿ ಪಾಟೀಲ ಹಾಗೂ ಹಿರಿಯ ಮಗ ಸಿದರಾಯಗೌಡ ಪಾಟೀಲ ಈ ಇಬ್ಬರನ್ನು ಗ್ರಾಮದ ತೋಟದಲ್ಲಿ ಒಂದೇ ಕಡೆಯಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಒಂದೇ ದಿನದಲ್ಲಿ ಇಬ್ಬರು ಸದಸ್ಯರನ್ನು ಕಳೆದುಕೊಂಡ ಕುಟುಂಬಸ್ಥರು ಅತೀವ ದುಃಖದ ಮಡುವಿನಲ್ಲಿದ್ದಾರೆ.