ಕನ್ನಡಪ್ರಭ ವಾರ್ತೆ ವಿಜಯಪುರ ಸೋನಿಯಾಗಾಂಧಿ ಅಳಿಯನಿಗೆ ಬಿಡದಿ ಟೌನ್‌ಶಿಪ್ ಗಿಫ್ಟ್ ಕೊಡಲಾಗುತ್ತಿದೆ. ರಾಬರ್ಟ್‌ ವಾದ್ರಾಗೆ ಇಲ್ಲಿನ ಜಮೀನು ಗಿಫ್ಟ್ ನೀಡಲಾಗುತ್ತಿದೆ. ಅಲ್ಲಿನ ರೈತರೇ ನನಗೆ ಈ ವಿಷಯ ತಿಳಿಸಿದ್ದು, ಚೇತನ ಶಿವರಾಮೇಗೌಡ ಎನ್ನುವವರು ಕಾಲ್ ಮಾಡಿದ್ದರು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳರು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಸೋನಿಯಾಗಾಂಧಿ ಅಳಿಯನಿಗೆ ಬಿಡದಿ ಟೌನ್‌ಶಿಪ್ ಗಿಫ್ಟ್ ಕೊಡಲಾಗುತ್ತಿದೆ. ರಾಬರ್ಟ್‌ ವಾದ್ರಾಗೆ ಇಲ್ಲಿನ ಜಮೀನು ಗಿಫ್ಟ್ ನೀಡಲಾಗುತ್ತಿದೆ. ಅಲ್ಲಿನ ರೈತರೇ ನನಗೆ ಈ ವಿಷಯ ತಿಳಿಸಿದ್ದು, ಚೇತನ ಶಿವರಾಮೇಗೌಡ ಎನ್ನುವವರು ಕಾಲ್ ಮಾಡಿದ್ದರು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳರು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಬಿಡದಿ ಭೂಮಿಯ ವಿಚಾರವಾಗಿ ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರ ಹಿಂದೆ ₹30 ಸಾವಿರ ಕೋಟಿಯ ದೊಡ್ಡ ಹಗರಣ ಇದೆ. ಹೇಗಾದರೂ ಮಾಡಿ ಭೂಸ್ವಾಧೀನ ನಡೆಸುವ ಹುನ್ನಾರ ಇದೆ. ರೈತರನ್ನು ಒಕ್ಕಲೆಬ್ಬಿಸಬೇಕು ಅಂತಲೇ ಎರಡೂ ಕೋಟಿ, ಮೂರು ಕೋಟಿ ಕೊಡ್ತೀನಿ ಎಂದು ರೈತರನ್ನು ಯಾಮಾರಿಸಲಾಗುತ್ತಿದೆ. ಈ ಸಿಎಂ ಇರುವವರೆಗೆ ರೈತರಿಗೆ, ಸಾಮಾನ್ಯ ಜನರಿಗೆ, ದಲಿತರಿಗೆ ನೆಮ್ಮದಿ ಇಲ್ಲ. ಏನೇ ಮಾಡಿದ್ರೂ ಕುಮಾರಸ್ವಾಮಿ ಬಿಡದಿ ಹೋರಾಟ ಬಿಡಬಾರದು. ಸೋಮವಾರದಿಂದ ನಾನು ಅಧಿವೇಶನಕ್ಕೆ ಹಾಜರಾಗಲಿದ್ದೇನೆ ಎಂದು ಹೇಳಿದರು.

ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆ ಹಾಗೂ ಫುಟೇಜ್ ವೈರಲ್ ಆಗಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬ್ಲಾಕ್‌ಮೇಲ್ ಯತ್ನ ನಡೆದಿದೆ. ಬಿಡದಿ ಹೋರಾಟದ ಪಾವಿತ್ರ್ಯತೆ ಹಾಳುಮಾಡಲು ದೇವೇಗೌಡರ ಕುಟುಂಬ ಅವಮಾನಿಸಲು ಹೀಗೆ ಮಾಡಲಾಗಿದೆ. ಕ್ರಮ ತೆಗೆದುಕೊಳ್ಳಿ ಬೇಡ ಎನ್ನಲ್ಲ, ಆದರೆ, ಬಿಡದಿ ಹೋರಾಟದ ಸಂದರ್ಭದಲ್ಲಿ ಈ ರೀತಿ ಮಾಡಿದ್ದು ಯಾಕೆ? ಬಿಡದಿ ಹೋರಾಟಕ್ಕೂ ಮೊದಲು ಜೈಲಿನಲ್ಲಿ ಅಕ್ರಮ ನಡೆದಿಲ್ವಾ? ಜೈಲಿನಲ್ಲಿ ನಡೆಯುವ ವಿಷಯವನ್ನು ಬಿಚ್ಚಿಟ್ಟ ಅಧಿಕಾರಿಗಳನ್ನು ಟ್ರಾನ್ಸಫರ್‌ ಮಾಡಲಾಗುತ್ತದೆ. ಯಾಕಂದ್ರೆ ನಿಮಗೆ ಅಲ್ಲಿಂದ ಮಾಮೂಲು ಸಿಗುತ್ತದೆ ಎಂದು ಆರೋಪಿಸಿದರು.

ಕರ್ನಾಟಕ ಬಂದ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕಾವೇರಿ ನೀರಿನ ವಿಚಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಸಿಎಂ ಕಾವೇರಿ ತಟದವರೆ. ಗಟ್ಟಿಯಾದ ನಿರ್ಣಯ ತೆಗೆದುಕೊಳ್ಳಬೇಕಿತ್ತು. ಯಾವ್ಯಾವುದರಲ್ಲೋ ನಿರ್ಣಯ ಕೈಗೊಳ್ಳುತ್ತಾರೆ. ಕಾವೇರಿ ವಿಷಯದಲ್ಲೂ ಗಟ್ಟಿ ನಿರ್ಣಯ ತೆಗೆದುಕೊಳ್ಳಬೇಕಿತ್ತು. ಲಂಚ ತೆಗೆದುಕೊಂಡರೆ ಒಳಗೆ ಹಾಕುತ್ತೇನೆ ಎಂದು ಡೈಲಾಗ್ ಹೊಡೆಯುತ್ತಿದ್ದರು. ಮೊದಲೆಲ್ಲ ಕಾವೇರಿಗೆ ಏನಾದರೂ ಆದ್ರೆ ಹಾಗೇ ಹೀಗೆ ಎಂದು ಬಹಳ ಡೈಲಾಗ್ ಹೊಡೆಯುತ್ತಿದ್ದರು. ಕಾವೇರಿ ಅಂಚಿನ ಭಾಗದ ಹಿತ ಕಾಯೋದು ಸಿಎಂ ಕರ್ತವ್ಯವಾಗಿತ್ತು. ಜನರ ಹಿತ ಕಾಯುವಲ್ಲಿ ಸಿಎಂ ವಿಫಲ, ಕೃಷ್ಣೆಗೆ ಏನಾದರೂ ಆದಾಗ ದಕ್ಷಿಣದ ಜನ ಸ್ಪಂದಿಸಲ್ಲ ಎನ್ನುವ ಅಸಮಾಧಾನ ಉತ್ತರ ಕರ್ನಾಟಕದ ಜನರಿಗೆ ಇದೆ. ಕಾವೇರಿ, ಕೃಷ್ಣಾ ಕರ್ನಾಟಕದ ಎರಡು ಕಣ್ಣುಗಳು. ಒಂದು ಕಣ್ಣಿಗೆ ಏನಾದರೂ ಆದರೂ ತಪ್ಪು ಎನ್ನುತ್ತೇವೆ. ಆ ಭಾವನೆ ತರುವ ಕೆಲಸವನ್ನು ರಾಜಕಾರಣಿಗಳು, ರಕ್ಷಣಾ ವೇದಿಕೆಗಳು ಮಾಡಬೇಕಿತ್ತು, ಆದರೆ ಮಾಡಿಲ್ಲ ಎಂದರು.

ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಕಾವೇರಿ ವಿಚಾರದಲ್ಲಿ ಕರವೇ ತುಟಕ್ ಪಿಟಕ್ ಎನ್ನುತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ ರಕ್ಷಣಾ ವೇದಿಕೆಯವರು ಟನ್ ಟನ್ ಎಂದು ಜಿಗಿದಾಡುತ್ತಿದ್ದರು. ಇಂದು ಬಂದ್ ಕರೆ ಕೊಡಲ್ಲ, ಡಿಕೆಶಿ ವಿರುದ್ಧ ಮಾತನಾಡಲ್ಲ ಎನ್ನುತ್ತಾರೆ. ಇದು ಕನ್ನಡ ರಕ್ಷಣಾ ವೇದಿಕೆಯೋ ಅಥವಾ ಕಾಂಗ್ರೆಸ್ ರಕ್ಷಣಾ ವೇದಿಕೆಯೋ ಎಂದು ಯತ್ನಾಳ ಪ್ರಶ್ನಿಸಿದ್ದಾರೆ. ಕರವೇ ಯಾಕೆ ಬಂದ್‌ಗೆ ಬೆಂಬಲ ಕೊಡಲಿಲ್ಲ? ಉತ್ತರ ಕರ್ನಾಟಕ ಭಾಗದ ಕರವೇ ನಾಯಕರು ಇದನ್ನ ಪ್ರಶ್ನಿಸಬೇಕು. ಡಿ.ಕೆ.ಶಿವಕುಮಾರ ಸರ್ಕಾರ ಇರೋದಕ್ಕೆ ಬೆಂಬಲ ಇಲ್ವಾ ಎಂದು ಪ್ರಶ್ನಿಸಿದರು.ಕಾವೇರಿ ವಿಚಾರದಲ್ಲಿ ಸರ್ಕಾರದ ಸ್ಟ್ಯಾಂಡ್ ಏನು? ಸಿಎಂ, ನೀರಾವರಿ ಸಚಿವರು ತಮ್ಮ ಸ್ಟ್ಯಾಂಡ್ ತಿಳಿಸಲಿ. ಬಿಜೆಪಿ ಸರ್ಕಾರವಿದ್ದಾಗ ವಿಧಾನಸಭೆಯಲ್ಲಿ ಗಲಾಟೆ ಮಾಡುತ್ತಿದ್ದರಿ. ಈಗ ನೀವೇ ಅಧಿಕಾರದಲ್ಲಿದ್ದೀರಿ, ಕೃಷ್ಣಾ ಟ್ರಿಬುನಲ್‌ಗೆ ಹೇಳಿ. ನೀರು ಎಲ್ಲಿದೆ? ಎಲ್ಲಿಂದ ಬಿಡಬೇಕು ಎಂದು ಕೇಳಿ ಎಂದು ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿದರು.

-----

ಕೋಟ್‌

ಉದ್ದೇಶ ಪೂರ್ವಕವಾಗಿ, ದ್ವೇಷದ ಹಿನ್ನೆಲೆಯಲ್ಲಿ ಪ್ರಜ್ವಲ್‌ ಮಾತನಾಡಿರುವ ವಿಡಿಯೋವನ್ನು ವೈರಲ್ ಮಾಡಲಾಗಿದೆ. ಕೇಂದ್ರ ಸಚಿವ ಕುಮಾರಸ್ವಾಮಿ, ನಿಖಿಲ ಕುಮಾರಸ್ವಾಮಿ ಉಗ್ರ ಹೋರಾಟ ಪ್ರಾರಂಭ ಮಾಡಿದ್ದೆ ವಿಡಿಯೋ ಲೀಕ್‌ ಆಗಲು ಕಾರಣವಾಗಿದೆ. ಅಲ್ಲದೇ, ಇವರು ಭೂಸ್ವಾಧೀನಕ್ಕೆ ಮುಂದಾಗಿರುವ ಜಮೀನಿನಲ್ಲಿ ಬೆಳೆಯೇ ಇಲ್ಲ ಎಂದು ರೈತರಿಗೆ ಸುಳ್ಳು ಹೇಳಿದ್ದರು, ಸುಳ್ಳು ಹೇಳಿ ರೈತರಿಗೆ ಅಪಮಾನ ಮಾಡಿದ್ದರು.

- ಬಸನಗೌಡ ಪಾಟೀಲ ಯತ್ನಾಳ, ಶಾಸಕ