ಕನ್ನಡಪ್ರಭ ವಾರ್ತೆ ಜಮಖಂಡಿ

ಆ.15ರಿಂದ ಸರ್ಕಾರಿ ಅಧಿಕಾರಿಗಳು ಸೈಕಲ್‌ ಮೇಲೆ ಮನೆಯಿಂದ ಕಚೇರಿಗೆ ತೆರಳಲು ಪ್ರತಿಜ್ಞೆ ಸ್ವೀಕರಿಸಿದ್ದು, 25 ಅಧಿಕಾರಿಗಳು ಈ ಸಂಕಲ್ಪ ಮಾಡಿದ್ದು, ಇದಕ್ಕೆ ಶಾಸಕ ಜಗದೀಶ ಗುಡಗುಂಟಿ ಅವರು ಸ್ವಂತ ಖರ್ಚಿನಲ್ಲಿ 100 ಸೈಕಲ್‌ಗಳನ್ನು ಖರೀದಿಸಿದ್ದಾರೆ.

ಗುರುವಾರ ಸಂಜೆ ಗೃಹ ಕಚೇರಿ ಸಾಕ್ಷಾತ್ಕಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ವಾಯುಮಾಲಿನ್ಯ ನಿಯಂತ್ರಣ, ಇಂಧನ ಉಳಿತಾಯ, ಆರೋಗ್ಯ ಜಾಗೃತಿ, ಪರಿಸರ ಸ್ನೇಹಿ, ಇಂಧನ ಮುಕ್ತ, ಆರೋಗ್ಯದ ಕಡೆ ನಮ್ಮ ನಿರಂತರ ಸೈಕಲ್‌ ನಡೆ ಎಂಬ ಅಭಿಯಾನ ಗುಡಗುಂಟಿ ಪರಿವಾರದಿಂದ ಹಮ್ಮಿಕೊಳ್ಳಲಾಗಿದೆ. ಶನಿವಾರ ಬೆಳಗ್ಗೆ 7ಗಂಟೆಯಿಂದ ನಗರದಲ್ಲಿ ಎಲ್ಲ ಕಾರ್ಯಕ್ರಮಗಳಿಗೆ ಸೈಕಲ್‌ ನೊಂದಿಗೆ ಸಂಚರಿಸಲಾಗುವುದು. ಈ ಕಾರ್ಯಕ್ರಮ ಜೀವನಪರ್ಯಂತ ಮುಂದುವರಿಸುವ ಸಂಕಲ್ಪ ಮಾಡಲಾಗಿದೆ ಎಂದರು. ಸೈಕಲ್‌ ಬಳಕೆಯಿಂದ ಇಂಧನ ಉಳಿತಾಯ, ಮಾಲಿನ್ಯ ರಕ್ಷಣೆ, ಹಣ ಉಳಿತಾಯ, ಆರೋಗ್ಯದ ರಕ್ಷಣೆಗೆ ಸಹಾಯಕವಾಗಿದೆ ಎಂದು ವಿವರಿಸಿದರು.

ನಗರದ ವ್ಯಾಪ್ತಿಯಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳು, ಸಭೆಗಳು ಹಾಗೂ ಕಚೇರಿ ಕೆಲಸಗಳಿಗೆ ಸಾಧ್ಯವಾದಷ್ಟು ಸೈಕಲ್‌ನಲ್ಲಿಯೇ ತೆರಳಿ ಬರುವ ಸಂಕಲ್ಪ ಮಾಡಿದ್ದೇನೆ. ಕ್ಷೇತ್ರದ ನಿವಾಸಿಗಳೆಲ್ಲರೂ ಸೈಕಲ್‌ ಅಭಿಯಾನಕ್ಕೆ ಕೈಜೋಡಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಭಿಯಾನದ ಯಶಸ್ಸಿಗೆ ಸಾಥ್‌ ನೀಡಬೇಕು ಎಂದರು.

ಕ್ಷೇತ್ರದಲ್ಲಿ ಸುಮಾರು 78 ಸಾವಿರ ಲೀಟರ್‌ ನಷ್ಟು ಪೆಟ್ರೋಲ್‌ ಬಳಕೆಯಾಗುತ್ತದೆ, ಸೈಕಲ್‌ ಬಳಕೆಯ ಅಭಿಯಾನದಿಂದ ಇದರಲ್ಲಿ ಅರ್ಧದಷ್ಟಾದರೂ ಇಂಧನ ಉಳಿಸಬಹುದು ಎಂಬುದು ನನ್ನ ಹೆಬ್ಬಯಕೆ ಆಗಿದೆ ಎಂದರು.


ಕುಟುಂಬ ಸದಸ್ಯರಾದ ರಾಜೇಂದ್ರ ಕುಮಾರ, ಸುಧೀರ, ಧರ್ಮಲಿಂಗಯ್ಯ, ವಿರುಪಾಕ್ಷಯ್ಯ, ಪಾರ್ವತಿ, ಆನಂದ, ವಿಕ್ರಮ, ಸಂತೋಷ, ಮುಖಂಡರಾದ ನಾಗಪ್ಪ ಸನದಿ, ಅಜಯ ಕಡಪಟ್ಟಿ, ಮಲ್ಲುದಾನಗೌಡ, ದೇವಲ ದೇಸಾಯಿ, ಪಾಂಡುರಂಗ ಗಾಯಕವಾಡ, ಬಿ.ಎಂ.ಬಾಳಪ್ಪಗೋಳ, ಶ್ರೀನಿವಾಸ ಬಾದರಾಯಣ, ಶಶಿಕಾಂತ ವಿಶ್ವಬ್ರಾಹ್ಮಣ, ರಾಕೇಶ್‌ ಲಾಡ್‌, ಶಂಕರ ಕಾಳೆ, ಗಣೇಶ ಶಿರಗಣ್ಣವರ, ಎಂ.ಬಿ.ನ್ಯಾಮಗೌಡ, ರಾಜುಗೌಡ ಪಾಟೀಲ, ಸುರೇಶ ಗೌಡ ಪಾಟೀಲ, ಈಶ್ವರ ಆದೆಪ್ಪನವರ, ಸುಜೀತಗೌಡ ಪಾಟೀಲ, ಪ್ರದೀಪ ನಂದೆಪ್ಪನವರ, ಶಿವಾನಂದ ಪಾಟೀಲ, ಮಹಾದೇವ ಈಟಿ, ಬಸವಂತಪ್ಪ ಹನಗಂಡಿ, ಶ್ರೀಧರ ಕಂಬಿ ಇದ್ದರು.