ಶಿಕ್ಷಣದ ಜತೆ ವ್ಯವಹಾರಿಕ ಜ್ಞಾನವೂ ಮುಖ್ಯ

KannadaprabhaNewsNetwork | Published : Apr 13, 2025 2:10 AM

ಸಾರಾಂಶ

ವಿದ್ಯಾರ್ಥಿಗಳು ಶಿಸ್ತು ಅಳವಡಿಸಕೊಂಡು ಸರಿಯಾಗಿ ಅಭ್ಯಾಸ ಮಾಡಿ. ಉನ್ನತ ಸ್ಥಾನ ಮಾನಕ್ಕೇರುವ ಮೂಲಕ ಹೆತ್ತ ತಂದೆ ತಾಯಿಗಳಿಗೆ ಕೀರ್ತಿ ತರಬೇಕು.ವಿದ್ಯಾರ್ಥಿಗಳ ಅಧ್ಯಯನ ನಿರಂತರವಾಗಿರಬೇಕು. ಉತ್ತಮ ಆರೋಗ್ಯ ಕಾಪಾಡಿಕೊಂಡು ಸಂಸ್ಕಾರ ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮೊಬೈಲ್‌ ಫೋನ್‌ ಗೀಳಿಗೆ ಅಂಟಿಕೊಳ್ಳದೆ ಓದುವ ಕಡೆಗೆ ಹೆಚ್ಚು ಗಮನ ನೀಡಿ ಪರೀಕ್ಷೆಯಲ್ಲಿ ಯಶಸ್ಸು ಕಾಣಬೇಕು ಎಂದು ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳಾನಂದನಾಥ ಸ್ವಾಮೀಜಿ ಹೇಳಿದರು. ನಗರ ಹೊರವಲಯದ ಬಿಜಿಎಸ್ ಕ್ಯಾಂಪಸ್‌ನಲ್ಲಿರುವ ‌ಬಿಜಿಎಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕಾಲೇಜಿನಲ್ಲಿ ಎಂಕಾಂ ವಿಭಾಗದ ವತಿಯಿಂದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಮರ್ಷಿಯೋ ಫಿಯಿಸ್ಟಾ ಎಂಬ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿಸ್ತು ಅಳವಡಿಸಿಕೊಳ್ಳಿ

ವಿದ್ಯಾರ್ಥಿಗಳು ಶಿಸ್ತು ಅಳವಡಿಸಕೊಂಡು ಸರಿಯಾಗಿ ಅಭ್ಯಾಸ ಮಾಡಿ. ಉನ್ನತ ಸ್ಥಾನ ಮಾನಕ್ಕೇರುವ ಮೂಲಕ ಹೆತ್ತ ತಂದೆ ತಾಯಿಗಳಿಗೆ ಕೀರ್ತಿ ತರಬೇಕು.ವಿದ್ಯಾರ್ಥಿಗಳ ಅಧ್ಯಯನ ನಿರಂತರವಾಗಿರಬೇಕು. ಉತ್ತಮ ಆರೋಗ್ಯ ಕಾಪಾಡಿಕೊಂಡು ಸಂಸ್ಕಾರ ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಎಂದು ಹೇಳಿದರು. ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಹಾಗೂ ಶಿಕ್ಷಣ ತಜ್ಞ ಡಾ. ಎನ್.ಶಿವರಾಮರೆಡ್ಡಿ ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಉತ್ತಮ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು . ದುಶ್ಚಟಗಳಿಗೆ ದಾಸರಾಗದೆ ಆಕರ್ಷಣೆಗಳಿಗೆ ಮರುಳಾಗದೆ ಗುರಿ ತಲುಪಲು ಸನ್ನದ್ಧರಾಗಲು, ಸರ್ವಾಂಗೀಣ ಅಭಿವೃದ್ಧಿಗೆ ದಾರಿದೀಪ ವಾಗಬೇಕು ಎಂದು ‌ಕರೆ ನೀಡಿದರು.ಶೈಕ್ಷಣಿಕ ಪ್ರಗತಿಗೆ ಸಹಕರಿಸಿ

ಮಕ್ಕಳು ಪೋಷಕರನ್ನು ಮೀರುವಷ್ಟು ವಿದ್ಯಾವಂತರಾಗಿ ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಗಳಾಗಬೇಕು. ವಿದ್ಯಾಸಂಸ್ಥೆ ಹಾಗೂ ಶಿಕ್ಷಣ ಕ್ಷೇತ್ರದ ಪ್ರಗತಿಯಲ್ಲಿ ಪೋಷಕರು ಹಾಗೂ ಸಾರ್ವಜನಿಕರ ಪಾತ್ರ ಮುಖ್ಯವಾಗಿರುತ್ತದೆ, ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆ, ವಿದ್ಯಾರ್ಥಿಗಳ ಶೈಕ್ಷಣಿಕ, ಹಾಗೂ ಪಠ್ಯೇತರ ಪ್ರಗತಿಗಾಗಿ ಪೋಷಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಆರ್.ವೆಂಕಟೇಶಬಾಬು ಮಾತನಾಡಿ, ವಿದ್ಯಾರ್ಥಿಗಳಿಗೆ ಓದಿನೊಂದಿಗೆ ನಮ್ಮ ಸಂಸ್ಕೃತಿ, ಸ್ಥಳೀಯ ದೇಶ ವಿದೇಶಗಳ ವ್ಯಾವಹಾರಿಕ ಜ್ಞಾನ ತಿಳಿಸಿ ಕೊಡುವ ಅಗತ್ಯವಿದೆ. ವ್ಯವಹಾರ ಜ್ಞಾನದ ಬಗ್ಗೆ ಅರಿವು ಹೊಂದುವ ನಿಟ್ಟಿನಲ್ಲಿ ಅಂತರ ಕಾಲೇಜು ವಿದ್ಯಾರ್ಥಿಗಳ ಮಾರುಕಟ್ಟೆ ಕಾರ್ಯ ಕ್ರಮಗಳನ್ನು ನಮ್ಮ ವಿದ್ಯಾಸಂಸ್ಥೆ ಆಯೋಜಿಸುತ್ತಿದೆ ಎಂದರು.

ಭವಿಷ್ಯದ ವ್ಯವಹಾರ ಜ್ಞಾನ

ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳ ಮೂಲಕ ಭವಿಷ್ಯದಲ್ಲಿ ವ್ಯವಹಾರ ಜ್ಞಾನ ಹೊಂದುತ್ತಾರೆ. ಪೋಷಕರು ತಮ್ಮ ಮಕ್ಕಳು ವಿದ್ಯಾವಂತರಾಗಬೇಕೆಂಬ ದೃಷಿಯಿಂದ ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಾರೆ. ಆದುದರಿಂದ ವಿದ್ಯಾರ್ಥಿಗಳಿಗೆ ಪ್ರಪಂಚದ ಆಗು ಹೋಗುಗಳ ಬಗ್ಗೆ ಸಾಮಾನ್ಯ ಜ್ಞಾನ, ಸಾಂಸ್ಕೃತಿ ಹಾಗೂ ಕ್ರೀಡೆ ಮತ್ತಿತರ ಮನರಂಜನೆಯ ಕಾರ್ಯಕ್ರಮಗಳ ಅಗತ್ಯವಿರುತ್ತದೆ ಎಂದು ಹೇಳಿದರು. ಬೆಂಗಳೂರು ಬಿಜಿಎಸ್ ಕಾಲೇಜಿನ ಎಂ.ಬಿ.ಎ.ವಿಭಾಗದ ನಿರ್ದೇಶಕ ಡಾ.ನವೀನ್ ಕುಮಾರ್ ವಿದ್ಯಾರ್ಥಿಗಳು ಸಂದರ್ಶನ ಗಳನ್ನು ಎದುರಿಸುವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಬ್ರಾಂಡ್ ರಂಗೋಲಿ, ಆಡಿಟ್ ಪರಿಣಿತ , ಲೆಜೆಂಡ್ ಲೆಗೆಸಿ, ಬೆಸ್ಟ್ ಪ್ರಮೋಟರ್, ಮ್ಯಾಡ್ ಆಡ್ ಶೋ, ಟ್ಯಾಲೆಂಟ್ ಎಕ್ಸ್ ಪೋ , ಫೇಸ್ ಪೇಂಟಿಂಗ್ ,ಫ್ಯಾಷನ್ ಷೋ, ಮೊದಲಾದ‌ 12 ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಕೋಲಾರ , ಚಿಕ್ಕಬಳ್ಳಾಪುರ, ಮಾಲೂರು, ಶ್ರೀನಿವಾಸಪುರ, ಶಿಡ್ಲಘಟ್ಟ, ಚಿಂತಾಮಣಿ, ಗೌರಿಬಿದನೂರು, ಹೊಸಕೋಟೆ, ದೇವನಹಳ್ಳಿ , ಬೆಂಗಳೂರು, ಆಂದ್ರ ಪ್ರದೇಶದ ಗೋರಂಟ್ಲ , ಹಿಂದೂಪುರ ಕಡೆಗಳಿಂದ ಸುಮಾರು 30 ಕ್ಕೂಹೆಚ್ಚು ಕಾಲೇಜುಗಳಿಂದ 500 ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ವಿತರಿಸಲಾಯಿತು. ರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

Share this article