ಶಿಕ್ಷಣದ ಜೊತೆಗೆ ಹಳ್ಳಿಕಾರ್ ಹಸುಗಳ ಸಾಕಾಣಿಕೆಗೂ ಆದ್ಯತೆ ನೀಡಿ: ವರ್ತೂರು ಸಂತೋಷ ಕರೆ

KannadaprabhaNewsNetwork | Published : Apr 12, 2025 12:46 AM

ಸಾರಾಂಶ

ಕಲ್ಪೋತ್ಸವದ ಆಕರ್ಷಣೆಯಾಗಿದ್ದ ಕನ್ನಡದ ಬಿಗ್‌ಬಾಸ್ ಸ್ಪರ್ಧಿ, ಹಳ್ಳಿಕಾರ್ ತಳಿಯ ರಾಯಭಾರಿ ವರ್ತೂರು ಸಂತೋಷ್, ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ, ಚಿರಾಯು ಕನ್ನಡದ ಚಿತ್ರಗೀತೆಗಳನ್ನು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು. ನಂತರ ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ನಡೆದ ಕಲ್ಪೋತ್ಸವವು ಅದ್ಧೂರಿಯಾಗಿ ನಡೆಯಿತು.

ಕಲ್ಪೋತ್ಸವದ ಆಕರ್ಷಣೆಯಾಗಿದ್ದ ಕನ್ನಡದ ಬಿಗ್‌ಬಾಸ್ ಸ್ಪರ್ಧಿ, ಹಳ್ಳಿಕಾರ್ ತಳಿಯ ರಾಯಭಾರಿ ವರ್ತೂರು ಸಂತೋಷ್, ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ, ಚಿರಾಯು ಕನ್ನಡದ ಚಿತ್ರಗೀತೆಗಳನ್ನು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು. ನಂತರ ಸಂಸ್ಥೆಯಿಂದ ಸನ್ಮಾನಿಸಲಾಯಿತು.

ವರ್ತೂರು ಸಂತೋಷ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆ ಮತ್ತು ಉದ್ಯೋಗದ ಜೊತೆಯಲ್ಲಿ ಕೃಷಿ, ಹೈನುಗಾರಿಕೆ, ಹಳ್ಳಿಕಾರ್ ಹಸುಗಳ ಸಾಕಾಣಿಕೆಗೂ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಕಲ್ಪೋತ್ಸವದಂತಹ ಕಾರ್ಯಕ್ರಮವನ್ನು ಪ್ರತಿವರ್ಷ ಆಚರಿಸಿ ಪ್ರತಿಭೆಗಳಿಗೆ ತಕ್ಕಂತೆ ಗೌರವ ಮತ್ತು ಬಹುಮಾನಗಳನ್ನು ನೀಡುತ್ತಾ ಪ್ರೋತ್ಸಾಹಿಸಲಾಗುತ್ತಿದೆ. ಇದರ ಜೊತೆಯಲ್ಲಿಯೇ ವಿದ್ಯಾರ್ಥಿಗಳಿಗೆ ಪ್ಲೇಸ್‌ಮೆಂಟ್ ಮೂಲಕ ಉದ್ಯೋಗಗಳನ್ನು ನೀಡುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಮ್ಮಲ್ಲಿ ನುರಿತ ಭೋದಕರು ಮತ್ತು ಭೋದಕೇತರ ವರ್ಗ ಹಾಗೂ ಸುಸಜ್ಜಿತ ಕಟ್ಟಡಗಳು, ಪ್ರಯೋಗಾಲಯಗಳು, ಗ್ರಂಥಾಲಯಗಳೊಂದಿಗೆ ಕ್ರೀಡಾ ಸಾಮಗ್ರಿಗಳಿದ್ದು ಇದರ ಸುವರ್ಣಾವಕಾಶಗಳನ್ನು ವಿದ್ಯಾರ್ಥಿಗಳು ಪಡೆದು ಸಮಾಜದಲ್ಲಿ ಸಾರ್ಥಕ ಜೀವನ ನಡೆಸಿ ಸಂಸ್ಥೆಗೂ ಮತ್ತು ಹೆತ್ತವರಿಗೂ ಕೀರ್ತಿ ತರಬೇಕೆಂದರು.

ಕೆವಿಎಸ್ ಉಪಾಧ್ಯಕ್ಷರಾದ ಬಾಗೇಪಲ್ಲಿ ನಟರಾಜ್ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಪಡೆದು ಉದ್ಯೋಗಗಳನ್ನು ಪಡೆಯಬೇಕೆಂಬ ಹಿತದೃಷ್ಟಿಯಿಂದ ಕಳೆದ ೬೩ ವರ್ಷಗಳಿಂದಲೂ ನಮ್ಮ ಸಂಸ್ಥೆಯು ಶಿಕ್ಷಣ ನೀಡುತ್ತಾ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಹಗಲಿರುಳು ಶ್ರಮವಹಿಸುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದರು.

ಸಂಸ್ಥೆಯ ಆಡಳಿತ ಕಚೇರಿಯಲ್ಲಿ ಅಧೀಕ್ಷಕರಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಎಚ್.ಎ. ಯೋಗೀಶ್‌ಕುಮಾರ್‌ರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕೆವಿಎಸ್ ಉಪಾಧ್ಯಕ್ಷರಾದ ಬಿ.ಎಸ್.ಉಮೇಶ್, ಟಿ.ಎಸ್.ಬಸವರಾಜು, ಜಿ.ಪಿ.ದೀಪಕ್, ಕಾರ್ಯದರ್ಶಿಗಳಾದ ಜಿ.ಎಸ್. ಉಮಾಶಂಕರ್, ಎಂ.ಆರ್.ಸಂಗಮೇಶ್, ಎಚ್.ಜಿ. ಸುಧಾಕರ್, ಟಿ.ಯು.ಜಗದೀಶ್ ಮೂರ್ತಿ, ಖಜಾಂಚಿ ಟಿ.ಎಸ್.ಶಿವಪ್ರಸಾದ್, ಕೆಐಟಿ ಪ್ರಾಂಶುಪಾಲ ಡಾ.ಜಿ.ಡಿ. ಗುರುಮೂರ್ತಿ ಸೇರಿ ವಿಭಾಗದ ಮುಖ್ಯಸ್ಥರು, ಭೋದಕ ಭೋದಕೇತರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

Share this article