ಜ್ಞಾನದ ಜೊತೆ ಭಾಷಾಭಿಮಾನವನ್ನೂ ಗಳಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಸಲಹೆ

KannadaprabhaNewsNetwork | Published : May 6, 2025 12:17 AM

ಸಾರಾಂಶ

ಕರ್ನಾಟಕತ್ವ ಎಂದರೆ ಕೇವಲ ಭಾಷಾಭಿಮಾನ, ನಾಡಿನ ಮೇಲಿನ ಅಭಿಮಾನ ಮಾತ್ರವಲ್ಲ, ಅದು ಇದೆಲ್ಲವನ್ನೂ ಒಳಗೊಂಡ ಪರಿಶುದ್ಧ ಭಾವನೆ. ತಾಯಿಯ ಕುರಿತು ನಾವು ಎಂದಿಗೂ ಕೀಳಾಗಿ ಕಾಣುವುದಿಲ್ಲ. ಹಾಗಾಗಿಯೇ ತಾಯಿಭಾಷೆ ಎನ್ನುತ್ತೇವೆ.

ಕನ್ನಡಪ್ರಭ ವಾರ್ತೆ ಹುಣಸೂರುವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಹೆಚ್ಚು ಓದುವ ಮೂಲಕ ಜ್ಞಾನದ ಜೊತೆಗೆ ಭಾಷಾಭಿಮಾನವನ್ನೂ ಗಳಿಸಬಹುದಾಗಿದೆ ಎಂದು ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಅಭಿಪ್ರಾಯಪಟ್ಟರು. ಪಟ್ಟಣದ ಜ್ಞಾನಧಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಬೇರೆ ಭಾಷೆಯ ಅನಿವಾರ್ಯತೆ ಮತ್ತು ಆಕರ್ಷಣೆ ಮನುಷ್ಯ ಸಹಜ ಗುಣ. ಅಂದ ಮಾತ್ರಕ್ಕೆ ಮಾತೃಭಾಷೆಯನ್ನು ಕಡೆಗಣನೆ ಅಥವಾ ಮರೆಯಬೇಕೆಂದಿಲ್ಲ. ಕನ್ನಡ ಅತ್ಯಂತ ವೈಶಿಷ್ಟ್ಯಪೂರ್ಣ ಭಾಷೆಯಾಗಿದೆ. ಅನ್ನಕ್ಕಾಗಿ ಬೇರೆ ಭಾಷೆಯನ್ನು ಅವಲಂವಬಿಸಿದರೂ ನಮ್ಮ ಭಾಷೆಯ ಮೇಲಿನ ಪ್ರೀತಿಯನ್ನು ಉಳಿಸಿಕೊಳ್ಳಬೇಕಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯಲೋಕದ ಪರಿಚಯವನ್ನು ಮಾಡಿಕೊಳ್ಳಬೇಕು. ಉತ್ತಮ ಸಾಹಿತ್ಯಗಳನ್ನು ಓದಬೇಕು. ಆ ಮೂಲಕ ಕನ್ನಡ ಭಾಷೆಯ ಹಿರಿಮೆ ನಿಮಗೆ ತಿಳಿಯುತ್ತದೆ ಮಾತ್ರವಲ್ಲ ನಿಮ್ಮ ಜ್ಞಾನವೂ ಹೆಚ್ಚಲಿದೆ ಎಂದರು.ಜ್ಞಾನಧಾರ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಬಿ.ಎಸ್. ಮಮತಾ, ಕರ್ನಾಟಕತ್ವ ಎಂದರೆ ಕೇವಲ ಭಾಷಾಭಿಮಾನ, ನಾಡಿನ ಮೇಲಿನ ಅಭಿಮಾನ ಮಾತ್ರವಲ್ಲ, ಅದು ಇದೆಲ್ಲವನ್ನೂ ಒಳಗೊಂಡ ಪರಿಶುದ್ಧ ಭಾವನೆ. ತಾಯಿಯ ಕುರಿತು ನಾವು ಎಂದಿಗೂ ಕೀಳಾಗಿ ಕಾಣುವುದಿಲ್ಲ. ಹಾಗಾಗಿಯೇ ತಾಯಿಭಾಷೆ ಎನ್ನುತ್ತೇವೆ. ಆಯಾಯ ಜನರ ಮಾತೃ ಭಾಷೆಯಲ್ಲೇ ಶಿಕ್ಷಣ ಆಗಬೇಕೆನ್ನುವ ನಿರ್ಧಾರಗಳನ್ನು ಸರ್ಕಾರಗಳು ಕಡ್ಡಾಯವಾಗಿ ತೆಗೆದುಕೊಂಡು ಅದಕ್ಕೆ ತಕ್ಕ ಪೂರಕ ವಾತಾವರಣ ನಿರ್ಮಿಸಬೇಕು. ಕನ್ನಡ ಭಾಷೆ ಕನ್ನಡಿಗೆರಿಗೆ ಅನ್ನ ನೀಡುವ ಭಾಷೆಯಾಗಬೇಕು. ಅಷ್ಟರಮಟ್ಟಿಗೆ ಭಾಷೆ ಎಲ್ಲರ ಮನೆಮನಗಳಲ್ಲಿ ಬೆಳಗಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹದೇವ್ ಮಾತನಾಡಿದರು.ಅಧ್ಯಕ್ಷತೆ ಜ್ಞಾನಧಾರ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ಸಿ. ನಾಗೇಂದ್ರ ವಹಿಸಿದ್ದರು.ತಾಲೂಕು ಕಸಾಪ ಅಧ್ಯಕ್ಷ ಎಚ್.ಕೆ. ಮಹದೇವ್, ಕಾಲೇಜಿನ ಪ್ರಾಂಶುಪಾಲ ಎಚ್.ಪಿ. ಕಾರ್ತಿಕ್, ಜಿಲ್ಲಾ ಕಸಾಪ ಉಪಾಧ್ಯಕ್ಷ ಎಸ್. ಜಯರಾಂ, ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್. ಕೃಷ್ಣಕುಮಾರ್, ಕಸಾಪ ತಾಲೂಕು ಮಾಜಿ ಅಧ್ಯಕ್ಷ ಸೋಮಶೇಖರ್, ಪದಾಧಿಕಾರಿಗಳಾದ ತ್ರಿನೇಶ್, ಟಿ. ಲೋಕೇಶ್, ಸಿ.ಎಸ್. ಮಹೇಶ್, ಗುರುಸ್ವಾಮಿ, ಗಂಗಾಧರ್, ರಂಗಕಲಾವಿದ ಕುಮಾರ್ ಅರಸೇಗೌಡ, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು.

Share this article