ಬದುಕುವ ಕೌಶಲ್ಯದ ಜೊತೆಗೆ ಬದುಕಿಸುವ ಕೌಶಲ್ಯ ಕಲಿಯಬೇಕು

KannadaprabhaNewsNetwork | Published : Apr 28, 2025 11:49 PM

ಸಾರಾಂಶ

ಜೀವ ರಕ್ಷಕ ಕಲೆಯ ಜ್ಞಾನ ಮತ್ತು ಮೌಲ್ಯಯುತ ಶಿಕ್ಷಣ ಕೊಡುವ ನೇರವಾದ ಏಕೈಕ ಸಂಸ್ಥೆ ಸ್ಕೌಟ್ಸ್ ಅಂಡ್ ಗೈಡ್ಸ್ ಎಂದು ಹಾಸನ ಜಿಲ್ಲಾ ರೋವರ್ ಮತ್ತು ರೇಂಜರ್ ವಿಭಾಗದ ಕೇಂದ್ರ ಸ್ಥಾನೀಯ ಆಯುಕ್ತರಾದ ಡಾ. ಜಿ.ಡಿ. ನಾರಾಯಣ ಅಭಿಪ್ರಾಯಪಟ್ಟರು. ಸ್ಕೌಟ್ಸ್‌ ಮತ್ತು ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್‌ಗಳಿಗೆ ಸೇವೆ ಎಂಬುದು ಪ್ರಧಾನವಾಗಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಎಲ್ಲ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣದ ಜಾಗೃತಿ ಮತ್ತು ಮಹತ್ವ ಉಪಯೋಗವನ್ನು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಜೀವ ರಕ್ಷಕ ಕಲೆಯ ಜ್ಞಾನ ಮತ್ತು ಮೌಲ್ಯಯುತ ಶಿಕ್ಷಣ ಕೊಡುವ ನೇರವಾದ ಏಕೈಕ ಸಂಸ್ಥೆ ಸ್ಕೌಟ್ಸ್ ಅಂಡ್ ಗೈಡ್ಸ್ ಎಂದು ಹಾಸನ ಜಿಲ್ಲಾ ರೋವರ್ ಮತ್ತು ರೇಂಜರ್ ವಿಭಾಗದ ಕೇಂದ್ರ ಸ್ಥಾನೀಯ ಆಯುಕ್ತರಾದ ಡಾ. ಜಿ.ಡಿ. ನಾರಾಯಣ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸ್ವಾಯತ್ತ ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಅಸಲಾಂಬ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ರೋವರ್ಸ್ ಮತ್ತು ರೇಂಜರ್ಸ್‌ಗಳಿಗೆ ತುರ್ತು ಸಮಯದಲ್ಲಿ ಬದುಕುಳಿಯುವ ಕೌಶಲ್ಯಗಳ ಕುರಿತ ಒಂದು ದಿನದ ರಾಜ್ಯಮಟ್ಟದ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಸೇವೆ ಮತ್ತು ಶಿಸ್ತು ಎರಡನ್ನು ನಾವು ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಕಾಣುತ್ತೇವೆ. ಆಧುನಿಕ ಜಗತ್ತಿನಲ್ಲಿ ಇಂದು ಅಪಘಾತ ಸಂಭವಿಸಿದಾಗ ಸಾರ್ವಜನಿಕರು ಛಾಯಾಚಿತ್ರ ತೆಗೆಯುವುದಕ್ಕೆ ಮುಂದಾಗುತ್ತಾರೆ. ಜೀವ ಉಳಿಸುವುದಕಲ್ಲ, ಅದು ತಪ್ಪು. ಮೊದಲು ಜೀವ ಉಳಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಭೂಮಿಯ ಋಣವನ್ನು ತೀರಿಸಬೇಕಾದದ್ದು ನಮ್ಮ ಧರ್ಮ. ಜೀವ ರಕ್ಷಕ ಕಲೆಯನ್ನು ನಮ್ಮಲ್ಲಿರುವ ಜ್ಞಾನವನ್ನು ಉಪಯೋಗಿಸಿಕೊಂಡು ಮಾಡಬೇಕಾಗುತ್ತದೆ. ಅಪಾಯದ ಅಳಿವಿನಲ್ಲಿ ಇರುವ ಜೀವಗಳನ್ನ ರಕ್ಷಣೆ ಮಾಡುವುದು ಹೇಗೆ ಎಂಬುದನ್ನು ತಿಳಿಯಬೇಕಾಗುತ್ತದೆ ಎಂದು ತಿಳಿಸಿದರು.

ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಗುರೂಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳ ಕೊಡುಗೆ ಅಪಾರವಾಗಿದೆ. ಸೇವಾ ಭಾವನೆ ಮತ್ತು ಶಿಸ್ತಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಪ್ರಥಮ ಚಿಕಿತ್ಸೆ ಹೇಗೆ ನೀಡಬೇಕು ಎಂಬುದರ ಅರಿವು ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಲ್ಲಿರುತ್ತದೆ. ವಿದ್ಯೆ ಜೊತೆಗೆ ಕೌಶಲ್ಯ ಪ್ರಸ್ತುತ ಜಗತ್ತಿಗೆ ಬಹಳ ಅವಶ್ಯಕವಾಗಿದೆ ಎಂದು ಹೇಳಿದರಲ್ಲದೆ, ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣದ ಜಾಗೃತಿ ಮತ್ತು ಮಹತ್ವ ಉಪಯೋಗವನ್ನು ತಿಳಿಸಿದರು. ಪತ್ರಾಂಕಿತ ವ್ಯವಸ್ಥಾಪಕರಾದ ಕೆ.ಟಿ. ಸತ್ಯಮೂರ್ತಿ, ಸ್ಕೌಟ್ಸ್ ಅಂಡ್ ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್‌ಗಳ ಸೇವೆಯನ್ನು ಮರೆಯುವಂತಿಲ್ಲ. ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕಾಲೇಜಿನ ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ರೋವರ್ಸ್ ಅಂಡ್ ರೇಂಜರ್ಸ್ ವಿದ್ಯಾರ್ಥಿಗಳು ಮಾಡಿದ ಸೇವೆಯನ್ನು ಜಿಲ್ಲಾಡಳಿತದ ಅಧಿಕಾರಿಗಳು, ಪತ್ರಕರ್ತರು ಸ್ಮರಿಸಿದ್ದನ್ನು ನೆನೆದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಭಾರ ಪ್ರಾಂಶುಪಾಲರಾದ ಹರೀಶ್ ಅವರು, ಬದುಕುವ ಕೌಶಲ್ಯದ ಜೊತೆಗೆ ಬದುಕಿಸುವ ಕೌಶಲ್ಯಗಳನ್ನು ಕಲಿಯಬೇಕು. ಕೌಶಲ್ಯಗಳನ್ನು ಕಲಿತರೆ ದೇಶದ ಆಸ್ತಿ ಆಗಬಹುದು. ಸಮಾಜದ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತಹ ಮನೋಭಾವವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಸ್ಕೌಟ್ಸ್‌ ಮತ್ತು ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್‌ಗಳಿಗೆ ಸೇವೆ ಎಂಬುದು ಪ್ರಧಾನವಾಗಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಎಲ್ಲ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಸಹಾಯಕ ರಾಜ್ಯ ಸಂಘಟನಾ ಆಯುಕ್ತರಾದ ಪ್ರಿಯಾಂಕ ಎಚ್. ಎಂ. ಹಾಸನ ತಾಲೂಕು ಕಾರ್ಯದರ್ಶಿ ವನಜಾಕ್ಷಿ ಉಪಸ್ಥಿತರಿದ್ದರು. ಕಾಲೇಜಿನ ರೋವರ್ಸ್ ಲೀಡರ್ ಡಾ. ಸುರೇಶ್ ಸಿ ಎಲ್ಲರನ್ನು ಸ್ವಾಗತಿಸಿ, ವಂದಿಸಿದರು. ರೋವರ್ ಲೀಡರ್ ಡಾ. ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು.

ಸಮಾರಂಭದಲ್ಲಿ ಸಮಾಜಶಾಸ್ತ್ರ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಪ್ರೊ. ವೆಂಕಟನರಸಯ್ಯ, ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಗೋಪಾಲ್ ಎಂ.ಪಿ. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ರಶ್ಮಿ ಎ.ವಿ., ಹಿಂದಿ ವಿಭಾಗದ ಉಪನ್ಯಾಸಕ ರಾದ ಮಾಲತಿ, ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕರಾದ ರೇಖಾ ಎಸ್ ಹಾಜರಿದ್ದರು.

Share this article