ತಹಸೀಲ್ದಾರ್‌ ಭ್ರಷ್ಟಾಚಾರ ಖಂಡಿಸಿ ಚನ್ನರಾಯಪಟ್ಟಣದಲ್ಲಿ ಪ್ರತಿಭಟನೆ

KannadaprabhaNewsNetwork | Published : Apr 28, 2025 11:49 PM

ಸಾರಾಂಶ

ಆಡಿಯೋ ಒಂದರಲ್ಲಿ ತಹಸೀಲ್ದಾರ್ ಅವರು ೧೦೦ ಕೋಟಿ ರು. ಹಣ ಮಾಡಿಕೊಂಡು ನಿವೃತ್ತಿ ಹೊಂದುವ ಬಗ್ಗೆ ಮಾತನಾಡಿದ್ದಾರೆ. ಇದು ನಮಗೆ ಆತಂಕ ತಂದಿದೆ. ತಾಲೂಕು ದಂಡಾಧಿಕಾರಿಗಳೇ ಈ ರೀತಿ ಹೇಳಿದರೆ ಹೇಗೆ? ಭ್ರಷ್ಟಾಚಾರದ ಆಳ, ಉದ್ದ ಅಳತೆ ಮಾಡಲಾಗುತ್ತಿಲ್ಲ, ನಮಗೆ ನ್ಯಾಯ ಸಿಗುವುದಾದರೂ ಹೇಗೆ, ಜಿಲ್ಲಾಧಿಕಾರಿಗಳು ಇವರ ವಿರುದ್ಧ ಕ್ರಮ ಕೈಗೊಂಡು ಇಲ್ಲಿಂದ ಎತ್ತಂಗಡಿ ಮಾಡಬೇಕು. ತಹಸೀಲ್ದಾರ್ ಹಠಾವು ಚನ್ನರಾಯಪಟ್ಟಣ ಬಚಾವೋ ಕಾರ್ಯಕ್ರಮ ನಮ್ಮದಾಗಿದೆ. ತಾಲೂಕು ಆಡಳಿತವನ್ನು ಸರಿದಾರಿಗೆ ತರುವುದು ಜನಪ್ರತಿನಿಧಿಗಳ ಕರ್ತವ್ಯ, ಈ ನಿಟ್ಟಿನಲ್ಲಿ ಅವರು ಸೋತಿದ್ದಾರೆ ಎಂಬ ಮಾತುಗಳನ್ನಾಡಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನಲ್ಲಿ ಭ್ರಷ್ಟಾಚಾರವಿಲ್ಲದೆ ಆಡಳಿತವೇ ಇಲ್ಲ ಎಂಬಂತಾಗಿದೆ ಎಂದು ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಸಂಚಾಲಕರಾದ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ನೇರ ಆರೋಪ ಮಾಡಿದ್ದಾರೆ.

ಅವರು ಪತ್ರಿಕಾ ಭವನದಲ್ಲಿ ಮಾತನಾಡಿ, ತಾಲೂಕಿನ ತಹಸೀಲ್ದಾರ್ ಅವರೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಮೇ ೨ರಂದು ತಾಲೂಕು ಕಚೇರಿ ಎದುರು ತಹಸೀಲ್ದಾರ್ ಅವರ ಭ್ರಷ್ಟಾಚಾರದ ವಿರುದ್ಧ, ಸಾಕ್ಷಿಗಳು, ಆಡಿಯೋಗಳ ಸಮೇತ ಅಹೋರಾತ್ರಿ ಚಳವಳಿ ಆರಂಭಿಸುವುದಾಗಿ ಹೇಳಿದ್ದಾರೆ.

ಫೆಬ್ರವರಿ ಮಾಸದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಸತ್ಯಾಗ್ರಹ, ಧರಣಿ ಹೋರಾಟವನ್ನು ನಡೆಸಿತ್ತು, ತಹಸೀಲ್ದಾರ್ ಹಾಗೂ ಎಡಿಎಲ್‌ಆರ್‌ ನಮ್ಮ ಹೋರಾಟದ ಸ್ಥಳಕ್ಕೆ ಆಗಮಿಸಿ ಭರವಸೆಗಳನ್ನ ನೀಡಿ ಸಭೆಯನ್ನ ಕರೆದಿದ್ದರು. ಮಾರ್ಚ್ ೧೫ರಂದು ಅವರ ಕಚೇರಿಯಲ್ಲಿ ಸಭೆ ನಡೆಯಿತು. ಚರ್ಚೆಗಳು ನಡೆದು ಕುಂದುಕೊರತೆಗಳು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಬಗ್ಗೆ, ಮತ್ತು ಭ್ರಷ್ಟಾಚಾರ ರಹಿತ ತಾಲೂಕು ಕಚೇರಿಯನ್ನು ತಾಲೂಕನ್ನು ಮಾಡಿ ಶುದ್ಧೀಕರಣಕ್ಕೆ ಒತ್ತಾಯ ಮಾಡಲಾಗಿತ್ತು. ಆದರೆ ಈವರೆಗೂ ರೆಕಾರ್ಡ್ ರೂಮ್ ದಾಖಲೆಗಳಿಗೆ ರೈತರು ಅಲೆಯುವುದು ತಪ್ಪಿಲ್ಲ, ರೈತನ ರೋಧನೆ ತಪ್ಪಿಲ್ಲ ಅವ್ಯವಹಾರ ಕಡಿಮೆಯಾಗಿಲ್ಲ. ತಹಸಿಲ್ದಾರ್ ಬಳಿ ಅನೇಕ ಫೈಲ್ ಗಳು ಬಾಕಿ ಉಳಿದಿದೆ, ಇದು ನಮ್ಮ ಅನುಮಾನಕ್ಕೆ ಕಾರಣವಾಗುತ್ತಿದೆ. ತಾಲೂಕು ಕಚೇರಿ ಭ್ರಷ್ಟಾಚಾರದ ಮೂಲ ಕೇಂದ್ರವಾಗಿದೆ. ತಹಸೀಲ್ದಾರ್ ಅವರೇ ಭ್ರಷ್ಟಾಚಾರಕ್ಕೆ ಒತ್ತು ನೀಡುತ್ತಿದ್ದಾರೆ ಎಂಬ ಬಗ್ಗೆ ನಮ್ಮಲ್ಲಿ, ಸಂಪೂರ್ಣ ದಾಖಲೆಗಳು ಆಡಿಯೋ ದಾಖಲೆಗಳಿದೆ, ಇದನ್ನು ಜನತೆಯ ಮುಂದೆ ಮೇ ಎರಡರಂದು ತಾಲೂಕು ಕಚೇರಿ ಎದುರು ಸಾರ್ವ ಜನಿಕರ ಸಮುಖದಲ್ಲಿ ಬಿತ್ತರಿಸಲಾಗುವುದು ಎಂದರು.

ಆಡಿಯೋ ಒಂದರಲ್ಲಿ ತಹಸೀಲ್ದಾರ್ ಅವರು ೧೦೦ ಕೋಟಿ ರು. ಹಣ ಮಾಡಿಕೊಂಡು ನಿವೃತ್ತಿ ಹೊಂದುವ ಬಗ್ಗೆ ಮಾತನಾಡಿದ್ದಾರೆ. ಇದು ನಮಗೆ ಆತಂಕ ತಂದಿದೆ. ತಾಲೂಕು ದಂಡಾಧಿಕಾರಿಗಳೇ ಈ ರೀತಿ ಹೇಳಿದರೆ ಹೇಗೆ? ಭ್ರಷ್ಟಾಚಾರದ ಆಳ, ಉದ್ದ ಅಳತೆ ಮಾಡಲಾಗುತ್ತಿಲ್ಲ, ನಮಗೆ ನ್ಯಾಯ ಸಿಗುವುದಾದರೂ ಹೇಗೆ, ಜಿಲ್ಲಾಧಿಕಾರಿಗಳು ಇವರ ವಿರುದ್ಧ ಕ್ರಮ ಕೈಗೊಂಡು ಇಲ್ಲಿಂದ ಎತ್ತಂಗಡಿ ಮಾಡಬೇಕು. ತಹಸೀಲ್ದಾರ್ ಹಠಾವು ಚನ್ನರಾಯಪಟ್ಟಣ ಬಚಾವೋ ಕಾರ್ಯಕ್ರಮ ನಮ್ಮದಾಗಿದೆ. ತಾಲೂಕು ಆಡಳಿತವನ್ನು ಸರಿದಾರಿಗೆ ತರುವುದು ಜನಪ್ರತಿನಿಧಿಗಳ ಕರ್ತವ್ಯ, ಈ ನಿಟ್ಟಿನಲ್ಲಿ ಅವರು ಸೋತಿದ್ದಾರೆ ಎಂಬ ಮಾತುಗಳನ್ನಾಡಿದರು.

ಗುಳಸಿಂದ ಮಹೇಶ್ ಅವರು ಮಾತನಾಡಿ ವ್ಯವಸ್ಥೆ ಹಾಳಾಗಿದೆ. ತಹಸೀಲ್ದಾರ್ ಅವರು ವ್ಯವಸ್ಥೆಯ ಬಗ್ಗೆ ಮಾತನಾಡಿರುವ ಆಡಿಯೋಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.

ರೈತ ಮುಖಂಡ ರವಿ ಗೌಡಯ್ಯ ಮಾತನಾಡಿ, ತಾಲೂಕಿನ ಗೊಬ್ಬರದ ಅಂಗಡಿಗಳಲ್ಲಿ ದರ ಬೇಕಾಬಿಟ್ಟಿ ಇದೆ. ನಿಯಂತ್ರಣ ಇಲ್ಲವಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ, ನ್ಯಾಯಬೆಲೆ ಅಂಗಡಿಗಳ ಮಾಲೀಕರು ಬಡವರಿಗೆ ಸೂಕ್ತವಾಗಿ ಅಕ್ಕಿ ನೀಡುತ್ತಿಲ್ಲ ಎಂದು ದೂರಿದರು.

ಭ್ರಷ್ಟಾಚಾರ ವೇದಿಕೆಯ ಪದಾಧಿಕಾರಿಗಳಾದ ರೈತ ಮುಖಂಡ ಹರೀಶ್ ಎಂ. ಎಲ್, ಶಂಕರ್, ತೇಜಸ್ ಗೌಡ, ಮಂಜೇಗೌಡ, ರವೀಶ್ ಮುಂತಾದವರಿದ್ದರು.

Share this article