ಕನ್ನಡಪ್ರಭ ವಾರ್ತೆ ಹಾಸನ
ಭಾರಿ ಕುತೂಹಲ ಕೆರಳಿಸಿದ್ದ ನಗರಸಭೆ ಅಧ್ಯಕ್ಷರಾದ ಎಂ. ಚಂದ್ರೇಗೌಡ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಧ್ಯಕ್ಷರಿಗೆ ಸಾಥ್ ಕೊಡುವ ಮೂಲಕ ಜೆಡಿಎಸ್ ಮುಖಭಂಗ ಅನುಭವಿಸಬೇಕಾಯಿತು.ಸಂತೇಪೇಟೆ ವೃತ್ತದ ಬಳಿ ಇರುವ ನಗರಸಭೆ ಕುವೆಂಪು ಸಭಾಂಗಣದಲ್ಲಿ ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಹೇಮಾವತಿ ಕಮಲ್ ಕುಮಾರ್ ನೇತೃತ್ವದಲಿ ಚಂದ್ರೇಗೌಡ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಭೆ ನಡೆಯಿತು. ನಗರಸಭೆ ಅಧ್ಯಕ್ಷ ಚಂದ್ರೇಗೌಡ ವಿರುದ್ಧ ಶಾಸಕ ಎಚ್.ಪಿ. ಸ್ವರೂಪ್ ಮತ್ತು ಎಂ.ಎಲ್.ಸಿ. ಸೂರಜ್ ರೇವಣ್ಣ ಹಾಗೂ ನಗರಸಭೆ ಜೆಡಿಎಸ್ ಸದಸ್ಯರು ಒಟ್ಟು ೨೧ ಸದಸ್ಯರು ಕೈ ಎತ್ತುವ ಮೂಲಕ ಅವಿಶ್ವಾಸ ನಿರ್ಣಯ ಪರವಾಗಿ ಕೈ ಎತ್ತಿದರು.
೧೬ ಸದಸ್ಯರ ಬೆಂಬಲ:ಇನ್ನು ಅವಿಶ್ವಾಸ ನಿರ್ಣಯದ ವಿರುದ್ಧ ೧೩ ಸದಸ್ಯರ ಬೆಂಬಲ ಬೇಕಾಗಿದ್ದು, ಅವಿಶ್ವಾಸ ನಿರ್ಣಯದ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ಒಟ್ಟಾಗಿ ೧೬ ಸದಸ್ಯರು ಬೆಂಬಲ ಸೂಚಿಸಿದ ಕಾರಣ ಅವಿಶ್ವಾಸ ನಿರ್ಣಯ ಅಸಿಂಧುವಾಗಿದೆ ಎಂದು ಆಯುಕ್ತ ರಮೇಶ್ ಪ್ರಕಟಣೆಯಲ್ಲಿ ಘೋಷಣೆ ಮಾಡಿದರು. ಅವಿಶ್ವಾಸ ನಿರ್ಣಯದ ನಂತರ ಹಾಲಿ ಅಧ್ಯಕ್ಷ ಚಂದ್ರೇಗೌಡ ಅವರು ಹಾಲಿ ಅಧ್ಯಕ್ಷರಾಗಿ ಮುಂದುವರಿದರು. ನಂತರ ಬಿಜೆಪಿ ಪಕ್ಷದ ನಗರಸಭೆ ಸದಸ್ಯರು ಮಾಜಿ ಶಾಸಕ ಪ್ರೀತಂ ಜೆ ಗೌಡ ಹಾಗೂ ಸಂಸದ ಶ್ರೇಯಸ್ ಪಟೇಲ್ ಪರ ಜೈಕಾರ ಘೋಷಣೆ ಕೂಗಿದರು. ಕೆಲ ಸದಸ್ಯರು ಟೇಬಲ್ ಬಡಿದರು.
ಇದಾದ ಸಲ್ಪ ಸಮಯದಲ್ಲೆ ಶಾಸಕ ಎಚ್.ಪಿ. ಸ್ವರೂಪ್ ಮತ್ತು ಎಂ.ಎಲ್.ಸಿ. ಸೂರಜ್ ರೇವಣ್ಣ ಇಬ್ಬರೂ ಸಭೆಯಿಂದ ಹೊರನಡೆದರು. ಅವಿಶ್ವಾಸ ನಿರ್ಣಯಕ್ಕೆ ಕೇವಲ ೫ ಸದಸ್ಯರ ಕೊರತೆಯಿಂದ ಜೆಡಿಎಸ್ ತನ್ನ ರಾಜಕೀಯ ತಂತ್ರದಲ್ಲಿ ಹಿನ್ನಡೆ ಅನುಭವಿಸಬೇಕಾಯಿತು. ಸಭೆಯ ಮಧ್ಯೆ ನಾಮ ನಿರ್ದೇಶನ ಸದಸ್ಯರು ಒಂದು ಕಡೆ ಕೂರಿಸಿ ಎಂದಾಗ ಆಕ್ಷೇಪಣೆ ಬಂದು ತಟಸ್ಥವಾದರು. ಹಾಲಿ ಅಧ್ಯಕ್ಷ ಎಂ. ಚಂದ್ರೇಗೌಡ ಜೆಡಿಎಸ್ ಹೈಕಮಾಂಡ್‌ಗೆ ಸೆಡ್ಡು ಹೊಡೆದು ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಈ ಗೆಲುವಿನಲ್ಲಿ ಬಿಜೆಪಿಯ ಪ್ರೀತಂ ಗೌಡ ಮತ್ತು ಕಾಂಗ್ರೆಸ್‌ನ ಸಂಸದ ಶ್ರೇಯಸ್ ಪಟೇಲ್ ಜೋಡಿಯ ರಾಜಕೀಯ ಚಾಣಾಕ್ಷತನ ಮತ್ತೆ ಮೇಲುಗೈ ಸಾಧಿಸಿದೆ. ಜೆಡಿಎಸ್‌ನ ಯೋಜನೆಯನ್ನು ವಿಫಲಗೊಳಿಸಿ, ಚಂದ್ರೇಗೌಡರನ್ನು ಅಧಿಕಾರದಲ್ಲಿ ಉಳಿಸಿಕೊಂಡಿರುವ ಈ ಜೋಡಿ, ಹಾಸನದ ರಾಜಕೀಯ ವಲಯದಲ್ಲಿ ತಮ್ಮ ಪ್ರಭಾವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.ಸಭೆ ಮಧ್ಯೆ ಎಂ. ಚಂದ್ರೇಗೌಡ ಅವರು ಸಂಸದ ಶ್ರೇಯಸ್ ಪಟೇಲ್ ಹತ್ತಿರ ಹೋಗಿ ಏನೋ ಗುಸುಗುಸು ಮಾತನಾಡಿದರು. ಹಾಜರಿದ್ದ ಒಟ್ಟು ೩೮ ಸದಸ್ಯರಲ್ಲಿ ೩೭ ಮತ ಚಲಾವಣೆಯಾಗಿದ್ದು, ಅಧ್ಯಕ್ಷ ಚಂದ್ರೇಗೌಡ ತಟಸ್ಥರಾಗಿ ಉಳಿದರು. ಅವಿಶ್ವಾಸ ಪರ ೨೧, ವಿರುದ್ಧ ೧೬ ಮತ ಚಲಾವಣೆಯಾದವು. ಅವಿಶ್ವಾಸಕ್ಕೆ ಸೋಲಾದ ನಂತರ ಬಿಜೆಪಿ, ಕಾಂಗ್ರೆಸ್ ಸದಸ್ಯರು, ಸಂಸದರು ಮೇಜು ಕುಟ್ಟಿ ಸಂತಸ ವ್ಯಕ್ತಪಡಿಸಿದರು. ಸಭಾಂಗಣದ ಹೊರಗಡೆ ಶ್ರೇಯಸ್ ಪಟೇಲ್, ಪ್ರೀತಂಗೌಡ ಪರ ಜೈಕಾರ ಕೂಗಿ ಬಿಜೆಪಿ ಸದಸ್ಯರು ಹರ್ಷ ವ್ಯಕ್ತಪಡಿಸಿದರು. ನಗರಸಭೆ ಹೊರಗೆ ಅಭಿಮಾನಿಗಳು ಜೆಡಿಎಸ್ ಕಾಂಗ್ರೆಸ್ ನ ಕಾರ್ಯಕರ್ತರು ಜೈಕಾರ ಹಾಕಿ ಪಟಾಕಿ ಸಿಡಿಸಿ ಸಿಹಿ ಹಂಚಿದರು. ಸ್ವಲ್ಪ ಸಮಯದಲ್ಲೆ ನಗರಸಭೆ ಅಧ್ಯಕ್ಷರ ಕೊಠಡಿಯಲ್ಲಿ ಶಾಸಕರಾದ ಹೆಚ್.ಪಿ. ಸ್ವರೂಪ್ ಇರುವ ಭಾವಚಿತ್ರದ ಪಕ್ಕ ಪ್ರೀತಂ ಜೆ. ಗೌಡರ ಫೋಟೋ ತಂದು ನೇತಾಕಿದರು.
ಸಂಸದ ಶ್ರೇಯಸ್ ಎಂ. ಪಟೇಲ್ ಮಾಧ್ಯಮದೊಂದಿಗೆ ಮಾತನಾಡಿ, ನಗರಸಭೆ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ನಾವು ಬಿಜೆಪಿ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡುವ ಮೂಲಕ ಮತ ಚಲಾಯಿಸಿಲ್ಲ. ನಗರಸಭೆ ಅಧ್ಯಕ್ಷರ ಒಳ್ಳೆಯ ವ್ಯಕ್ತಿತ್ವ ಅವರ ಉತ್ತಮ ಕೆಲಸ ಮಾಡಿರುವುದನ್ನ ಮೆಚ್ಚಿ ಬೆಂಬಲ ನೀಡಿದ್ದೇವೆ. ಯಾವ ಪಕ್ಷದ ವಿರುದ್ಧ ನಾವಿಲ್ಲ. ನಾವು ವ್ಯಕ್ತಿಯ ಪರವಾಗಿದ್ದೇವೆ ಅಷ್ಟೆ. ಈಗಿರುವಾಗ ಇಲ್ಲಿ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.ಹಾಸನಾಂಬೆ ದೇವಿಯ ಆಶೀರ್ವಾದ:
ನಂತರ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಮಾಧ್ಯಮದೊಂದಿಗೆ ಮಾತನಾಡಿ, ಅವಿಶ್ವಾಸ ನಿರ್ಣಯದಲ್ಲಿ ಗೆದ್ದಿರುವುದು ನಾನೇ ಆದರೂ, ಹಾಸನ ಜಿಲ್ಲೆಯ ಜನತೆಯ ಆತ್ಮಗೌರವದ ಗೆಲುವು ಪಡೆದಿದ್ದೇನೆ. ನನ್ನ ಗೆಲುವಿಗೆ ಅಭಿವೃದ್ಧಿಯ ಹರಿಕಾರ ಪ್ರೀತಂಗೌಡ, ಸಂಸದ ಶ್ರೇಯಸ್ ಪಟೇಲ್ ಸಾಥ್ ಕೊಟ್ಟರು. ಯಾವುದೇ ಅವ್ಯವಹಾರ ಇಲ್ಲದಂತೆ ಕಪ್ಪು ಚುಕ್ಕೆ ಬಾರದಂತೆ ನಗರಸಭೆ ಆಡಳಿತ ನಡೆಸಿದ್ದೇನೆ. ನಮ್ಮ ಎಲ್ಲಾ ಬಿಜೆಪಿ ಸದಸ್ಯರು, ಸಂಸದರು ನನ್ನನ್ನು ಬೆಂಬಲಿಸಿದ್ದಾರೆ ಎಂದರು. ಇನ್ಮುಂದೆ ಅವರು ಹೇಳಿಕೊಟ್ಟ ಮಾರ್ಗದಲ್ಲಿ ಹಾಸನವನ್ನು ಉತ್ತಮ ನಗರವನ್ನಾಗಿ ಮಾಡುತ್ತೇನೆ ಎಂದರು. ಹಾಸನಾಂಬೆ ದೇವಿಯ ಆಶೀರ್ವಾದ, ಕೊಲ್ಲಾಪುರದ ಆಶೀರ್ವಾದ ತೆಗೆದುಕೊಂಡು ಕೆಂಡ ಹಾದು ಬಂದಿದ್ದೆನು. ಆ ದೇವಿಯ ಆಶೀರ್ವಾದದಿಂದ ಗೆದ್ದೀದ್ದೀನಿ. ನನ್ನ ಮೇಲೆ ಜೆಡಿಎಸ್‌ನವರು ಅವಿಶ್ವಾಸ ತಂದರು. ನಾನೇನು ಅನೈತಿಕ ಚಟುವಟಿಕೆ, ಅವ್ಯವಹಾರ ಮಾಡಿದ್ದೀನಾ! ಜೆಡಿಎಸ್ ಸದಸ್ಯರಿಗೆ ವಿಪ್ ಕೊಟ್ಟಿದ್ದರಿಂದ ಆ ಪಕ್ಷದ ಪರವಾಗಿ ಇದ್ದರೆ ಹೊರತು ಮಾನಸಿಕವಾಗಿ ನನ್ನ ಪರ ಇದ್ದರು. ಹಾಗಾಗಿ ನಾನು ಪ್ರೀತಂ ಗೌಡ, ಶ್ರೇಯಸ್ ಪಟೇಲ್ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿತು ಎಂದು ಹೇಳಿದರು.