ಗಡಿ ದಾಟಿದ ನೇಂದ್ರ ಬಾಳೆಯ ಘಮ : ದುಬೈಗೆ ರಫ್ತು

KannadaprabhaNewsNetwork |  
Published : Apr 28, 2025, 11:49 PM ISTUpdated : Apr 29, 2025, 01:14 PM IST
1 | Kannada Prabha

ಸಾರಾಂಶ

ನಂಜನಗೂಡು ತಾ. ಬಿದರಗೂಡಿನ ಪಿ.ಆರ್‌. ನಂದೀಶ್‌ ಅವರ ಪುತ್ರ ಬಿ.ಎನ್‌. ವಿನಯ್‌ ಬೆಳೆದ ನೇಂದ್ರ ಬಾಳೆ ಕೇರಳದ ಮೂಲಕ ವಿಮಾನದಲ್ಲಿ ದುಬೈಗೆ ರಫ್ತಾಗಿದ್ದು ವಿಶೇಷ.

ಅಂಶಿ ಪ್ರಸನ್ನಕುಮಾರ್‌

 ಮೈಸೂರು : ನಂಜನಗೂಡು ತಾ. ಬಿದರಗೂಡಿನ ಪಿ.ಆರ್‌. ನಂದೀಶ್‌ ಅವರ ಪುತ್ರ ಬಿ.ಎನ್‌. ವಿನಯ್‌ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್ಸ್‌ ಡಿಪ್ಲೋಮಾ ಮಾಡಿದ್ದು, ಒಬ್ಬನೇ ಮಗ ಆಗಿರುವುದರಿಂದ ಮುಂದೆ ಓದಲು ಆಗದೇ ತಂದೆ- ತಾಯಿ ಸೇವೆ ಮಾಡುತ್ತಾ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರು ಬೆಳೆದ ನೇಂದ್ರ ಬಾಳೆ ಕೇರಳದ ಮೂಲಕ ವಿಮಾನದಲ್ಲಿ ದುಬೈಗೆ ರಫ್ತಾಗಿದ್ದು ವಿಶೇಷ.

ಒಂದರಿಂದ ಏಳನೇ ತರಗತಿವರೆಗೆ ಅಜ್ಜಿ ಊರು ಕಾಮಗೆರೆ, ಮೈಸೂರಿನ ಕೆಆರ್‌ಎಸ್‌ ರಸ್ತೆಯಲ್ಲಿ ಮಾಂಡೋವಿ ಮೋಟಾರ್ಸ್‌ ಬಳಿ ಇರುವ ರೋಟರಿ ಶಾಲೆಯಲ್ಲಿ ಪ್ರೌಢಶಾಲೆ, ಜೆಎಸ್ಎಸ್‌ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ ಓದಿದ ವಿನಯ್‌ ನಾಲ್ಕು ವರ್ಷ ಟಿವಿಎಸ್‌ ಕಾರ್ಖಾನೆಯ ಗುಣಮಟ್ಟ ವಿಭಾಗದಲ್ಲಿ ಕೆಲಸ ಮಾಡಿದರು. ಮುಂದೆ ಲ್ಯಾಟರಲ್‌ ಎಂಟ್ರಿ ಪಡೆದು ಎಂಜಿನಿಯರಿಂಗ್‌ ಮಾಡುವ ಕನಸ್ಸಿತ್ತು. ಆದರೆ ತಂದೆ ಅನಾರೋಗ್ಯಕ್ಕೀಡಾಗಿದ್ದರಿಂದ ಕೃಷಿ ಮಾಡಲು ಯಾರೂ ಇರಲಿಲ್ಲ. ಹೀಗಾಗಿ ತಂದೆ- ತಾಯಿ ನೋಡಿಕೊಳ್ಳುವುದರ ಜೊತೆಗೆ ಕೃಷಿಯಲ್ಲಿ ಕೂಡ ವಿನಯ್‌ ತೊಡಗಿಸಿಕೊಂಡಿದ್ದಾರೆ.

ಅವರಿಗೆ ಏಳು ಎಕರೆ ಜಮೀನಿದೆ. ಎರಡು ಕೊಳವೆ ಬಾವಿ ಕೊರೆಸಿದ್ದಾರೆ. ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಈ ಬೆಳೆಗಳ ನಡುವೆಯೇ ಮನೆಗೆ ಬೇಕಾದ ಭತ್ತ ಬೆಳೆಯುತ್ತಾರೆ. ಇವರ ಜಮೀನಿನಲ್ಲಿ ಅಡಿಕೆ- 1600, ತೆಂಗು- 260, ಬಟರ್‌ ಫ್ರೂಟ್‌- 70, ಪಪ್ಪಾಯ- 1300. ಬಾಳೆ- 3000. ಸೀಬೆ- 10, ಕರಿಬೇವು- 10, ಸಿಲ್ವರ್‌ - 10, ನಾಟಿ, ಸಿದ್ಧ, ರುದ್ರಾಕ್ಷಿ ಹಲಸು- 8, ನಿಂಬೆ-1, ಸಪೋಟ-1. ಮೂಸಂಬಿ-1, ಡಾಲ್ಚಿನ್ನಿ -1, ಹಿರಳಿಕಾಯಿ-5 ಮರಗಳಿವೆ.

ಆಗಾಗ್ಗೆ ನಾಗನಹಳ್ಳಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಕ್ಕೆ ಭೇಟಿ ನೀಡಿ, ಮುಖ್ಯಸ್ಥರಾದ ಸಿ. ರಾಮಚಂದ್ರ ಅವರಿಂದ ಸಲಹೆ- ಸೂಚನೆ ಪಡೆಯುತ್ತಿರುತ್ತಾರೆ.

ಮಣ್ಣು ಪರೀಕ್ಷೆ ಮಾಡಿಸಿ, ಫಲವತ್ತತೆ ಕಾಪಾಡುತ್ತಾರೆ. ನೀರಿನ ನಿರ್ವಹಣೆ ಮಾಡುತ್ತಾರೆ. ಕೃಷಿ ಇಲಾಖೆಯಿಂದ ತುಂತುರು ನೀರಾವರಿ ಸೌಲಭ್ಯಕ್ಕಾಗಿ ಸಹಾಯಧನ ಪಡೆದಿದ್ದಾರೆ.

ಮೊದಲು ಎರಡು ಹಸುಗಳು, ಕುರಿಗಳು ಇದ್ದವು. ಆದರೆ ಉಪಕಸುಬು ಬದಲು ತೋಟಗಾರಿಕೆ ಬೆಳೆಗಳತ್ತಲ್ಲೇ ಹೆಚ್ಚಿನ ಗಮನ ಹರಿಸಿದ್ದಾರೆ. ಇವರ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಯಾವುದೇ ತೊಂದರೆ ಇಲ್ಲ. ಜಮೀನಿನ ಬಳಿಯೇ ಬಂದು ಖರೀದಿಸುತ್ತಾರೆ. ಒಟ್ಟಾರೆ ಇವರಿಗೆ ವಾರ್ಷಿಕ ಮೂರ್ನಾಲ್ಕು ಲಕ್ಷ ರು. ಖರ್ಚಿದೆ. ಅಡಿಕೆ ಹಾಗೂ ತೆಂಗು ಮೂರು ವರ್ಷದ ಮರಗಳು. ಇನ್ನೂ ಫಸಲು ಬಂದಿಲ್ಲ. ಹೀಗಾಗಿ ಇತರೆಲ್ಲಾ ಬೆಳೆಗಳಿಂದ ನಿವ್ವಳ ಆದಾಯ 5 ಲಕ್ಷ ರು. ಸಿಗುತ್ತಿದೆ.

ಇವರಿಗೆ 203ನೇ ಸಾಲಿನಲ್ಲಿ ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳದಲ್ಲಿ ನಂಜನಗೂಡು ತಾಲೂಕು ಮಟ್ಟದ ಯುವ ಪ್ರಗತಿಪರ ರೈತ ಪ್ರಶಸ್ತಿ ನೀಡಲಾಗಿದೆ.

ಸಂಪರ್ಕ ವಿಳಾಸಃ

ಬಿ.ಎನ್‌. ವಿನಯ್‌ ಬಿನ್‌ ಪಿ.ಆರ್‌. ನಂದೀಶ್‌

ಬಿದರಗೂಡು

ಚಿಕ್ಕಯ್ಯನಛತ್ರ ಹೋಬಳಿ,

ನಂಜನಗೂಡು ತಾಲೂಕು.

ಮೈಸೂರು ಜಿಲ್ಲೆ

ಮೊ. 83105 32092

ವ್ಯವಸಾಯ ಮಾಡಬೇಕಾದರೆ ತುಂಬಾ ತಾಳ್ಮೆ ಬೇಕು. ನಾನು ಡಿಪ್ಲೋಮಾ ಮಾಡಿದ್ದು, ಎಂಜಿನಿಯರಿಂಗ್‌ ಮಾಡುವ ಕನಸ್ಸಿತ್ತು. ಆದರೆ ಮನೆಯ ಪರಿಸ್ಥಿತಿ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆದರೆ ನಾನು ಬೆಳೆದ ನೇಂದ್ರ ಬಾಳೆ ಕೇರಳ ವಿಮಾನ ನಿಲ್ದಾಣದ ಮೂಲಕ ದುಬೈ ತಲುಪಿದ್ದು ಖುಷಿ ನೀಡಿತ್ತು. ವಿಮಾನ ನಿಲ್ದಾಣ ಕಾರ್ಗೋ ವಾಹನವೇ ಜಮೀನಿನ ಬಳಿ ಬಂದಿತ್ತು.

- ಬಿ.ಎನ್‌. ವಿನಯ್‌, ಬಿದರಗೂಡು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಲೀಲಾ ಪಾಟೀಲರಿಗೆ ‘ಸೌಭಾಗ್ಯವತಿ ಸಿಂಧು ಸುಭಾಷ ಮ್ಹಮಾಣೆ ಮಾತೃಶಕ್ತಿ ಪ್ರಶಸ್ತಿ’ ಪ್ರದಾನ
ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ : ಸೂರಜ್‌ ರೇವಣ್ಣಗೆ ಕೋರ್ಟ್‌ ಶಾಕ್‌