ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ದಂಡಿನಗಹಳ್ಳಿ ಹೋಬಳಿ ಬಳದರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಯು.ಎಸ್.ಮಂಜೇಗೌಡ, ಉಪಾಧ್ಯಕ್ಷೆಯಾಗಿ ಚಂದ್ರಮ್ಮ ಅವಿರೋಧವಾಗಿ ಆಯ್ಕೆಯಾದರು.ತಾಲೂಕಿನ ದಂಡಿನಹಳ್ಳಿ ಹೋಬಳಿ ಉದಯಪುರದಲ್ಲಿನ ಬಳದರೆ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಂಜೇಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರು ತಮ್ಮ ತಮ್ಮ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹಾಸನ ಸಹಕಾರ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಘೋಷಣೆ ಮಾಡಿದರು.
ಬಳದರೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಮಂಜೇಗೌಡ ಮಾತನಾಡಿ, ಸಂಘವು ೧೦.೩೧ ಲಕ್ಷ ರು. ಆದಾಯದಲ್ಲಿದೆ, ಸಂಘದಲ್ಲಿ ೨೬೬೯ ಮಂದಿ ಷೇರುದಾರರಿದ್ದು ೧.೦೩ ಕೋಟಿ ಷೇರು ಬಂಡವಾಳವಿದೆ, ಸುಮಾರು ೧೯೭ ಮಂದಿ ಕೃಷಿಕರಿಗೆ ೮.೮೨ ಕೋಟಿ ಸಾಲ ನೀಡಲಾಗಿದೆ. ಸ್ತ್ರೀಶಕ್ತಿ ಸಂಘ ಸೇರಿದಂತೆ ಇತರೆ ಸಾಲವಾಗಿ ೧.೪೧ ಕೋಟಿ ನೀಡಲಾಗಿದೆ. ಕ್ಷೇತ್ರದ ಶಾಸಕರಾದ ರೇವಣ್ಣ ಹಾಗೂ ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಅವರ ಸಹಕಾರದಲ್ಲಿ ಹೊಸದಾಗಿ ಸಾಲ ನೀಡಲಾಗುವುದು ಎಂದರು.ಕಳೆದ ಅವಧಿಯಲ್ಲಿ ಆಡಳಿತ ಮಂಡಳಿ ಸೇವೆ ಸಲ್ಲಿಸುವಾಗ ಸರ್ಕಾರ ಸಾಲ ಮನ್ನ ಮಾಡಿದಾಗ ಸಂಘದ ವ್ಯಾಪ್ತಿಗೆ ಸುಮಾರು ೪.೬೧ ಕೋಟಿ ಮನ್ನವಾಗಿದ್ದು, ಕೃಷಿಕರಿಗೆ ಅನುಕೂಲವಾಗಿದೆ, ಸಂಘದಿಂದ ಹೋಬಳಿಯ ಸಾಕಷ್ಟು ಗ್ರಾಮಗಳಿಗೆ ರಸಗೊಬ್ಬರ ನೀಡಲಾಗುತ್ತಿದೆ. ಡಿ.ಸಮುದ್ರವಳ್ಳಿ, ಉಪಿನಹಳ್ಳಿ, ಬಳದರೆ, ಉದಯಪುರ, ಕತ್ತರಿಘಟ್ಟ ಗ್ರಾಮಕ್ಕೆ ಸಂಘದಿಂದ ಪಡಿತರ ಆಹಾರವನ್ನು ಪ್ರತಿ ತಿಂಗಳು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಬಳದರೆ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಎಂ.ಎಸ್.ನಾಗೇಶ್ ಮಾತನಾಡಿ, ಸಹಕಾರ ಸಂಘದಿಂದ ನಿರ್ಮಾಣ ಮಾಡಿರುವ ಮಳಿಗೆಗಳ ಬಾಡಿಗೆಯನ್ನು ಸಕಾಲಕ್ಕೆ ವಸೂಲು ಮಾಡಲಾಗುತ್ತಿದೆ. ನೂತನ ಆಡಳಿತ ಮಂಡಳಿ ಸಂಘದ ಸಿಬ್ಬಂದಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ತಮ್ಮ ವ್ಯಾಪ್ತಿಗೆ ಬರುವ ಗ್ರಾಮದ ಕೃಷಿಕರಿಗೆ ನೆರವು ಮಾಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಚಂದ್ರಮ್ಮ, ನೂತನ ನಿರ್ದೇಶಕರಾದ ವೀರಭದ್ರಶೆಟ್ಟಿ, ವೈ.ಎನ್.ಗುರುಪ್ರಸಾದ್, ಮಂಜೇಗೌಡ, ವಿಜಯ, ಎನ್.ಆರ್.ದಿವ್ಯಾ, ರಾಮಕೃಷ್ಣ, ಡಿ.ರವೀಶ್, ಡಿ.ಎಸ್.ರವಿ, ಬಿ.ಡಿ.ಮೋಹನ್, ವೈ,ಎ.ಎನ್. ಮಂಜೇಗೌಡ ಇವರುಗಳಿಗೆ ಚುನಾವಣಾಧಿಕಾರಿ ಮಂಜುನಾಥ್ ಪ್ರಮಾಣಪತ್ರ ವಿತರಣೆ ಮಾಡಿದರು.ಬಳದರೆ ಗ್ರಾಮ ಪಂಚಾಯಿತಿ ಸದಸ್ಯ ಆನಂತ, ಬರಗೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಗದೀಶ್, ಶಶಿಧರ್, ಮುಖಂಡರಾದ ಅಶೋಕ್, ಪ್ರಸಾದಿ, ಮೂರ್ತಿ, ರಮೇಶ್, ಮಿಥುನ್, ಶ್ರೀಧರ್, ವಿವಿ ಗ್ರಾಮ ಮುಖಂಡರು ಆಗಮಿಸಿ ಅಭಿನಂದಿಸಿದರು. ಬಳದರೆ ಕೃಷಿ ಪತ್ತಿನ ಸಹಕಾರ ಸಂಘದ ಅಧಿಕಾರಿ ನಾಗೇಶ್, ಸಿಬ್ಬಂದಿಗಳಾದ ಗೀತಾ, ಯೋಗೇಶ್, ಸುಚಿತ್ರಾ, ಮಹದೇವ್ ಹಾಗೂ ಇತರರು ಉಪಸ್ಥಿತರಿದ್ದರು.