ತಾಂತ್ರಿಕ, ಆಡಳಿತಾತ್ಮಕ ಮತ್ತು ಆರ್ಥಿಕ ಅನುಮೋದನೆ ಪಡೆದು, ಟೆಂಡರ್ ಆಗಿ, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ, ಶೇ.50ರಷ್ಚು ಕಾಮಗಾರಿ ಪೂರ್ಣಗೊಂಡಿರುವ ಸುಮಾರು 165 ಕೋಟಿ ರು.ಗಳ ಏತ ನೀರಾವರಿ ಯೋಜನೆಗೀಗ ಸ್ವತಃ ರಾಜ್ಯ ಸರ್ಕಾರವೇ ತಡೆ ನೀಡಿದೆ. ಇದರಿಂದಾಗಿ ರೈತರ ಆಕ್ರೋಶ

ಉಡುಪಿ : ಸರ್ಕಾರಿ ತಜ್ಞರಿಂದಲೇ ವಿನ್ಯಾಸಗೊಂಡು, ತಾಂತ್ರಿಕ, ಆಡಳಿತಾತ್ಮಕ ಮತ್ತು ಆರ್ಥಿಕ ಅನುಮೋದನೆ ಪಡೆದು, ಟೆಂಡರ್ ಆಗಿ, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ, ಶೇ.50ರಷ್ಚು ಕಾಮಗಾರಿ ಪೂರ್ಣಗೊಂಡಿರುವ ಸುಮಾರು 165 ಕೋಟಿ ರು.ಗಳ ಏತ ನೀರಾವರಿ ಯೋಜನೆಗೀಗ ಸ್ವತಃ ರಾಜ್ಯ ಸರ್ಕಾರವೇ ತಡೆ ನೀಡಿದೆ. ಇದರಿಂದಾಗಿ ರೈತರ ಆಕ್ರೋಶ ಭುಗಿಲೆದ್ದಿದೆ.

ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹರಿಯುವ ವಾರಾಹಿ ನದಿಗೆ ಸಿದ್ಧಾಪುರ ಗ್ರಾಮದ ಹೊರಿಯಬ್ಬೆ ಎಂಬಲ್ಲಿ ಈ ಏತ ನೀರಾವರಿ ಯೋಜನೆಯ ಕಾಮಗಾರಿ ನಡೆಯುತ್ತಿತ್ತು. ಆದರೆ, ಕಾಂಗ್ರೆಸ್‌ನ ಸ್ಥಳೀಯ ಮಾಜಿ ಶಾಸಕರ ಪತ್ರಕ್ಕೆ ಮಣಿದ ಸರ್ಕಾರ ಯೋಜನೆಯ ಕಾರ್ಯವನ್ನು ಸ್ಥಗಿತಗೊಳಿಸಿದೆ. ಇದು ಸ್ಥಳೀಯ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ವತಃ ಕಾಂಗ್ರೆಸ್ ನಾಯಕ, ಮಾಜಿ ಸ್ಪೀಕರ್‌ ಪ್ರತಾಪ್‌ಚಂದ್ರ ಶೆಟ್ಟಿ ನೇತೃತ್ವದ ರೈತ ಸಂಘದ ವತಿಯಿಂದ ಬುಧವಾರ ಜನಾಗ್ರಹ ಸಭೆ ನಡೆಯಿತು. ಸ್ಥಗಿತಗೊಳಿಸಲಾಗಿರುವ ಯೋಜನೆಯನ್ನು ತಕ್ಷಣ ಪುನರಾರಂಭಿಸುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು. ವಿಶೇಷ ಎಂದರೆ, ಸಭೆಯಲ್ಲಿ ಬೈಂದೂರಿನ ಬಿಜೆಪಿ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಅವರೂ ಭಾಗವಹಿಸಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದರು.

ರಾಜಕೀಯ ದುರಂತ-ಪ್ರತಾಪ್‌ಚಂದ್ರ ಶೆಟ್ಟಿ:

ಪ್ರತಾಪ್‌ಚಂದ್ರ ಶೆಟ್ಟಿ ಮಾತನಾಡಿ, ಹೊರಿಯಬ್ಬೆ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕಿರು ಜಲವಿದ್ಯುತ್ ಯೋಜನೆಯ ಉದ್ಯಮಿಯ ಮಾತನ್ನು ಕೇಳಿ ಮಾಜಿ ಶಾಸಕ ಗೋಪಾಲ ಪೂಜಾರಿಯವರು ಪ್ರಸ್ತುತ ಹೊರಿಯಬ್ಬೆಯಲ್ಲಿ ಕಾಮಗಾರಿ ನಡೆಯುತ್ತಿರುವ ಏತ ನೀರಾವರಿಯನ್ನು ಹೊಳೆಶಂಕರನಾರಾಯಣ ಎಂಬಲ್ಲಿಗೆ ಸ್ಥಳಾಂತರಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೂಡ ಕೈಜೋಡಿಸಿದ್ದು, ಅಷ್ಟಕ್ಕೇ ಮುಖ್ಯಮಂತ್ರಿ ಯೋಜನೆ ಸ್ಥಗಿತಗೊಳಿಸುವಂತೆ ಸೂಚಿಸಿದ್ದು ರಾಜಕೀಯ ದುರಂತ ಎಂದು ತಮ್ಮದೇ ಸರ್ಕಾರದ ವಿರುದ್ಧ ಚಾಟಿ ಬೀಸಿದರು.

ಈ ಯೋಜನೆಯನ್ನು ಸ್ಥಳಾಂತರಿಸುವುದಕ್ಕೆ 4 ಫಲಾನುಭವಿ ಗ್ರಾ.ಪಂ.ಗಳ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗ್ರಾ.ಪಂ.ಗಳು ಸರ್ಕಾರಕ್ಕೆ ನಿರ್ಣಯಗಳನ್ನು ಸಲ್ಲಿಸಿವೆ. ಅದಕ್ಕೂ ಗೌರವ ನೀಡದೆ ಕೇವಲ ಒಬ್ಬ ಉದ್ಯಮಿಗಾಗಿ ಯೋಜನೆಯನ್ನೇ ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಇದು ಜೀವದ ಹೋರಾಟ-ಗಂಟಿಹೊಳೆ:

ಸಭೆ ಉದ್ಘಾಟಿಸಿ ಮಾತನಾಡಿದ ಶಾಸಕ ಗುರುರಾಜ ಗಂಟಿಹೊಳೆ, ಯೋಜನೆ ಸ್ಥಗಿತಗೊಳಿಸಿರುವ ಸರ್ಕಾರ ಈಗ ಯೋಜನೆಯ ಪುನರ್‌ ಪರಿಶೀಲನೆಗೆ ತಜ್ಞರ ಸಮಿತಿ ಕಳುಹಿಸುತ್ತಿದೆ. ಹಾಗಿದ್ದರೆ ಈ ಹಿಂದೆ ಈ ಯೋಜನೆಯನ್ನು ರೂಪಿಸಿದ್ದು ತಜ್ಞರಲ್ಲವೇ ಎಂದು ಪ್ರಶ್ನಿಸಿದರು. ತಜ್ಞರ ಸಮಿತಿ ಬರಲಿ, ನೋಡಲಿ, ಏನೇ ವರದಿ ನೀಡಲಿ, ನಮ್ಮ ಹೋರಾಟ ಮಾತ್ರ ರೈತರ ಪರವಾಗಿಯೇ ಇರುತ್ತದೆ. ಅದರಲ್ಲಿ ಎಳ್ಳಷ್ಟೂ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ರೈತರ ಒತ್ತಡಕ್ಕಷ್ಟೇ ಮಣಿಯಬೇಕು

ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೇ ಕೇವಲ ರೈತರ ಒತ್ತಡಕ್ಕಷ್ಟೇ ಮಣಿಯಬೇಕು. ಇಲ್ಲದಿದ್ದಲ್ಲಿ ವಿರೋಧಿಸುವವರು ಬೆಂಗಳೂರಿನಲ್ಲಿರುತ್ತಾರೆ, ಅಧಿಕಾರಿಗಳು ಇಲ್ಲೇ ಇರಬೇಕಾಗುತ್ತದೆ, ಜನರು ಬೇಲಿ ಮುರಿದು ಒಳನುಗ್ಗಲಿಕ್ಕೆ ಸಿದ್ಧರಿದ್ದಾರೆ. ಆದ್ದರಿಂದ ಸರ್ಕಾರಕ್ಕೆ ಯೋಜನೆ ಪುನಾರಂಭಿಸುವ ಅಗತ್ಯವನ್ನು ಮನವರಿಕೆ ಮಾಡಿ ಎಂದು ಸೂಚಿಸಿದರು.

ನ್ಯಾಯವಾದಿ ಉಮೇಶ್ ಶೆಟ್ಟಿ ಶಾನ್ಕಟ್ಟು ಯೋಜನೆಯ ಮಾಹಿತಿ ನೀಡಿದರು. ರೈತ ನಾಯಕ ರೋಹಿತ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ವೈದ್ಯ ಡಾ.ನಾಗಭೂಷಣ. ದಸಂಸ ನಾಯಕ ರಾಜು ಬೆಟ್ಟಿನ್ಮನೆ ಮುಂತಾದವರು ವೇದಿಕೆಯಲ್ಲಿದ್ದರು.

ಸಭೆಯ ನಂತರ ಯೋಜನೆಯ ಫಲಾನುಭವಿ ಸಾವಿರಾರು ರೈತರು ಶಾಸಕರ ನೇತೃತ್ವದಲ್ಲಿ ಹಸಿರು ಶಾಲು ಬೀಸುತ್ತಾ ಕಾರ್ಯಪಾಲಕ ಎಂಜಿನಿಯರ್ ಕಚೇರಿವರೆಗೆ ಸುಮಾರು 1 ಕಿ.ಮೀ. ಪಾದಯಾತ್ರೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು. 10 ದಿನಗಳೊಳ‍ಗೆ ಯೋಜನೆಯನ್ನು ಪುನಃ ಆರಂಭಿಸಬೇಕು, ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.