ಸಾರಾಂಶ
ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಲ್ಲಿ ಜಾರಿಗೆ ಬರುತ್ತಿರುವ ಜಲಜೀವನ್ ಮಿಷನ್ ಹಾಗೂ ವಾರಾಹಿ ಯೋಜನೆಗಳ ಪ್ರಗತಿಯ ಕುರಿತು ಶಾಸಕ ವಿ. ಸುನಿಲ್ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಲ್ಲಿ ಜಾರಿಗೆ ಬರುತ್ತಿರುವ ಜಲಜೀವನ್ ಮಿಷನ್ ಹಾಗೂ ವಾರಾಹಿ ಯೋಜನೆಗಳ ಪ್ರಗತಿಯ ಕುರಿತು ಶಾಸಕ ವಿ. ಸುನಿಲ್ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಕುಡಿಯುವ ನೀರು ಸರಬರಾಜು ಯೋಜನೆಗಳ ತ್ವರಿತ ಹಾಗೂ ಗುಣಮಟ್ಟದ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಯವರೆಗೆ ಶುದ್ಧ ಕುಡಿಯುವ ನೀರು ತಲುಪಿಸುವ ಉದ್ದೇಶವಿದೆ. ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಲಭ್ಯವಿರುವ ಜಲಮೂಲಗಳ ಬಳಕೆ, ಪೈಪ್ ಲೈನ್ ಅಳವಡಿಕೆ ಹಾಗೂ ಓವರ್‌ಹೆಡ್ ಟ್ಯಾಂಕ್‌ಗಳ ಸ್ಥಾಪನೆಯ ಕೆಲಸಗಳು ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಕಾಮಗಾರಿ ಪ್ರಗತಿ ಕುರಿತು ಮಾಹಿತಿ ನೀಡಲಾಯಿತು. ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ 62 ಓವರ್‌ಹೆಡ್ ಟ್ಯಾಂಕ್‌ಗಳು ಹಾಗೂ 1524.35 ಕಿ.ಮೀಟರ್ ಪೈಪ್ ಲೈನ್ ಅಳವಡಿಕೆ ಪೂರ್ಣಗೊಂಡಿದೆ.ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ 23 ಓವರ್‌ಹೆಡ್ ಟ್ಯಾಂಕ್‌ಗಳು ಹಾಗೂ 416.25 ಕಿ.ಮೀಟರ್ ಪೈಪ್ ಲೈನ್ ಅಳವಡಿಕೆ ಪೂರ್ಣವಾಗಿದೆ.ವಾರಾಹಿ ಯೋಜನೆ ವ್ಯಾಪ್ತಿಯಲ್ಲಿ 72 ಓವರ್‌ಹೆಡ್ ಟ್ಯಾಂಕ್‌ಗಳ ನಿರ್ಮಾಣ ಪೂರ್ಣಗೊಂಡಿದ್ದು, ಉಳಿದಿರುವ ಕೆಲಸಗಳು ಪ್ರಗತಿಯಲ್ಲಿ ಇವೆ.ಚಾರ ಗ್ರಾಮದಲ್ಲಿ ಸುಮಾರು 8.00 ಲಕ್ಷ ಲೀಟರ್ ಸಾಮರ್ಥ್ಯದ ಪಂಪ್ ಸ್ಟೇಷನ್ ಹಾಗೂ ಮಿಯ್ಯಾರು ಗ್ರಾಮದಲ್ಲಿ 5.50 ಲಕ್ಷ ಲೀಟರ್ ಸಾಮರ್ಥ್ಯದ ಪಂಪ್ ಸ್ಟೇಷನ್ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಇವು ಸಂಪೂರ್ಣ ಗುರುತ್ವಾಕರ್ಷಣೆಯ ಮೂಲಕ ನೀರನ್ನು ಓವರ್‌ಹೆಡ್ ಟ್ಯಾಂಕ್‌ಗಳಿಗೆ ಪೂರೈಕೆ ಮಾಡಲಿರುವ ಯೋಜನೆಯ ಭಾಗವಾಗಿದೆ ಎಂದು ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು. ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿ, ಸಪ್ಟೆಂಬರ್ ಅಂತ್ಯದೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹಾಗೂ ಯಾವುದೇ ಸಾರ್ವಜನಿಕ ದೂರಿಗೆ ಅವಕಾಶ ನೀಡದಂತೆ ಮೆಲ್ವಿಚಾರಣಾ ಏಜೆನ್ಸಿಯವರು ನಿತ್ಯ ಮೇಲ್ವಿಚಾರಣೆ ನಡೆಸಬೇಕೆಂದು ತಿಳಿಸಿದರು. ಕಾಮಗಾರಿ ಗುಣಮಟ್ಟದಲ್ಲಿಯೂ ಯಾವುದೇ ತಾರತಮ್ಯವಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು.ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಕಾಮಗಾರಿಗಳನ್ನು ಸ್ಥಳೀಯವಾಗಿ ಖುದ್ದು ಪರಿಶೀಲನೆ ಮಾಡಲಾಗುವುದು ಎಂದು ಶಾಸಕರು ಹೇಳಿದರು.ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಉದಯ್ ಕುಮಾರ್ ಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಹಾಗೂ ನ್ಯೆರ್ಮಲ್ಯ ಇಲಾಖೆಯ ಕಾರ್ಯನಿವಾಹಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಂದ್ರನಾಥ್, ಕಾರ್ಕಳ ಹಾಗೂ ಹೆಬ್ರಿಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ರಾವ್, ವಿಜಯ ಮತ್ತಿತರರಿದ್ದರು.