ಸರ್ಕಾರಿ ತಜ್ಞರಿಂದಲೇ ವಿನ್ಯಾಸಗೊಂಡು, ತಾಂತ್ರಿಕ, ಆಡಳಿತಾತ್ಮಕ ಮತ್ತು ಆರ್ಥಿಕ ಅನುಮೋದನೆ ಪಡೆದು, ಟೆಂಡರ್ ಆಗಿ, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ, ಶೇ. 50ರಷ್ಚು ಕಾಮಗಾರಿ ಪೂರ್ಣಗೊಂಡಿರುವ ಸುಮಾರು 165 ಕೋಟಿ ರು.ಗಳ ಏತ ನೀರಾವರಿ ಯೋಜನೆಗೀಗ ಸ್ವತಃ ರಾಜ್ಯ ಸರ್ಕಾರವೇ ತಡೆ ನೀಡಿದೆ, ಈ ಬಗ್ಗೆ ರೈತರ ಆಕ್ರೋಶ
ಉಡುಪಿ: ಸರ್ಕಾರಿ ತಜ್ಞರಿಂದಲೇ ವಿನ್ಯಾಸಗೊಂಡು, ತಾಂತ್ರಿಕ, ಆಡಳಿತಾತ್ಮಕ ಮತ್ತು ಆರ್ಥಿಕ ಅನುಮೋದನೆ ಪಡೆದು, ಟೆಂಡರ್ ಆಗಿ, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ, ಶೇ. 50ರಷ್ಚು ಕಾಮಗಾರಿ ಪೂರ್ಣಗೊಂಡಿರುವ ಸುಮಾರು 165 ಕೋಟಿ ರು.ಗಳ ಏತ ನೀರಾವರಿ ಯೋಜನೆಗೀಗ ಸ್ವತಃ ರಾಜ್ಯ ಸರ್ಕಾರವೇ ತಡೆ ನೀಡಿದೆ, ಈ ಬಗ್ಗೆ ರೈತರ ಆಕ್ರೋಶ ಭುಗಿಲೆದ್ದಿದೆ.ಉಡುಪಿ ಜಿಲ್ಲೆಯ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಹರಿಯುವ ವಾರಾಹಿ ನದಿಗೆ ಸಿದ್ಧಾಪುರ ಗ್ರಾಮದ ಹೊರಿಯಬ್ಬೆ ಎಂಬಲ್ಲಿ ಈ ಏತ ನೀರಾವರಿ ಯೋಜನೆಯ ಕಾಮಗಾರಿ ನಡೆಯುತಿತ್ತು. ಆದರೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಮಾಜಿ ಶಾಸಕರ ಪತ್ರಕ್ಕೆ ಮಣಿದ ಸರ್ಕಾರ ಯೋಜನೆಯ ಕಾರ್ಯಸ್ಥಗಿತಗೊಳಿಸಿದೆ.
ಯೋಜನೆ ಸ್ಥಗಿತ ಕುರಿತು ಬುಧವಾರ ಸಿದ್ದಾಪುರದಲ್ಲಿ ನಡೆದ ರೈತರ ಬೃಹತ್ ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ ವಿರೋಧ ವ್ಯಕ್ತವಾಯಿತು.ಪ್ರತಿಭಟನೆಯಲ್ಲಿ ನ್ಯಾಯವಾದಿ ಉಮೇಶ್ ಶೆಟ್ಟಿ ಶಾನ್ಕಟ್ಟು ಯೋಜನೆಯ ಮಾಹಿತಿ ನೀಡಿದರು. ರೈತ ನಾಯಕ ರೋಹಿತ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ವೈದ್ಯ ಡಾ. ನಾಗಭೂಷಣ. ದ.ಸಂ.ಸ. ನಾಯಕ ರಾಜು ಬೆಟ್ಟಿನ್ಮನೆ ಮುಂತಾದವರು ವೇದಿಕೆಯಲ್ಲಿದ್ದರು.
ಸಭೆಯ ನಂತರ ಯೋಜನೆಯ ಫಲಾನುಭವಿ ಸಾವಿರಾರು ರೈತರು ಶಾಸಕರ ನೇತೃತ್ವದಲ್ಲಿ ಹಸಿರು ಶಾಲು ಬೀಸುತ್ತಾ ಕಾರ್ಯಪಾಲಕ ಇಂಜಿನಿಯರ್ ಕಚೇರಿ ವರೆಗೆ ಸುಮಾರು 1 ಕಿ.ಮೀ. ಪಾದಯಾತ್ರೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು. 10 ದಿನಗಳೊಳಗೆ ಯೋಜನೆ ಪುನಃ ಆರಂಭಿಸಬೇಕು, ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.