ಹಕ್ಕುಗಳ ಸಂರಕ್ಷಣೆ ಜತೆಗೆ ಕರ್ತವ್ಯದ ಜಾಗೃತಿಯೂ ಬೇಕು: ಪ್ರಮೀಳಾ ರಾವ್‌

KannadaprabhaNewsNetwork | Published : Mar 10, 2025 12:18 AM

ಸಾರಾಂಶ

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಆಶ್ರಯದಲ್ಲಿ ನಗರದ ನಂದಿನಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಹಿಳೆಯರು ತಮ್ಮ ಹಕ್ಕುಗಳನ್ನು ಸಂರಕ್ಷಿಸುವುದರ ಜತೆಗೆ ಕರ್ತವ್ಯದ ಜಾಗೃತಿ ಪಡೆಯುವುದು ಕೂಡ ಆವಶ್ಯಕ ಎಂದು ಕೆನರಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರಮೀಳಾ ರಾವ್ ಹೇಳಿದರು.ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಆಶ್ರಯದಲ್ಲಿ ನಗರದ ನಂದಿನಿ ಸಭಾಂಗಣದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ‘ಮಹಿಳೆಯರ ಸಮಾನತೆ ಹಾಗೂ ಸಬಲೀಕರಣ’ ವಿಷಯದ ಕುರಿತು ಅವರು ಮಾತನಾಡಿದರು.ಕೇಂದ್ರ ಮತ್ತು ರಾಜ್ಯ ಕಾರ್ಮಿಕ ಇಲಾಖೆ ಸಮೀಕ್ಷೆ ಪ್ರಕಾರ ದೇಶದಲ್ಲಿ 41.7 ಮಹಿಳೆಯರು ದುಡಿಯುತ್ತಿದ್ದಾರೆ. ಶೇ.14.3 ಮಹಿಳೆಯರು ಸಂಸತ್ತಿನಲ್ಲಿ ಇದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿ ಶೇ.50 ಮೀಸಲಾತಿ ಇದ್ದರೂ, ಹೆಚ್ಚಿನ ಕಡೆ ಹೆಣ್ಮಕ್ಕಳ ಸ್ಥಾನದಲ್ಲಿ ಅವರ ಸಹೋದರ, ಪತಿ ಅಥವಾ ಅವರ ಕುಟುಂಬದ ಇತರ ಸದಸ್ಯರು ಆಡಳಿತ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 540 ಮಹಿಳಾ ಉದ್ಯಮಿಗಳಿದ್ದು, ಇವರಲ್ಲಿ 332 ಮಂದಿ ಆಹಾರ ಸಂಬಂಧಿತ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಅವರು ವಿವರಿಸಿದರು.ಸಂವಿಧಾನದಲ್ಲಿ ಮಹಿಳಾ ಸಮಾನತೆ ಸಂಬಂಧಿಸಿ ಸ್ಪಷ್ಟವಾದ ಉಲ್ಲೇಖವಿದೆ. ಮಹಿಳಾ ದೌರ್ಜನ್ಯ ತಡೆಯಲು ಸಾಕಷ್ಟು ಕಾಯ್ದೆಗಳಿದ್ದರೂ ಅದರ ಸದುಪಯೋಗ ಪಡೆದುಕೊಂಡವರು ಎಷ್ಟು ಎಂದು ನೋಡಿದರೆ ಸಿಗುವ ಉತ್ತರ ಆಶಾದಾಯಕವಾಗಿಲ್ಲ ಎಂದು ಅವರು ಹೇಳಿದರು.ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾಗಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಮ್ಮಯ್ಯ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಮುಖ್ಯ ಅತಿಥಿಗಳಾಗಿದ್ದರು.ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಉಸ್ಮಾನ್ ಎ. ಸ್ವಾಗತಿಸಿದರು. ಜಿಲ್ಲಾ ನಿರೂಪಣಾ ಅಧಿಕಾರಿ ಕುಮಾರ್ ವಂದಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಶ್ಮಿ ಪ್ರಸ್ತಾವನೆ ಮಾಡಿದರು. ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಚಂದ್ರಿಕಾ ನಿರೂಪಿಸಿದರು. ಈ ಸಂದರ್ಭ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿಗೆ ಆಯ್ಕೆಯಾದ ಎಂಟು ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ತಲಾ 10 ಸಾವಿರ ರು. ನಗದು ಬಹುಮಾನ ನೀಡಲಾಯಿತು.

ಅಬ್ದುಲ್ ಬಾಸಿತ್ (ನಾವೀನ್ಯತೆ), ಆಶ್ನ ಲೈನಾ ಪಿರೇರ (ತಾರ್ಕಿಕ ಸಾಧನೆ), ಹನ್ಸಿಕಾ (ತಾರ್ಕಿಕ ಸಾಧನೆ), ವೇದಿಕ್ ಕೌಶಲ್‌ ( ಕಲೆ, ಸಾಂಸ್ಕೃತಿಕ ಮತ್ತು ಸಂಗೀತ), ಜಿಸ್ನಿಯಾ ಕೊರೆಯ (ಕ್ರೀಡೆ), ಅತೀಶ್ ಎಸ್.ಶೆಟ್ಟಿ (ಕ್ರೀಡೆ), ನಿನಾದ ಕೆ (ಕಲೆ, ಸಾಂಸ್ಕೃತಿಕ) ಮತ್ತು ನಿಹಾರಿಕಾ ಎ. (ನಾವಿನ್ಯತೆ) ಪ್ರಶಸ್ತಿಯ ಗೌರವ ಸ್ವೀಕರಿಸಿದ ಮಕ್ಕಳು.ಅತ್ಯುತ್ತಮ ಸ್ತ್ರೀ ಶಕ್ತಿ ಗುಂಪು ಪ್ರಶಸ್ತಿಗೆ ಪಾತ್ರವಾದ ವಿಟ್ಲದ ಶ್ರೀ ದುರ್ಗ ಸ್ತ್ರೀ ಶಕ್ತಿ ಗುಂಪುವನ್ನು ಗೌರವಿಸಲಾಯಿತು.

Share this article