ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀಸೀತಾಳಲಿಂಗೇಶ್ವರ ರಥೋತ್ಸವ, ಅನ್ನಸಂತರ್ಪಣೆ
ಕೆ.ಎಂ.ದೊಡ್ಡಿ:ಸಮೀಪದ ಸಬ್ಬನಹಳ್ಳಿಯಲ್ಲಿ ಶ್ರೀಸೀತಾಳಲಿಂಗೇಶ್ವರ ರಥೋತ್ಸವ ಮತ್ತು ಅನ್ನಸಂತರ್ಪಣೆ ಯಶಸ್ವಿಯಾಗಿ ನಡೆಯಿತು.
ಮಾ.4ರಿಂದಲೇ ಬಂಡಿ ಉತ್ಸವ, ಹೋಮ, ಕಾಳಮ್ಮ ದೇವಿಗೆ ಕೊಂಡೋತ್ಸವ, ಮಂಚಮ್ಮ ಮತ್ತು ಕಾಳಮ್ಮ ದೇವಿ ಪೂಜೆ, ಭಕ್ತರಿಂದ ಬಾಯಿ ಬೀಗ ಉತ್ಸವ, ರಾತ್ರಿ ಮಡೆ ಉತ್ಸವ ಸಹಿತ ದೇವರ ಪೂಜೆಗಳ ಮೆರವಣಿಗೆ ಹಾಗೂ ಪೂಜಾ ಕುಣಿತ ವಿಜೃಂಭಣೆಯಿಂದ ನಡೆಯಿತು.ಈ ಶ್ರೀಸೀತಾಳಲಿಂಗೇಶ್ವರಸ್ವಾಮಿಗೆ ಹೋಮ ನೆರವೇರಿಸಲಾಯಿತು. ನಂತರ ಬಾಯಿಬೀಗ, ದೇವರ ಪೂಜೆ ಮೆರವಣಿಗೆ ಸಹಿತ ಸ್ವಾಮಿಯ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು. ನಂತರ ನಡೆದ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಮಂದಿ ರಾಗಿಮುದ್ದೆ, ಅವರೆಕಾಳು, ಅನ್ನಸಾಂಬಾರ್ ಪ್ರಸಾದ ಸೇವಿಸಿದರು. ಶನಿವಾರ ಶ್ರೀಪಟ್ಟಲದಮ್ಮ ದೇವಿಗೆ ಮಡೆ ಆರತಿ ಹಾಗೂ ಪೂಜೆ ಜರುಗಿತು.
ಪತ್ರಿಕಾ ವಿತರಕ ದಿ.ಶಿವರಾಂ ಕುಟುಂಬಕ್ಕೆ ಆರ್ಥಿಕ ಸಹಾಯಮಂಡ್ಯ:
ಅಕಾಲಿಕವಾಗಿ ನಿಧನರಾದ ದಿ.ಎ.ಬಿ.ಶಿವರಾಮು ಕುಟುಂಬದವರಿಗೆ ಜಿಲ್ಲಾ ಪತ್ರಿಕಾ ವಿತರಕರು ಆರ್ಥಿಕ ಸಹಾಯ ಮಾಡಿದರು.ನಗರದ ಶಂಕರಪುರದಲ್ಲಿರುವ ದಿ.ಶಿವರಾಂ ಮನೆಗೆ ತೆರಳಿದ ನಗರದ ಪತ್ರಿಕಾ ವಿತಕರು ಶಿವರಾಮು ಅವರ ತಾಯಿ ಲಕ್ಷ್ಮಮ್ಮ ಅವರಿಗೆ ವಿತರಕರು ಸಂಗ್ರಹಿಸಿದ್ದ ಹಣವನ್ನು ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಕಳೆದ 20 ವರ್ಷಗಳಿಂದ ನಗರದಲ್ಲಿ ಪತ್ರಿಕಾ ವಿತಕರಾಗಿ ಸೇವೆ ಸಲ್ಲಿಸಿದ್ದ ಶಿವರಾಮು ಕೆಲಸದ ನಿಮಿತ್ತ ಮೈಸೂರಿಗೆ ತೆರಳಿದ್ದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಪತ್ರಿಕಾ ವಿತಕರು ಮೃತರ ತಾಯಿಗೆ ನೆರವು ನೀಡಿ ಮಾನವೀಯತೆ ಮೆರೆದರು.ಈ ವೇಳೆ ಜಿಲ್ಲಾ ಪತ್ರಿಕಾ ವಿತರಕರು ಹಾಗೂ ನಗರ ಪತ್ರಿಕಾ ವಿತರಕರ ಸಂಘದ ಕೆಂಪಯ್ಯ, ಶ್ರೀಧರ್, ಸಂತೋಷ್, ವೆಂಕಟೇಶ್, ಲೋಕೇಶ್, ಗೋವಿಂದಸ್ವಾಮಿ, ಗಿರೀಶ್, ಆನಂದ್ ಸೇರಿದಂತೆ ಹಲವರು ಹಾಜರಿದ್ದರು.