ಸೋಮರಡ್ಡಿ ಅಳವಂಡಿ ಕೊಪ್ಪಳ
ತುಂಗಭದ್ರಾ ಬೋರ್ಡ್ ಮಾಡಿದ ಸಣ್ಣತನದಿಂದ ಈಗ ಸಮಸ್ಯೆ ಎದುರಾಗಿದ್ದು, ತಜ್ಞರ ಸಮಿತಿ ಚೈನ್ ಸಹ ಬದಲಾಯಿಸಿ, ನೂತನ ಚೈನ್ ಅಳವಡಿಸುವಂತೆ ಸೂಚಿಸಿದ್ದರಿಂದ ಚೈನ್ ಅಳವಡಿಸುವುದಕ್ಕೂ ಮುಂದಾಗಿದೆ.
ಆಗಿದ್ದೇನು:ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಿತ್ತು ದೊಡ್ಡ ಅನಾಹುತವೇ ನಡೆಯುವಂತಹದ್ದನ್ನು ತಜ್ಞರ ಸಮಿತಿ ನೀರು ಇರುವಾಗಲೇ ಸ್ಟಾಪ್ ಲಾಗ್ ಅಳವಡಿಸಿ, ದುರಂತ ತಪ್ಪಿಸಿದ್ದರು. ಇದಾದ ನಂತರ 33 ಕ್ರಸ್ಟ್ ಗೇಟ್ ಗಳಲ್ಲಿ ಶೇ.50 ಕ್ಕೂ ಅಧಿಕ ಸವೆದಿವೆ. ಅದರಲ್ಲೂ ಅರ್ಧದಷ್ಟು ಶೇ.60-70 ರಷ್ಟು ಸವೆದಿವೆ ಎಂದು ತಜ್ಞರು ವರದಿ ಸಲ್ಲಿಸಿದ್ದರು. ಮೊದಲು ಗಂಭೀರವಾಗಿ ಹಾನಿಯಾಗಿರುವ ಕ್ರಸ್ಟ್ ಗೇಟ್ ಮಾತ್ರ ಬದಲಾಯಿಸಿ, ನಂತರ ಉಳಿದವುಗಳನ್ನು ಹಂತಹಂತವಾಗಿ ಬಲಾಯಿಸಲು ಬೋರ್ಡ್ ಮುಂದಾಯಿತು. ಆದರೆ, ಇದು ಮತ್ತೊಂದು ಅನಾಹುತಕ್ಕೆ ಕಾರಣವಾಗುತ್ತದೆ. ಹೀಗಾಗಿ, ಅಷ್ಟು ಕ್ರಸ್ಟ್ ಗೇಟ್ ಬದಲಾಯಿಸುವಂತೆ ತಜ್ಞರು ಶಿಫಾರಸ್ಸು ಮಾಡಿದ್ದರಿಂದ ಅದರಂತೆ ಅಷ್ಟು ಕ್ರಸ್ಟ್ ಗೇಟ್ ಬಲಾಯಿಸುವ ಕಾರ್ಯ ಪ್ರಾರಂಭಿಸಲಾಗಿದೆ.ಕ್ರಸ್ಟ್ ಗೇಟ್ ಬದಲಾಯಿಸಲು ಮುಂದಾಗಿರುವ ತುಂಗಭದ್ರಾ ಬೋರ್ಡ್ ಅದಕ್ಕೆ ಅಂಟಿಕೊಂಡೇ ಆಪರೇಟ್ ಮಾಡಲು ಇರುವ ಚೈನ್ ಬದಲಾಯಿಸುವದನ್ನು ಟೆಂಡರ್ ನಲ್ಲಿ ಕೈಬಿಟ್ಟಿತು. ಕ್ರಸ್ಟ್ ಗೇಟ್ ಅಳವಡಿಸಲು ₹41 ಕೋಟಿ ಟೆಂಡರ್ ಕರೆದರೂ ಚೈನ್ ಬದಲಾಯಿಸುವ ಗೋಜಿಗೆ ಹೋಗಲಿಲ್ಲ. ಕೇವಲ ಐದಾರು ಕೋಟಿ ಉಳಿಸಲು ಹಳೆಯ ಚೈನ್ ಬಳಕೆ ಮಾಡಿದರಾಯಿತು ಎನ್ನುವ ಸಣ್ಣತನ ಪ್ರದರ್ಶನ ಮಾಡಿತು. ಆದರೆ, ಈಗ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ನಡೆದ ವೇಳೆಯಲ್ಲಿ ಹಳೆಯ ಚೈನ್ ಮೂಲಕ ಆಪರೇಟ್ ಮಾಡುವ ಸಂದರ್ಭ ಅವುಗಳು ಸಹ ಸವೆದಿವೆ ಎನ್ನುವುದನ್ನು ತಜ್ಞರ ಸಮಿತಿ ತುಂಗಭದ್ರಾ ಬೋರ್ಡ್ ಗಮನಕ್ಕೆ ತಂದಿತು. ಈಗ ತುಂಗಭದ್ರಾ ಬೋರ್ಡ್ ಎಚ್ಚೆತ್ತುಕೊಂಡು ಚೈನ್ ಸಹ ಬದಲಾಯಿಸಿ ನೂತನ ಚೈನ್ ಅಳವಡಿಸಲು ಮುಂದಾಗಿದೆ.
ಈಗಾಗಲೇ 33 ಕ್ರಸ್ಟ್ ಗೇಟ್ ಪೈಕಿ 18 ಕ್ರಸ್ಟ್ ಗೇಟ್ ಅಳವಡಿಸಿದ್ದು, ಮಾರ್ಚ್ ಅಂತ್ಯದ ವೇಳೆಗೆ 21 ಕ್ರಸ್ಟ್ ಗೇಟ್ ಅಳವಡಿಸಲಾಗುತ್ತದೆ. ಉಳಿದ ಕ್ರಸ್ಟ್ ಗೇಟ್ ಅಳವಡಿಸಲು ಟೆಂಡರ್ ನಿಯಮದ ಪ್ರಕಾರ ಮೇ ಅಂತ್ಯದವರೆಗೂ ಸಮಯವಕಾಶವಿದೆಯಾದರೂ ಅಷ್ಟರೊಳಗಾಗಿಯೇ ಅಳವಡಿಸಿ ಅದರೊಟ್ಟಿಗೆ ಹೊಸ ಚೈನ್ ಅಳವಡಿಸುವ ಕಾರ್ಯ ಆಗಬೇಕಾಗಿದೆ. ಇದನ್ನೇ ಮೊದಲೇ ಮಾಡಿದ್ದರೆ ಕ್ರಸ್ಟ್ ಗೇಟ್ ಅಳವಡಿಸುವ ವೇಳೆಯಲ್ಲಿಯೇ ಚೈನ್ ಅಳವಡಿಸುವ ಕಾರ್ಯವೂ ಒಟ್ಟೊಟ್ಟಿಗೆ ಆಗುತ್ತಿತ್ತು ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಎಂಜನಿಯರ್.
ಕ್ರಸ್ಟ್ ಗೇಟ್ ಅಳವಡಿಸುವ ವೇಳೆಯಲ್ಲಿ ಚೈನ್ ಅಳವಡಿಸುವುದಕ್ಕೂ ಯೋಜನೆ ರೂಪಿಸಿಕೊಳ್ಳಬೇಕಾಗಿತ್ತು. ಹಾಗೆ ಮಾಡಿಲ್ಲ, ಆದರೂ ಈಗಾಗಲೇ ಕ್ರಮವಹಿಸಿ, ₹5.8 ಕೋಟಿ ವೆಚ್ಚದಲ್ಲಿ ನೂತನ ಚೈನ್ ಸಿದ್ಧ ಮಾಡುವ ಟೆಂಡರ್ ಮಾಡಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು ತಿಳಿಸಿದ್ದಾರೆ.