ಕಲಘಟಗಿ ಬಳಿ ಟ್ಯಾಂಕರ್‌ನಿಂದ ಭಾರೀ ಪ್ರಮಾಣದಲ್ಲಿ ಗ್ಯಾಸ್‌ ಸೋರಿಕೆ

KannadaprabhaNewsNetwork |  
Published : Mar 22, 2026, 02:00 AM IST
ಗ್ಯಾಸ್‌ ಟ್ಯಾಂಕರ್‌ನಿಂದ ಬೇರೆ ಟ್ಯಾಂಕರ್‌ಗೆ ವರ್ಗಾಯಿಸಲಾಯಿತು. | Kannada Prabha

ಸಾರಾಂಶ

ಕಲಘಟಗಿ ತಾಲೂಕಿನ ತಂಬೂರ ಕ್ರಾಸ್‌ ಬಳಿ ಹುಬ್ಬಳ್ಳಿ- ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಮೇಲೆ ಗ್ಯಾಸ್‌ ತುಂಬಿರುವ ಟ್ಯಾಂಕರ್‌ನಿಂದ ಗ್ಯಾಸ್‌ ಸೋರಿಕೆಯಾಗಿದೆ. ಅದರಿಂದ ಹುಬ್ಬಳ್ಳಿ-ಅಂಕೋಲಾ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಉಂಟಾಯಿತು.

ಕಲಘಟಗಿ: ಮೊದಲೇ ಎಲ್‌ಪಿಜಿ ಕೊರತೆಯಿಂದ ಇಡೀ ದೇಶವೇ ತತ್ತರಿಸುತ್ತಿದೆ. ಇದರ ಬೆನ್ನಲ್ಲೇ ಕಲಘಟಗಿ ತಾಲೂಕಿನ ತಂಬೂರ ಕ್ರಾಸ್‌ ಬಳಿ ಹುಬ್ಬಳ್ಳಿ- ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಮೇಲೆ ಗ್ಯಾಸ್‌ ತುಂಬಿರುವ ಟ್ಯಾಂಕರ್‌ನಿಂದ ಗ್ಯಾಸ್‌ ಸೋರಿಕೆಯಾಗಿದೆ. ಪೊಲೀಸ್‌ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಟ್ಯಾಂಕರ್‌ನಲ್ಲಿನ ಗ್ಯಾಸ್‌ನ್ನು ಬೇರೆ ಟ್ಯಾಂಕರ್‌ಗೆ ವರ್ಗಾಯಿಸಿ ಸುರಕ್ಷಿತವಾಗಿ ಮತ್ತೆ ಸಾಗಿಸಲಾಗಿದೆ.

ಆಗಿದ್ದೇನು?: ಮಂಗಳೂರಿನಿಂದ ಹೈದರಾಬಾದ್‌ಗೆ ಟ್ಯಾಂಕರ್‌ ಮೂಲಕ 18 ಟನ್‌ ಎಲ್‌ಪಿಜಿ ಗ್ಯಾಸ್‌ನ್ನು ಶುಕ್ರವಾರ ಸಾಗಿಸಲಾಗುತ್ತಿತ್ತು. ಶುಕ್ರವಾರ ರಾತ್ರಿ ತಂಬೂರ ಕ್ರಾಸ್‌ ಬಳಿ ಟ್ಯಾಂಕರ್‌ನಿಂದ ಗ್ಯಾಸ್‌ ಸೋರಿಕೆ ಶುರುವಾಗಿದೆ. ಕೂಡಲೇ ಟ್ಯಾಂಕರ್‌ನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಯಿತು. ಜತೆಗೆ ಆ ಮಾರ್ಗದ ಎಲ್ಲ ವಾಹನ ಸಂಚಾರ ಸ್ಥಗಿತಗೊಳಿಸಲಾಯಿತು.

ಕಲಘಟಗಿ - ಯಲ್ಲಾಪುರ ರಸ್ತೆ ಬಂದ್‌ ಮಾಡಿ, ಹುಬ್ಬಳ್ಳಿ- ತಡಸ ಕ್ರಾಸ್‌ ಮೂಲಕ ಮುಂಡಗೋಡ ಮಾರ್ಗ ಹಾಗೂ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಾಹನಗಳನ್ನು ಹಳಿಯಾಳ ಕ್ರಾಸ್‌ನಿಂದ ಧಾರವಾಡ ಅಲ್ಲಿಂದ ಹುಬ್ಬಳ್ಳಿ ಮಾರ್ಗಕ್ಕೆ ಬದಲಾಯಿಸಲಾಯಿತು.

ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗೆ ಬೆಳಗ್ಗೆ 7 ಗಂಟೆ ವರೆಗೆ ಸೋರಿಕೆಯಾಗಿದೆ. ನಂತರ ಗ್ಯಾಸ್‌ ವರ್ಗಾವಣೆ ಕಾರ್ಯಾಚಾರಣೆ ಆರಂಭಿಸಲಾಯಿತು. ಅಗ್ನಿಶಾಮಕ ಹಾಗೂ ಪೊಲೀಸ್‌ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟು ಪರಿಸ್ಥಿತಿ ನಿಭಾಯಿಸಿದರು. ಮಧ್ಯಾಹ್ನ 3 ಗಂಟೆ ವರೆಗೆ ಸರಿಸುಮಾರು 8 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಗ್ಯಾಸ್‌ನ್ನು ಬೇರೆ ಟ್ಯಾಂಕರ್‌ಗೆ ವರ್ಗಾಯಿಸಲಾಯಿತು.

ಸಕಾಲಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸ್‌ ಮುನ್ನೆಚ್ಚರಿಕೆ ತೆಗೆದುಕೊಂಡು ಮಾರ್ಗ ಬದಲಾವಣೆ ಹಾಗೂ ಗ್ಯಾಸ್‌ ಬೇರೆ ಟ್ಯಾಂಕರ್‌ಗೆ ಭರ್ತಿ ಮಾಡದಿದ್ದಲ್ಲಿ ಭಾರೀ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಸಂಕಲ್ಪ
ಅರಿವಿನ ದಾರಿಯಲ್ಲಿ ಮುನ್ನಡೆಯಲು ಗುರುವಿನ ಮಾರ್ಗದರ್ಶನ ಅವಶ್ಯ