ಗ್ಯಾರಂಟಿ ಜೊತೆಗೆ ಕಾಂಗ್ರೆಸ್ ಸರ್ಕಾರದಿಂದ ಸಾವಿನ ಗ್ಯಾರಂಟಿ: ಹೇಮಲತಾ ನಾಯಕ

KannadaprabhaNewsNetwork |  
Published : Jan 02, 2025, 12:31 AM IST
31ಕೆಪಿಎಲ್21 ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ವಿಪ ಸದಸ್ಯೆ ಹೇಮಲತಾ ನಾಯಕ | Kannada Prabha

ಸಾರಾಂಶ

ರಾಜ್ಯದಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ಕಿರುಕುಳದಿಂದ ಸಾವನ್ನಪ್ಪುತ್ತಿದ್ದರೇ ಬಾಣಂತಿಯರು ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ರಾಜ್ಯದಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ಕಿರುಕುಳದಿಂದ ಸಾವನ್ನಪ್ಪುತ್ತಿದ್ದರೇ ಬಾಣಂತಿಯರು ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ, ಗ್ಯಾರಂಟಿ ಯೋಜನೆಯನ್ನು ನೀಡಿರುವ ಕಾಂಗ್ರೆಸ್ ಸರ್ಕಾರ ಜೊತೆಗೆ ಸಾವಿನ ಗ್ಯಾರಂಟಿಯನ್ನು ನೀಡಿದೆ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಆರೋಪಿಸಿದ್ದಾರೆ.

ನಗರದ ಮೀಡಿಯಾ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು.

ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳನ್ನು ಮುಚ್ಚಿ ಹಾಕಲು ಹೊರಟಿದ್ದಾರೆ. ಐವಿ ದ್ರಾವಣದಿಂದ ಸಾವನ್ನಪ್ಪಿದ್ದಾರೆ. ಆದರೂ ಈ ದ್ರಾವಣ ಪೂರೈಕೆ ಮಾಡುವ ಕಂಪನಿಯ ಮಾಹಿತಿ ನೀಡುತ್ತಿಲ್ಲ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

ಸಿಸೇರಿಯನ್ ಆದವರು ಮಾತ್ರ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರಲ್ಲಿ ರಕ್ತಹಿನತೆ, ನಿಶಕ್ತಿ ಕಾರಣ ಎಂದು ಹೇಳಿದ್ದಾರೆ. ಆದರೆ, ವಾಸ್ತವದಲ್ಲಿ ವೈದ್ಯರ ನಿರ್ಲಕ್ಷ್ಯ ಹಾಗೂ ಕಳಪೆ ಔಷಧಿಯಿಂದ ಸಾವನ್ನಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಿಂದ ಬರುವ ಔಷಧಿಗಳ ಸಂಗ್ರಹದ ಬಗ್ಗೆ ಅನುಮಾನ ಬರುತ್ತಿದೆ. ಇನ್ನು ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳೇ ಪರೀಕ್ಷೆ ಮಾಡುತ್ತಿದ್ದಾರೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯ ಇದರಲ್ಲಿ ಎದ್ದು ಕಾಣುತ್ತಿದೆ ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಸಂಪೂರ್ಣವಾಗಿ ಹದಗೆಟ್ಟಿದೆ. ಗೃಹಲಕ್ಷ್ಮಿ ಹಣ ನೀಡುತ್ತೇವೆ ಎನ್ನುವ ಸರ್ಕಾರ ಇಲ್ಲಿ ಬಾಣಂತಿಯರ ಸಾವಿನ ಗ್ಯಾರಂಟಿ ನೀಡುತ್ತಿದೆ. ಬಾಣಂತಿಯರ ಸಾವಿನ ಬಗ್ಗೆ ಸಿಎಂ ಮಾತನಾಡುತ್ತಿಲ್ಲ. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಸಾಂತ್ವನ ಹೇಳುತ್ತಿಲ್ಲ. ಖಾಸಗಿ ಆಸ್ಪತ್ರೆಯಲ್ಲಿಯೂ ಸಾವುಗಳಾಗುತ್ತಿವೆ. ಅವರ ಮೇಲೆಯೂ ಕ್ರಮ ವಹಿಸಲು ಸರ್ಕಾರ ಕಾಯ್ದೆ ಮಾಡಬೇಕು ಎಂದು ಆಗ್ರಹಿಸಿದರು.

ಬೀದರನಲ್ಲಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ ಪಾಂಚಾಳರ ಕುಟುಂಬದವರು ದೂರು ನೀಡಲು ಹೋದರೂ ಕೇಸ್ ಪಡೆಯದೇ ತತಾಯಿಸಿದ್ದಾರೆ. ಏಳು ಪುಟಗಳ ಡೆತ್ ನೋಟ್ ಬರೆದಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದರು.

ಈ ನಡುವೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾದ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಎಷ್ಟು ಜನ ಬರುತ್ತಾರೆ ಬರಲಿ, ನಾನು ರಾಜೀನಾಮೆ ನೀಡುವುದಿಲ್ಲ ಎಂದು ಲಜ್ಜೆಗೆಟ್ಟು ಹೇಳುತ್ತಾರೆ.

ಅಂಬೇಡ್ಕರ್ ಅಪಮಾನ ಮಾಡಿದ್ದು ಕಾಂಗ್ರೆಸ್:

ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಬದುಕಿದ್ದಾಗ ಕಾಂಗ್ರೆಸ್ ನಾಯಕರು ಸರಿಯಾದ ಗೌರವ ನೀಡಲಿಲ್ಲ. ಅವರಿಗೆ ಅಪಮಾನ ಮಾಡಿದ್ದಾರೆ. ಈಗ ಅವರ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಾರೆ. ಇದನ್ನು ಗೃಹ ಸಚಿವ ಅಮಿತ್ ಶಾ ಅವರು ಹೇಳಿದರೇ ಅದನ್ನು ತಪ್ಪಾಗಿ ಅರ್ಥೈಸುತ್ತಾರೆ ಎಂದು ಬಿಜೆಪಿ ಎಸ್ಸಿ ಘಟಕದ ಜಿಲ್ಲಾ ಅಧ್ಯಕ್ಷ ಗಣೇಶ ಹೊರತಟ್ನಾಳ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಷಾ ರು ಬಾಬಾಸಾಹೇಬರಿಗೆ ಅವಮಾನ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಸುಳ್ಳು ಆರೋಪ ಮಾಡಿದ್ದಾರೆ. ಅಂಬೇಡ್ಕರ್ ಚಿಂತನೆಯನ್ನು ಬಿಜೆಪಿ ಅನುಷ್ಠಾನ ಮಾಡುತ್ತಿದೆ. ಅವರಿಗೆ ಭಾರತ ರತ್ನಿ ನೀಡಿ, ಗೌರವಿಸಿದ್ದು ಬಿಜೆಪಿ. ಅವರ ರಾಜಕೀಯ ಅವಧಿಯಲ್ಲಿ ಕಾಂಗ್ರೆಸ್ ಸಾಕಷ್ಟು ಅಡೆತಡೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಯೋಜನೆಗಳಿಗೆ ಗಾಂಧಿ ಕುಟುಂಬದ ಹೆಸರು ಇಟ್ಟರೇ ಹೊರತು ಅಂಬೇಡ್ಕರ್ ಅವರ ಹೆಸರು ಇಡಲಿಲ್ಲ. ಈಗ ಅಂಬೇಡ್ಕರ್ ಅವರ ಹೆಸರು ಹೇಳುವ ನೈತಿಕತೆ ಕಾಂಗ್ರೆಸ್‌ಗಿಲ್ಲ ಎಂದರು.

ನಗರಸಭೆಯ ಸದಸ್ಯ ಸೋಮಣ್ಣ ಹಳ್ಳಿ, ಮಹಿಳಾ ಘಟಕದ ವಾಣಿಶ್ರೀ ಮಠದ, ಜಯಶ್ರೀ ಗೊಂಡಬಾಳ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ