ಮಡಿಕೇರಿ ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ಸ್ಥಳ ಗುರುತು

KannadaprabhaNewsNetwork |  
Published : Jan 18, 2024, 02:01 AM IST
ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ಸ್ಥಳ | Kannada Prabha

ಸಾರಾಂಶ

ಮಡಿಕೇರಿಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ರಾಜಾಸೀಟ್‌ನ ಒಳಭಾಗದಲ್ಲಿ ಈ ಹಿಂದೆ ವ್ಯಾಪಾರಕ್ಕೆ ಅವಕಾಶ ಇತ್ತು. ಈ ವೇಳೆ ವರ್ತಕ ಹಾಗೂ ಸೆಕ್ಯೂರಿಟಿ ನಡುವೆ ನಡೆದ ಘರ್ಷಣೆಯಿಂದ ಎಲ್ಲಾ ವರ್ತಕರನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು. ಇದೀಗ ಇವರಿಗೆ ಪರ್ಯಾಯವಾಗಿ ಮಡಿಕೇರಿಯ ವಿವಿಧ ಕಡೆಗಳಲ್ಲಿ ವ್ಯಾಪಾರಕ್ಕೆ ಜಾಗ ಗುರುತು ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ರಾಜಾಸೀಟ್ ಹೊರಭಾಗದಲ್ಲಿ ಅಂಗಡಿಯಿಟ್ಟು ವ್ಯಾಪಾರ ನಡೆಸುವವರ ಸ್ಥಳಾಂತರಕ್ಕೆ ನಗರಸಭೆ ಮುಂದಾಗಿದ್ದು, ಮಡಿಕೇರಿಯ ವಿವಿಧ ಕಡೆಗಳಲ್ಲಿ ವ್ಯಾಪಾರಕ್ಕೆ ಜಾಗ ಗುರುತು ಮಾಡಲಾಗಿದೆ.ಮಡಿಕೇರಿಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ರಾಜಾಸೀಟ್‌ನ ಒಳಭಾಗದಲ್ಲಿ ಈ ಹಿಂದೆ ವ್ಯಾಪಾರಕ್ಕೆ ಅವಕಾಶ ಇತ್ತು. ಈ ವೇಳೆ ವರ್ತಕ ಹಾಗೂ ಸೆಕ್ಯೂರಿಟಿ ನಡುವೆ ನಡೆದ ಘರ್ಷಣೆಯಿಂದ ಎಲ್ಲಾ ವರ್ತಕರನ್ನು ಅಲ್ಲಿಂದ ತೆರವುಗೊಳಿಸಲಾಯ್ತು.

ಕೆಲ ಸಮಯ ಕೂರ್ಗ್ ವಿಲೇಜ್ ಎದುರು ಅಂಗಡಿ ಹಾಕಿಕೊಂಡಿದ್ದ ವ್ಯಾಪಾರಿಗಳು ಮಡಿಕೇರಿ ಶಾಸಕ ಮಂತರ್ ಗೌಡ ಅವರ ಭರವಸೆ ಹಿನ್ನೆಲೆ ದಸರಾ ಸಮಯದಲ್ಲಿ ರಾಜಾಸೀಟ್ ಆವರಣದಲ್ಲಿ ಮತ್ತೆ ಅಂಗಡಿ ಹಾಕಿಕೊಂಡರು. ಬಳಿಕ ನಗರಸಭೆ ಅಧಿಕಾರಿಗಳು ಅಂಗಡಿ ತೆರವಿಗೆ ಮುಂದಾಯ್ತು. ಈ ವೇಳೆ ವ್ಯಾಪಾರಿಗಳು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆದಿತ್ತು. ಬಳಿಕ ಜಾಗ ಖಾಲಿ ಮಾಡಿದ ವ್ಯಾಪಾರಿಗಳು ನಂತರದ ದಿನದಲ್ಲಿ ಮತ್ತೆ ಅಲ್ಲೇ ವ್ಯಾಪಾರಕ್ಕೆ ಮುಂದಾದರು. ರಾಜಾಸೀಟ್ ಹಾಗೂ ಕೂರ್ಗ್ ವಿಲೇಜ್ ಬಳಿಯ ಬೀದಿಬದಿ ಅಂಗಡಿಗಳಿಂದ ವಾಹನ ಸಂಚಾರ, ನಿಲುಗಡೆ, ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗ್ತಿರುವ ಬಗ್ಗೆ ನಗರಸಭೆಗೆ ದೂರು ಬಂದಿತ್ತು. ಈ ಹಿನ್ನೆಲೆ ಸ್ಥಳಾಂತರಕ್ಕೆ ಮುಂದಾಗಿರುವುದಾಗಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದ್ದರು. ಇದೇ ವಿಚಾರವಾಗಿ ಬೀದಿಬದಿ ವ್ಯಾಪಾರಿಗಳ ಸಂಘದೊಂದಿಗೆ ಸಭೆ ನಡೆಸಿ ಮನವೊಲಿಕೆಗೆ ಪ್ರಯತ್ನಿಸಿದ್ದರೂ ಎಲ್ಲರ ಒಮ್ಮತ ಸಿಕ್ಕಿಲ್ಲ. ರಾಜಾಸೀಟ್ ಸುತ್ತಮುತ್ತ ಎಲ್ಲಾದ್ರೂ ಜಾಗ ಕೊಡಿ ಅಂತಾ ಕೇಳ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳ ಸ್ಥಳಾಂತರಕ್ಕೆ ನಗರಸಭೆಯ ಕೆಲ ಸದಸ್ಯರೂ ವಿರೋಧವಿದ್ದಾರೆ ಎನ್ನಲಾಗ್ತಿದೆ. ಬೀದಿಬದಿ ವ್ಯಾಪಾರಿಗಳು ಮಾತ್ರ ರಾಜಾಸೀಟ್ ಬಿಟ್ಟು ಎಲ್ಲಿಗೂ ಬರಲ್ಲ ಅಂತಾ ಪಟ್ಟು ಹಿಡಿದು ಕುಳಿತಿದ್ದಾರೆ. ಆದರೆ ನಗರಸಭೆಯು ಈಗಾಗಲೇ ಪರ್ಯಾಯ ಜಾಗ ಗುರುತಿಸಿದೆ. ನಗರಸಭೆ ಬಳಿಯ ಕೆಇಬಿ ರಸ್ತೆ, ನಗರ ಪೊಲೀಸ್ ಠಾಣೆ ರಸ್ತೆ ಹಾಗೂ ಅಜ್ಜಮಾಡ ದೇವಯ್ಯ ವೃತ್ತ ಬಳಿಯ ಖಾಲಿ ಜಾಗದಲ್ಲಿ ಸ್ಥಳ ಗುರುತಿಸಲಾಗಿದೆ. ನಗರಸಭೆಯಿಂದ ಇಂಟರ್‌ಲಾಕ್ ಅಳವಡಿಸಿ, ಶೆಡ್ ನಿರ್ಮಿಸಿ ಕೊಡುವುದಾಗಿ ಅಧ್ಯಕ್ಷೆ ಅನಿತಾ ಪೂವಯ್ಯ ಹೇಳಿದ್ದಾರೆ.ಈ ಹಿಂದೆ ಇದ್ದಂತೆ ರಾಜಾಸೀಟ್ ಒಳಭಾಗದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲು ಮನವಿ ಮಾಡಿದ್ದರೂ ತೋಟಗಾರಿಕೆ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ. ಬಾಕಿ ಇರುವ ಕೆಲಸ ಕಾರ್ಯಗಳನ್ನು ಮುಗಿಸಿ ಮುಕ್ತ ಹರಾಜು ಮೂಲಕ ಬಾಡಿಗೆಗೆ ನೀಡಲು ಸಿದ್ದತೆ ಮಾಡಿಕೊಳ್ತಿದೆ. ಈ ನಡುವೆ ಬಹುತೇಕರ ವಿರೋಧದ ನಡುವೆಯೂ ವಿವಿಧ ಕಡೆಗಳಲ್ಲಿ ವ್ಯಾಪಾರಿಗಳಿಗೆ ನಗರಸಭೆ ಜಾಗ ಮೀಸಲಿಟ್ಟಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ