ಗಡುವು ಮುಗಿದರೂ ಅಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಇಲ್ಲ

ಬೆಂಗಳೂರು ನಗರದಲ್ಲಿ ಇರುವ ಅಧಿಕೃತ ಶಾಲೆಗಳ ಪಟ್ಟಿ ಬಿಡುಗಡೆಗೆ ಸರ್ಕಾರ ಸೂಚಿಸಿದ್ದರೂ, ಬಿಇಒಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಪೋಷಕರಲ್ಲಿ ಗೊಂದಲ ಉಳಿದಿದೆ.

KannadaprabhaNewsNetwork | Published : Apr 24, 2024 8:33 PM IST / Updated: Apr 25 2024, 10:51 AM IST

 ಬೆಂಗಳೂರು:  ಶಿಕ್ಷಣ ಇಲಾಖೆ ನೀಡಿದ್ದ ಗಡುವು ಮುಗಿದರೂ ಬೆಂಗಳೂರು ನಗರ ವ್ಯಾಪ್ತಿಯ ಬಹುತೇಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಅಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸುವಲ್ಲಿ ವಿಫಲವಾಗಿದ್ದಾರೆ.

ಇಲಾಖೆ ನೀಡಿದ ಗಡುವಿನ ಪ್ರಕಾರ, ಏ.24ರಂದು ರಾಜ್ಯದ ಎಲ್ಲ ಜಿಲ್ಲೆಗಳ ಬಿಇಒಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕೃತ ಶಾಲೆಗಳ ಪಟ್ಟಿಯನ್ನು ತಮ್ಮ ಕಚೇರಿಯಲ್ಲಿ ಪ್ರಕಟಿಸಬೇಕಿತ್ತು. ಆದರೆ, ಬುಧವಾರ ಸಂಜೆಯವರೆಗೂ ಬೆಂಗಳೂರಿನ ಯಾವುದೇ ಬಿಇಒ ಕಚೇರಿಯಲ್ಲಿ ಅಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸಿದ್ದು ಕಂಡುಬಂದಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಇದರಿಂದ ಪೋಷಕರು ತಮ್ಮ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭಿಸಲು ಯಾವುದು ಅಧಿಕೃತ ಅಥವಾ ಅನಧಿಕೃತ ಶಾಲೆ ಎಂದು ತಿಳಿಯಲು ಇನ್ನಷ್ಟು ದಿನ ಕಾಯುವಂತಾಗಿದೆ.

ಈ ಆರೋಪ ಸಂಬಂಧ ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ 9 ಬಿಇಒಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ, ಕರೆ ಸ್ವೀಕರಿಸಿದ ಕೆಲವು ಬಿಇಒಗಳು ಅಧಿಕೃತ ಪಟ್ಟಿ ತಯಾರಿಸುತ್ತಿರುವುದಾಗಿ ಹೇಳಿದರೆ, ಇನ್ನು ಕೆಲವರು ಚುನಾವಣಾ ಕಾರ್ಯದ ಹಿನ್ನೆಲೆಯಲ್ಲಿ ಪ್ರಕ್ರಿಯೆ ವಿಳಂಬವಾಗಿದೆ ಎಂದು ಹೇಳಿದರು. ಮತ್ತೆ ಕೆಲವು ಪಟ್ಟಿ ತಯಾರಾಗಿದೆ ಅಧಿಕೃತವಾಗಿ ಪ್ರಕಟಿಸುವ ಮೊದಲು ಇಲಾಖಾ ಆಯುಕ್ತರ ಕಚೇರಿಗೆ ಕಳುಹಿಸಿ ಅಲ್ಲಿ ಅನುಮೋದನೆ ಪಡೆದು ನಂತರ ಪ್ರಕಟಿಸುವುದಾಗಿ ಹೇಳಿದರು. ಇಬ್ಬರು ಬಿಇಒಗಳು ದೂರವಾಣಿ ಕರೆಯನ್ನೇ ಸ್ವೀಕರಿಸಲಿಲ್ಲ.

ಆಯುಕ್ತರ ಆದೇಶವೇನಿತ್ತು?

ಬಿಇಒಗಳು ತಮ್ಮ ವ್ಯಾಪ್ತಿಯ ಶಾಲೆಗಳ ಮಾಹಿತಿ ಪರಿಶೀಲಿಸಿ ಏ.8ರಿಂದ 10ರೊಳಗೆ ಪರಿಶೀಲಿಸಿ ಇಲಾಖೆಯ ಸ್ಯಾಟ್ಸ್‌ ತಂತ್ರಾಂಶದಲ್ಲಿ ದಾಖಲಿಸಬೇಕು. ನಂತರ ಅಧಿಕೃತ ಶಾಲೆಗಳ ಕರಡು ಪಟ್ಟಿಯನ್ನು ಏ.12ಕ್ಕೆ ಪ್ರಕಟಿಸಿ ಏ.19ರವರೆಗೆ ಆಕ್ಷೇಪಗಳನ್ನು ಸ್ವೀಕರಿಸಬೇಕು. ಶಾಲೆಗಳಿಂದ ಬಂದ ಆಕ್ಷೇಪಣೆಗಳನ್ನು ಏ.22ರೊಳಗೆ ಇತ್ಯರ್ಥಪಡಿಸಬೇಕು. ಬಳಿಕ ಅಧಿಕೃತ ಶಾಲೆಗಳ ಅಂತಿಮ ಪಟ್ಟಿಯನ್ನು ಏ.24 ರಂದು ತಮ್ಮ ಕಚೇರಿ ಆವರಣದಲ್ಲಿ ಪ್ರಕಟಿಸಬೇಕು. ಏ.25ರಂದು ಶಾಲಾ ಆಡಳಿತ ಮಂಡಳಿಗಳು/ ಶಾಲಾ ಮುಖ್ಯಸ್ಥರು ಕೂಡ ತಮ್ಮ ಶಾಲೆಯ ಸೂಚನ ಫಲಕದಲ್ಲಿ ಶಾಲೆಯ ನೋಂದಣಿ, ಮಾನ್ಯತೆ ನವೀಕರಣ ಪತ್ರ ಪ್ರಕಟಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತೆ ಬಿ. ಬಿ. ಕಾವೇರಿ ಅವರು ಏ.8ರಂದು ಸುತ್ತೋಲೆ ಹೊರಟಿಸಿದ್ದರು.

Share this article